ಸಿದ್ದರಾಮಯ್ಯ - ಪರಮೇಶ್ವರ್ ಬಣಗಳ ನಡುವೆಯೇ ಸಂಘರ್ಷ

Conflict Between Siddaramaiah And Parameshwar Team
Highlights

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ನಡುವೆ ಮುಸುಕಿನ ಯುದ್ಧ ಆರಂಭಗೊಂಡ ಲಕ್ಷಣಗಳು ಪ್ರಬಲವಾಗಿ ಗೋಚರ ವಾಗತೊಡಗಿವೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. 

ಬೆಂಗಳೂರು :  ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ್ ನಡುವೆ ಮುಸುಕಿನ ಯುದ್ಧ ಆರಂಭಗೊಂಡ ಲಕ್ಷಣಗಳು ಪ್ರಬಲವಾಗಿ ಗೋಚರ ವಾಗತೊಡಗಿವೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಇದಕ್ಕೆ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಅವರ ಹಲವು ಆಪ್ತರಿಗೆ ಸ್ಥಾನ ತಪ್ಪುವುದರ ಹಿಂದೆ ಪರಮೇಶ್ವರ್ ಅವರ ಪಾತ್ರವನ್ನು ಸಿದ್ದರಾಮಯ್ಯ ಬಣ ಕಾಣುತ್ತಿರುವುದು ಹಾಗೂ ಸಚಿವ ಸ್ಥಾನ ದೊರಯದಿದ್ದರಿಂದ ಉಂಟಾಗಿರುವ ಬಂಡಾಯದ ಬಿಸಿ ಈ ಪ್ರಮಾಣದಲ್ಲಿ ಹೆಚ್ಚಾಗುವಲ್ಲಿ ಸಿದ್ದರಾಮಯ್ಯ ಆಪ್ತರ ಪಾತ್ರವನ್ನು ಪರಮೇಶ್ವರ್ ಬಣ ಕಾಣುತ್ತಿರುವುದು ಕಾರಣ. 

ಹೀಗಾಗಿ ಈ ಎರಡು ಬಣಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗುವ ಎಲ್ಲಾ ಸಾಧ್ಯತೆ ಗೋಚರಿಸಿದೆ. ಒಂದು ಕಾಲದಲ್ಲಿ  ತಮ್ಮೊಂದಿಗೆ ಆಪ್ತರಾಗಿದ್ದು, ಅನಂತರ ಸಿದ್ದು ಬಣದಲ್ಲಿ ಗುರುತಿಸಿಕೊಂಡ ಎಂ.ಬಿ. ಪಾಟೀಲ್, ಎಸ್.ಆರ್.ಪಾಟೀಲ್ ಅವರೂ ಸೇರಿ ಸಿದ್ದರಾಮಯ್ಯಗೆ ಆಪ್ತರೆನಿಸಿದ ರೋಷನ್ ಬೇಗ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಮೊದಲಾದವರು ಸಚಿವ ಸ್ಥಾನ ತಪ್ಪುವಲ್ಲಿ ಪರಮೇಶ್ವರ್ ಪ್ರಧಾನ ಪಾತ್ರ ವಹಿಸಿದ್ದರು ಎಂದು ಹೇಳುತ್ತಿದ್ದಾರೆ. ಇಂತಹ ಘಟಾನುಘಟಿ ನಾಯಕರು ಸಂಪುಟಕ್ಕೆ ಸೇರ್ಪಡೆಯಾಗುವುದು ಕಷ್ಟ ಎಂದು ಮೊದಲೇ ಅರಿತ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಯ ಮಾರನೇ ದಿನವೇ ೫ ದಿನಗಳ ಅವಧಿಯ ಬಾದಾಮಿ ಪ್ರವಾಸವನ್ನು ಕೈಗೊಂಡಿದ್ದಾರೆ! 

ಇದರ ಹಿಂದೆ, ಬಂಡಾಯವನ್ನು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನಿಭಾಯಿಸಲಿ ಎಂಬ ಉದ್ದೇಶವಿದೆ ಎಂದು ಪರಮೇಶ್ವರ್ ಬಣ ದೂರುತ್ತದೆ. ಅಲ್ಲದೆ, ಈಗ ದೊಡ್ಡ ಪ್ರಮಾಣದಲ್ಲಿ ಬಂಡಾಯ ವೆದ್ದಿರುವ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ ಮತ್ತು ಪರಿಶಿಷ್ಟ ಎಡಗೈ ಬಣಕ್ಕೆ ಸಚಿವ ಸ್ಥಾನ ದೊರಕಿಲ್ಲ ಎಂಬ ಕಾರಣಕ್ಕೆ ಪ್ರತ್ಯೇಕ ಸಭೆ ನಡೆಸಿದ ಮಾಜಿ ಸಚಿವ ಎಚ್. ಆಂಜನೇಯ ಅವರು ಸಿದ್ದರಾಮಯ್ಯ ಅವರ ಆಪ್ತರೆನಿ ಸಿಕೊಂಡವರು. ಈ ನಾಯಕರು ದೊಡ್ಡ ಪ್ರಮಾಣದಲ್ಲಿ ಅತೃಪ್ತಿ ಪ್ರಕಟಿಸುವುದಕ್ಕೆ ಸಿದ್ದರಾಮಯ್ಯ ಅವರ ಮೌನ ಸಮ್ಮತಿಯೂ ಇದೆ ಎನ್ನಲಾಗುತ್ತಿದೆ.

loader