ಜೆಡಿಎಸ್ ಗೆ 4 ಷರತ್ತು ವಿಧಿಸಿದ ಕಾಂಗ್ರೆಸ್‌

Congress 4 Conditions To JDS
Highlights

ಸಾಲ ಮನ್ನಾಕ್ಕೂ ಮುನ್ನ ಕಾಂಗ್ರೆಸ್ ಜೆಡಿಎಸ್ ಗೆ ನಾಲ್ಕು  ಷರತ್ತುಗಳನ್ನು ವಿಧಿಸಿದೆ. ಆದರೆ ಜೆಡಿಎಸ್ ಬಜೆಟ್ ನಲ್ಲಿ ಸಾಲ ಮನ್ನಾ ಘೊಷಣೆಯನ್ನು ಪಕ್ಕಾ ಮಾಡಿದೆ. 
 

ಬೆಂಗಳೂರು : ಸಾಲ ಮನ್ನಾಕ್ಕೂ ಮುನ್ನ ಕಾಂಗ್ರೆಸ್ ಜೆಡಿಎಸ್ ಗೆ ನಾಲ್ಕು  ಷರತ್ತುಗಳನ್ನು ವಿಧಿಸಿದೆ. ಆದರೆ ಜೆಡಿಎಸ್ ಬಜೆಟ್ ನಲ್ಲಿ ಸಾಲ ಮನ್ನಾ ಘೊಷಣೆಯನ್ನು ಪಕ್ಕಾ ಮಾಡಿದೆ. 

1. ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿದ್ದ ಎಲ್ಲಾ ಜನಪ್ರಿಯ ಯೋಜನೆಗಳು/ಭಾಗ್ಯಗಳು ಯಥಾವತ್‌ ಜಾರಿಯಾಗಬೇಕು. ಯಾವ ಯೋಜನೆಯನ್ನೂ ಮೊಟಕುಗೊಳಿಸಲು ಬಿಡಬಾರದು.

2. ಹಿಂದಿನ ಸರ್ಕಾರದ ಅವಧಿಯ ಕೊನೆ ಹಂತದಲ್ಲಿ ಕೈಗೊಂಡ ಎಲ್ಲಾ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಮುಂದುವರೆಸಬೇಕು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿರುವ ಯಾವ ಕಾಮಗಾರಿಯನ್ನು ನಿಲ್ಲಿಸಬಾರದು.

3. ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಒಂದು ಜಾತಿ ಅಥವಾ ಜನಾಂಗವನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂಬ ಭಾವನೆ ಮೂಡದಂತೆ ಎಚ್ಚರವಹಿಸಬೇಕು.

4. ಸಾಧ್ಯವಾದಷ್ಟುಹಿಂದಿನ ಸರ್ಕಾರದ ಅಂತಿಮ ಬಜೆಟ್‌ನಲ್ಲಿನ ಯೋಜನೆಗಳಿಗೂ ಈ ಬಾರಿ ಪ್ರಾಧಾನ್ಯತೆ ನೀಡಬೇಕು.

- ಇವು ಈ ಬಾರಿಯ ಬಜೆಟ್‌ನಲ್ಲಿ ಸಾಲ ಮನ್ನಾ ಯೋಜನೆ ಪ್ರಕಟಿಸಲು ಮುಂದಾಗಿರುವ ಜೆಡಿಎಸ್‌ನ ನಿರ್ಧಾರಕ್ಕೆ ತನ್ನ ಸಂಪೂರ್ಣ ಬೆಂಬಲ ನೀಡಲು ಕಾಂಗ್ರೆಸ್‌ ಮುಂದಿಟ್ಟಿರುವ ಷರತ್ತುಗಳು.

ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿ ಸಭೆಗೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಈ ಷರತ್ತುಗಳನ್ನು ಜೆಡಿಎಸ್‌ ಮುಂದಿಡಲು ತೀರ್ಮಾನಿಸಲಾಗಿದೆ. ಅದರಂತೆ ಸಂಜೆ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿಯಲ್ಲಿ ಕಾಂಗ್ರೆಸ್‌ ನಾಯಕರು ಈ ನಿರ್ಧಾರವನ್ನು ಸ್ಪಷ್ಟವಾಗಿ ಜೆಡಿಎಸ್‌ ನಾಯಕರ ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ.

ಅನುದಾನ ಕಡಿತಕ್ಕೆ ವಿರೋಧ:  ಇದಕ್ಕೂ ಮುನ್ನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌, ಎಂ. ವೀರಪ್ಪ ಮೊಯ್ಲಿ, ಡಿ.ಕೆ. ಶಿವಕುಮಾರ್‌, ಆರ್‌.ವಿ. ದೇಶಪಾಂಡೆ ಅವರು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಸಾಲ ಮನ್ನಾದಿಂದ ಉಂಟಾಗುವ ಆರ್ಥಿಕ ಹೊರೆಯ ನೆಪದಲ್ಲಿ ಕಾಂಗ್ರೆಸ್‌ ಸರ್ಕಾರದ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವ ಸಿದ್ಧತೆಯಲ್ಲಿ ಜೆಡಿಎಸ್‌ ನಾಯಕರು ಇದ್ದಾರೆ ಎಂಬ ಮಾಹಿತಿಯಿದೆ. ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಕಡಿತಗೊಳಿಸುವ ಮೂಲಕ ಶೇ. 20ರಷ್ಟುಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಆ ನಾಯರದ್ದು. ಆದರೆ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜನಪ್ರಿಯವಾಗಿದ್ದ ಈ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಕಡಿತಗೊಳಿಸಲು ಅವಕಾಶ ನೀಡಬಾರದು.

ಭಾಗ್ಯ ಸರಣಿ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳು ಅದೇ ಹೆಸರಿನಲ್ಲಿ ಮುಂದುವರೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಬೇಕು ಎಂದು ಹೇಳಿದರು ಎನ್ನಲಾಗಿದೆ.

ಇದಲ್ಲದೆ, ಕಾಂಗ್ರೆಸ್‌ ಸರ್ಕಾರದ ಅಂತಿಮ ಚರಣದಲ್ಲಿ ಕೈಗೊಂಡ ಹಲವು ನಿರ್ಧಾರಗಳನ್ನು ವಿಶೇಷವಾಗಿ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಟೆಂಡರ್‌ಗಳನ್ನು ರದ್ದುಪಡಿಸುವ ಪ್ರಯತ್ನವೂ ನಡೆದಿದೆ. ಅಲ್ಲದೆ, ಕೆಲ ಕಾಮಗಾರಿಯನ್ನು ಮರು ವಿನ್ಯಾಸಗೊಳಿಸುವ ಸಿದ್ಧತೆಯಲ್ಲೂ ಜೆಡಿಎಸ್‌ ನಾಯಕತ್ವ ಚಿಂತನೆ ನಡೆಸಿದೆ ಎಂಬ ಮಾಹಿತಿಯಿದೆ. ಟೆಂಡರ್‌ ಆಗದಿರುವ ಇನ್ನೂ ಕಾರ್ಯರೂಪಕ್ಕೆ ಬರದ ಯೋಜನೆಗಳ ಬಗ್ಗೆ ಸರ್ಕಾರ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿ. ಆದರೆ, ಈಗಾಗಲೇ ಟೆಂಡರ್‌ ಆಗಿರುವ ಯೋಜನೆಯನ್ನು ತಡೆಹಿಡಿಯದಂತೆ ಸೂಚಿಸಬೇಕು.

ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಬಹುದು. ಆದರೆ, ನಿರ್ದಿಷ್ಟಜಾತಿ ಹಾಗೂ ಸಮುದಾಯವನ್ನು ಉದ್ದೇಶ ಪೂರ್ವಕವಾಗಿ ಟಾರ್ಗೇಟ್‌ ಮಾಡಲಾಗುತ್ತಿದೆ ಎಂಬ ಭಾವನೆ ಬೆಳೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಬೇಕು ಎಂದು ತಿಳಿಸಿದರು ಎನ್ನಲಾಗಿದೆ.

ಸಿದ್ದರಾಮಯ್ಯ ಅವರ ಈ ಮಾತುಗಳಿಗೆ ಸಭೆಯಲ್ಲಿದ್ದ ಎಲ್ಲಾ ನಾಯಕರು ಒಪ್ಪಿದರು ಎಂದು ಮೂಲಗಳು ಹೇಳಿದ್ದು, ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರವು ಜಾರಿಗೊಳಿಸಲೇ ಬೇಕಾದ ಭಾಗ್ಯ ಯೋಜನೆಗಳ ಪಟ್ಟಿಯನ್ನು ಪೂರ್ವಭಾವಿ ಸಭೆಯಲ್ಲಿ ಅಂತಿಮಗೊಳಿಸಲಾಯಿತು. ಈ ಪಟ್ಟಿಯನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿ ಮುಂದೆ ಮಂಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿ ಅನುಮೋದನೆ ಪಡೆಯಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಸಚಿವರಾದ ಡಿ.ಕೆ. ಶಿವಕುಮಾರ್‌, ಆರ್‌.ವಿ. ದೇಶಪಾಂಡೆ ಮತ್ತು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಇದ್ದರು.

loader