Asianet Suvarna News Asianet Suvarna News

ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಆಗುತ್ತಾ ಇಲ್ಲಿ ಲಾಭ?

ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಿದ್ದಾಜಿದ್ದಿಯ ಹೋರಾಟದಲ್ಲಿ ತೊಡಗಿವೆ. ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆಯೇ ಎರಡು ಪಕ್ಷಗಳ ಒಡ್ಡೋಲಗವೇ ಬಳ್ಳಾರಿಗೆ ಬಂದಿಳಿದಿದ್ದು, ಪೈಪೋಟಿಯಂತೆ ಪ್ರಚಾರದ ಅಬ್ಬರ ಎಲ್ಲೆಡೆ ಕಂಡು ಬಂದಿದೆ. 

Congress BJP Tough Fight In Bellary By Election
Author
Bengaluru, First Published Oct 29, 2018, 10:54 AM IST

ಬಳ್ಳಾರಿ : ಒಂದು ಕಾಲದಲ್ಲಿ ಅಕ್ರಮ ಗಣಿಗಾರಿಕೆಗೆ ಹೆಸರಾಗಿದ್ದ ಬಳ್ಳಾರಿಯಲ್ಲಿ ಈಗ ಅದರ ಧೂಳೇ ಅಬ್ಬರ ಸೃಷ್ಟಿ ಮಾಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಿದ್ದಾಜಿದ್ದಿಯ ಹೋರಾಟದಲ್ಲಿ ತೊಡಗಿವೆ. ತಮ್ಮ ರಾಜೀನಾಮೆಯಿಂದ ಎದುರಾದ  ಉಪಚುನಾವಣೆ ಆಗಿದ್ದರಿಂದ ಮತ್ತು ತಮ್ಮ ಸಹೋದರಿಗೆ ಟಿಕೆಟ್ ನೀಡಿರುವುದರಿಂದ ಬಿಜೆಪಿ ಮುಖಂಡ ಬಿ.ಶ್ರೀರಾಮುಲುಗೆ ಈ ಚುನಾವಣೆ ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಣಮಿ ಸಿದ್ದರೆ, ಅವರ ವಿರುದ್ಧ ಸವಾಲು ಎಸೆದಿರುವ ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೂ ಇದು ಪ್ರತಿಷ್ಠೆಯ ಕಣವಾಗಿದೆ.

ಹೀಗಾಗಿ, ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಇತರೆ ಹಲವು ಕ್ಷೇತ್ರಗಳ ಉಪಚುನಾವಣೆಗೆ ಹೋಲಿಸಿದರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಖದರ್ ಬೇರೆಯೇ ಆಗಿದೆ. ಯಾರೇ ಗೆದ್ದರೂ ಮತಗಳ ಅಂತರ ತೀರಾ ಕಡಮೆ  ಇರಲಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆಯೇ ಎರಡು ಪಕ್ಷಗಳ ಒಡ್ಡೋಲಗವೇ ಬಳ್ಳಾರಿಗೆ ಬಂದಿಳಿದಿದ್ದು, ಪೈಪೋಟಿಯಂತೆ ಪ್ರಚಾರದ ಅಬ್ಬರ ಎಲ್ಲೆಡೆ ಕಂಡು ಬಂದಿದೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವರು, ಶಾಸಕರು ಹಾಗೂ ಪಕ್ಷದ ನಾಯಕರು ಸೇರಿ ಸುಮಾರು 400 ಕ್ಕೂ ಹೆಚ್ಚು  ಮುಖಂಡರು ಜಿಲ್ಲಾದ್ಯಂತ ವಿಸ್ತರಿಸಿಕೊಂಡು ಚುನಾವಣಾ ಪ್ರಚಾರ ಹಾಗೂ ರಾಜಕೀಯ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ ಬಿಜೆಪಿ ಸಹ ಪ್ರಚಾರ ಹಾಗೂ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದಿಲ್ಲ.

ಮೇಲ್ನೋಟಕ್ಕೆ ಕಾಂಗ್ರೆಸ್‌ನ ಅಬ್ಬರದ ಪ್ರಚಾರ ಕಂಡು ಬಂದರೂ ಬಿಜೆಪಿಯ ನಾಯಕ ಬಿ. ಶ್ರೀರಾಮುಲು ಈವರೆಗೆ ಎದುರಿಸಿದ ಚುನಾವಣೆ- ಉಪ ಚುನಾವಣೆಯ ನೆಲೆಯಲ್ಲಿ ತಮ್ಮ ರಾಜಕೀಯ ಅನುಭವದ ತಂತ್ರಗಾರಿಕೆಯನ್ನು ಆರಂಭಿಸಿದ್ದಾರೆ. ಇದಕ್ಕೆ ರಾಜ್ಯ ನಾಯಕರು ಸಾಥ್ ನೀಡಿದ್ದು, ಬಿಜೆಪಿಯ ಮಾಜಿ ಸಚಿವರು, ಶಾಸಕರು, ಹಾಲಿ ಶಾಸಕರು ಸೇರಿ ಅನೇಕರು ಜಿಲ್ಲಾದ್ಯಂತ ಪ್ರಚಾರದ ಪೈಪೋಟಿಯೊಡ್ಡಿದ್ದಾರೆ. ಜಿಲ್ಲೆಯಲ್ಲಿ ಕ್ಷೀಣಿಸಿರುವ ಜೆಡಿಎಸ್ ಸಂಘಟನೆ ಯಿಂದ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಲಾಭವಾಗದು. 

ಪಕ್ಷ ಸಂಘಟನೆಯಿಂದ ಜೆಡಿಎಸ್ ತೀರಾ ಹಿಂದು ಳಿದಿರುವುದೇ ಇದಕ್ಕೆ ಪ್ರಮುಖ ಕಾರಣ. ಕಳೆದ ಐದಾರು ವರ್ಷಗಳ ಹಿಂದೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಇದ್ದರು. ಪಕ್ಷದ ಜಿಲ್ಲಾ ನಾಯಕರ ನಿರ್ಲಕ್ಷ್ಯದಿಂದ ಬೇರೆ ಪಕ್ಷಗಳಿಗೆ ಹರಿದು ಹಂಚಿ ಹೋಗಿದ್ದಾರೆ.

ಜಾತಿ ಅಸ್ತ್ರ ಪ್ರಯೋಗ: ಒಟ್ಟು ಮತದಾರರ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವೀರಶೈವ ಲಿಂಗಾಯತ ಮತದಾರರು ಬಹುಸಂಖ್ಯಾತರು. ಹೀಗಾಗಿ ಈ ಮೂರು ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಈ ಸಮುದಾಯದ ಮತಗಳು ಹಂಚಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಸಾಂಪ್ರದಾಯಿಕವಾಗಿ ಮುಸ್ಲಿಮರು ಕಾಂಗ್ರೆಸ್‌ನತ್ತ ವಾಲಬಹುದು ಎಂಬ ಅಂದಾಜಿದೆ. 

ಕುರುಬರು, ಬ್ರಾಹ್ಮಣ, ಶೆಟ್ಟಿ, ಕ್ಷತ್ರಿಯ, ಉಪ್ಪಾರ, ಬಲಿಜ, ಗಂಗಾಮತಸ್ಥ ಸೇರಿದಂತೆ ಇತರೆ ಸಮಾಜದ ಮತಗಳ ಮೇಲೆ ಎರಡೂ ಪಕ್ಷಗಳ ದೃಷ್ಟಿ ನೆಟ್ಟಿದೆ. ಪ್ರಬಲ ಜಾತಿಗಳ ಮತಗಳು ಎರಡು ಅಭ್ಯರ್ಥಿಗಳಿಗೆ ಹಂಚಿಕೆಯಾಗುವುದರಿಂದ ಇತರೆ ಸಮುದಾಯಗಳ ಮತಗಳನ್ನು ಪಡೆಯುವುದು ಮುಖ್ಯ ಎನಿಸಿದೆ. ವೀರಶೈವ ಲಿಂಗಾಯತರು ಬಿಜೆಪಿಗೆ ಒಲವು ತೋರಿಸ ಬಹುದು ಎಂದು ಪಕ್ಷ ಬಲವಾಗಿ ನಂಬಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಉಪ ಚುನಾವಣೆಯ ಹಣಾಹಣಿಯಲ್ಲಿರುವ ಎರಡು ಪಕ್ಷಗಳು ಜಾತಿ ಅಸ್ತ್ರ ವನ್ನು ದಾಳವಾಗಿ ಪ್ರಯೋಗಿಸಿವೆ. ಅಭ್ಯರ್ಥಿ ಗೆಲವಿಗೆ ಇದು ಹೆಚ್ಚು ಸಹಕಾರಿ ಎಂಬ ನಿಲುವಿಗೆ ಬಂದಂತಿದ್ದು, ಜಾತಿವಾರು ನಾಯಕರು ಆಯಾ ಸಮುದಾಯಗಳ ನಡುವೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. 

ಒಟ್ಟು ಮತದಾರರು 17,08,266
ಪುರುಷರು 8,45,561
ಮಹಿಳೆಯರು 8,54,561
ಇತರೆ 215

ವರದಿ :  ಕೆ.ಎಂ.ಮಂಜುನಾಥ್

Follow Us:
Download App:
  • android
  • ios