ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೋರ್‌ ಗ್ರೂಪ್‌ ಕಮಿಟಿ, ಚುನಾವಣಾ ಪ್ರಣಾಳಿಕೆ ರಚಿಸುವ ಪ್ರಣಾಳಿಕೆ ಸಮಿತಿ ಹಾಗೂ ಚುನಾವಣೆ ಪ್ರಚಾರದ ಹೊಣೆ ನಿರ್ವಹಿಸುವ ಪ್ರಚಾರ ಸಮಿತಿಗಳನ್ನು ರಾಹುಲ್‌ ಪುನಾರಚಿಸಿದ್ದಾರೆ.

ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂರು ಸಮಿತಿಗಳನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಶನಿವಾರ ಪುನಾರಚಿಸಿದ್ದಾರೆ. ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಂಬಿಕಸ್ಥ ನಾಯಕರನ್ನೂ ಇಟ್ಟುಕೊಂಡು, ಹೊಸಮುಖಗಳಿಗೂ ಆದ್ಯತೆ ನೀಡುವ ಮೂಲಕ ಹಿರಿಯ- ಕಿರಿಯರನ್ನು ಬ್ಯಾಲೆನ್ಸ್‌ ಮಾಡಲು ಅವರು ಪ್ರಯತ್ನಿಸಿದ್ದಾರೆ.

ಪಕ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳುವ ಕೋರ್‌ ಗ್ರೂಪ್‌ ಕಮಿಟಿ, ಚುನಾವಣಾ ಪ್ರಣಾಳಿಕೆ ರಚಿಸುವ ಪ್ರಣಾಳಿಕೆ ಸಮಿತಿ ಹಾಗೂ ಚುನಾವಣೆ ಪ್ರಚಾರದ ಹೊಣೆ ನಿರ್ವಹಿಸುವ ಪ್ರಚಾರ ಸಮಿತಿಗಳನ್ನು ರಾಹುಲ್‌ ಪುನಾರಚಿಸಿದ್ದಾರೆ.

ಕೋರ್‌ ಗ್ರೂಪ್‌ ಕಮಿಟಿಯಲ್ಲಿ ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್‌, ಪಿ. ಚಿದಂಬರಂ, ಅಶೋಕ್‌ ಗೆಹ್ಲೋಟ್‌, ಮಲ್ಲಿಕಾರ್ಜುನ ಖರ್ಗೆ, ಅಹಮದ್‌ ಪಟೇಲ್‌, ಜೈರಾಂ ರಮೇಶ್‌ ಅವರಂತಹ ಹಿರಿಯ ನಾಯಕರನ್ನು ಉಳಿಸಿಕೊಂಡಿರುವ ಅವರು, ರಣದೀಪ್‌ ಸುರ್ಜೇವಾಲಾ ಹಾಗೂ ಕೆ.ಸಿ. ವೇಣುಗೋಪಾಲ್‌ ಅವರಂತಹ ಕಿರಿಯ ನಾಯಕರಿಗೂ ಸ್ಥಾನ ಕಲ್ಪಿಸಿದ್ದಾರೆ. ಒಟ್ಟು 9 ಮಂದಿಯ ಸಮಿತಿ ಇದಾಗಿದ್ದು, ಇಬ್ಬರು ಕನ್ನಡಿಗರಿಗೆ ಸ್ಥಾನ ಸಿಕ್ಕಿದೆ. ಅವರೆಂದರೆ, ಖರ್ಗೆ ಹಾಗೂ ಜೈರಾಂ.

ಪ್ರಣಾಳಿಕೆ ಸಮಿತಿ: ಇದೇ ವೇಳೆ 19 ಸದಸ್ಯರ ಪ್ರಣಾಳಿಕೆ ಸಮಿತಿಯನ್ನು ರಾಹುಲ್‌ ಪುನಾರಚಿಸಿದ್ದಾರೆ. ಮನಪ್ರೀತ್‌ ಬಾದಲ್‌, ಪಿ. ಚಿದಂಬರಂ, ಸುಷ್ಮಿತಾ ದೇವ್‌, ಪ್ರೊ. ರಾಜೀವ್‌ ಗೌಡ, ಭೂಪಿಂದರ್‌ ಸಿಂಗ್‌ ಹೂಡಾ, ಜೈರಾಂ ರಮೇಶ್‌, ಸಲ್ಮಾನ್‌ ಖುರ್ಷಿದ್‌, ಬಿಂದು ಕೃಷ್ಣನ್‌, ಕುಮಾರಿ ಸೆಲ್ಜಾ, ರಘುವೀರ್‌ ಮೀನಾ, ಪ್ರೊ. ಬಾಲಚಂದ್ರ ಮುಂಗೇಕರ್‌, ಮೀನಾಕ್ಷಿ ನಟರಾಜನ್‌, ರಜನಿ ಪಾಟೀಲ್‌, ಸ್ಯಾಮ್‌ ಪಿತ್ರೋಡಾ, ಸಚಿನ್‌ ರಾವ್‌, ತಾಮ್ರಧ್ವಜ ಸಾಹು, ಮುಕುಲ್‌ ಸಂಗ್ಮಾ, ಶಶಿ ತರೂರ್‌, ಲಲಿತೇಶ್‌ ತ್ರಿಪಾಠಿ ಅವರನ್ನು ನೇಮಕ ಮಾಡಿದ್ದಾರೆ. ಹಿರಿಯ ನಾಯಕರಿದ್ದರೂ ಹೊಸ ಮುಖಗಳಿಗೆ ಈ ಸಮಿತಿಯಲ್ಲಿ ಹೆಚ್ಚು ಆದ್ಯತೆ ಸಿಕ್ಕಿದೆ. ಕರ್ನಾಟಕದಿಂದ ಜೈರಾಂ ಹಾಗೂ ರಾಜೀವ್‌ಗೌಡ ಅವರಿಗೆ ಅವಕಾಶ ಲಭಿಸಿದೆ.

ಪ್ರಚಾರ ಸಮಿತಿಯಲ್ಲಿ ರಮ್ಯಾ: 13 ಸದಸ್ಯರ ಪ್ರಚಾರ ಸಮಿತಿಯನ್ನು ರಾಹುಲ್‌ ರಚನೆ ಮಾಡಿದ್ದು, ಮಂಡ್ಯದ ಮಾಜಿ ಸಂಸದೆ ರಮ್ಯಾಗೆ ಸ್ಥಾನ ಸಿಕ್ಕಿದೆ. ಭಕ್ತಚರಣ ದಾಸ, ಪ್ರವೀಣ್‌ ಚಕ್ರವರ್ತಿ, ಮಿಲಿಂದ್‌ ದೇವೋರಾ, ಕುಮಾರ್‌ ಕೇತ್ಕರ್‌, ಪವನ್‌ ಖೇರಾ, ವಿ.ಡಿ. ಸತೀಶನ್‌, ಆನಂದ ಶರ್ಮಾ, ಜೈವೀರ್‌ ಶೆರ್ಗಿಲ್‌, ರಾಜೀವ್‌ ಶುಕ್ಲ, ರಣದೀಪ್‌ ಸುರ್ಜೇವಾಲ, ಮನೀಶ್‌ ತಿವಾರಿ, ಪ್ರಮೋದ್‌ ತಿವಾರಿ ಅವರು ಈ ಸಮಿತಿಯಲ್ಲಿದ್ದಾರೆ.

ರಾಹುಲ್‌ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾದರೆ ಹಿರಿಯ ಮುಖಗಳನ್ನು ಬದಿಗೆ ಸರಿಸಿ ಹೊಸ ಮುಖಗಳಿಗೆ ಆದ್ಯತೆ ನೀಡಬಹುದು ಎಂಬ ಆತಂಕ ಪಕ್ಷದೊಳಗೆ ವ್ಯಕ್ತವಾಗಿತ್ತು. ಅದನ್ನು ಹೋಗಲಾಡಿಸಲು ಯತ್ನಿಸಿರುವ ರಾಹುಲ್‌, ಹಿರಿಯರ ಅನುಭವ ಹಾಗೂ ಕಿರಿಯರ ಶಕ್ತಿಯನ್ನು ಒಗ್ಗೂಡಿಸಲು ಪ್ರಯತ್ನ ನಡೆಸಿರುವುದು ಈ ಪಟ್ಟಿಯಿಂದ ತಿಳಿಯುತ್ತದೆ.