Asianet Suvarna News Asianet Suvarna News

ಎಸಿಬಿ ದಾಳಿಗೊಳಗಾದವರಿಗೆ ಶಿಕ್ಷೆ ಆಗುತ್ತಿಲ್ಲ ಏಕೆ?

ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾದ ವ್ಯಕ್ತಿ 3 ತಿಂಗಳ ನಂತರ ಏನೂ ನಡೆದೇ ಇಲ್ಲ ಎಂಬಂತೆ, ಮತ್ತೆ ಅದೇ ಗೂಟದ ಕಾರಿನಲ್ಲಿ, ಅದೇ ಹುದ್ದೆಗೆ ಬಂದು ಕುಳಿತುಕೊಳ್ಳುತ್ತಾನೆ! ಇದೆಲ್ಲ ಹೇಗೆ ಸಾಧ್ಯ? ಇಲ್ಲಿದೆ.

complete look at ACB raid and Culprit Punishment
Author
Bengaluru, First Published Oct 23, 2018, 11:13 AM IST

ಬೆಂಗಳೂರು(ಅ.23): ಈ ಹಿಂದೆ ಭ್ರಷ್ಟಾಚಾರವನ್ನು ಮಟ್ಟಹಾಕುವಲ್ಲಿ ಲೋಕಾಯುಕ್ತ ಸಂಸ್ಥೆ ಮಾಡುತ್ತಿದ್ದ ಕೆಲಸ ಜನ ಮೆಚ್ಚುಗೆಯನ್ನು ಗಳಿಸಿತ್ತು. ಜನರ ಆಶಾಕಿರಣ, ಭ್ರಷ್ಟರ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ, ಎಸಿಬಿ(ಭ್ರಷ್ಟಾಚಾರ ನಿಗ್ರಹ ದಳ)ಯನ್ನು ಸರ್ಕಾರ ರಚಿಸಿತು. ಸರ್ಕಾರದ ನೇರ ಸುರ್ಪದಿಗೆ ಒಳಪಟ್ಟಎಸಿಬಿ, ಲೋಕಾಯುಕ್ತ (ಸ್ವಾಯತ್ತ) ಸಂಸ್ಥೆಯ ತಾಕತ್ತು ಮತ್ತು ಖದರನ್ನು ಪಡೆಯಲಿಲ್ಲ. 

ಆದರೆ ಇತ್ತೀಚೆಗೆ ಇಬ್ಬರು ಬಿಡಿಎ, ಪಿಡಬ್ಲ್ಯೂಡಿ ಇಂಜಿನಿಯರ್‌ಗಳ ಮನೆಗಳ ಮೇಲೆ ದಾಳಿ ಮಾಡಿದ ಎಸಿಬಿ ಪೊಲೀಸರು ನೂರಾರು ಕೋಟಿ ಮೊತ್ತದ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡು ಭ್ರಷ್ಟರಿಗೆ ಶಾಕ್‌ ನೀಡಿದ್ದಾರೆ. ತಮಗೆ ಬಂದ ಅನಾಮಿಕ ಮಾಹಿತಿ, ದೂರುಗಳು ಮತ್ತು ಗುಪ್ತ ವರದಿಗಳನ್ನು ಆಧರಿಸಿ ಭರ್ಜರಿ ಬೇಟೆಯಾಡಿ ಎಸಿಬಿ ಭೇಷ್‌ ಎನ್ನಿಸಿಕೊಂಡಿದೆ.

ಖಚಿತ ಮಾಹಿತಿಯಾಧರಿಸಿ ದಾಳಿ ಮಾಡಿದ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಹಣ, ಚಿನ್ನ, ಬೆಳ್ಳಿ, ಬೆಲೆಬಾಳುವ ವಸ್ತುಗಳು, ನಿವೇಶನಗಳು ಹೀಗೆ ಏನೇನೋ ಸ್ಥಿರ- ಚರ ಆಸ್ತಿಯನ್ನು ಪತ್ತೆ ಹಚ್ಚುತ್ತಾರೆ. ಮಾಧ್ಯಮಗಳಲ್ಲಿ ಈ ವರದಿಗಳು ರೋಚಕವಾಗಿ ಪ್ರಸಾರವಾಗುತ್ತವೆ. ಆದರೆ ದಿನಕಳೆದಂತೆ ಆ ಸುದ್ದಿ ರದ್ದಿಯಾಗುತ್ತವೆ. 

ದಾಳಿಗೆ ಒಳಗಾದ ವ್ಯಕ್ತಿ 3 ತಿಂಗಳ ನಂತರ ಏನೂ ನಡೆದೇ ಇಲ್ಲ ಎಂಬಂತೆ, ಮತ್ತೆ ಅದೇ ಗೂಟದ ಕಾರಿನಲ್ಲಿ, ಅದೇ ಹುದ್ದೆಗೆ ಬಂದು ಕುಳಿತುಕೊಳ್ಳುತ್ತಾನೆ! ಇದೆಲ್ಲ ಹೇಗೆ ಸಾಧ್ಯ? ಹೀಗೆ ದಾಳಿ ಮಾಡಿ ಹಿಡಿದು ಹಾಕಿದ ಭ್ರಷ್ಟರು ಶಿಕ್ಷೆಯ ಸರಪಳಿಯಿಂದ ಹೇಗೆ ತಪ್ಪಿಸಿಕೊಳ್ಳುತ್ತಾರೆ? ಇಂತಹ ದಾಳಿಗಳು ನ್ಯಾಯಾಲಯದ ಮುಂದೆ ಬಂದಾಗ ಏಕೆ ಸಾಬೀತಾಗುವುದಿಲ್ಲ?

ಪ್ರಕರಣ ಬಿದ್ದು ಹೋಗೋದ್ಹೇಗೆ?
ಉತ್ತರ ತುಂಬಾ ಸರಳ. ಪ್ರಕರಣದ ವಿಚಾರಣೆ ದಿಕ್ಕು ತಪ್ಪಿರುತ್ತದೆ ಅಥವಾ ಆತನ ಮೇಲಿನ ಆರೋಪ ಸಾಬೀತಾಗದೆ ಖುಲಾಸೆಯಾಗಿರುತ್ತಾನೆ. ಹೇಗಂತೀರಾ? ಒಂದು: ದಾಳಿಗೆ ಒಳಗಾದ ವ್ಯಕ್ತಿಯ ಆಸ್ತಿಯನ್ನು ತಪ್ಪು ಲೆಕ್ಕ ಹಾಕುವುದು. ಒಬ್ಬ ಸರ್ಕಾರಿ ಸೇವಕ ಆಸ್ತಿ ಖರೀದಿಸಿದ ಸಂದರ್ಭದಲ್ಲಿಯ ಮಾರುಕಟ್ಟೆಮೌಲ್ಯ ಮತ್ತು ದಾಳಿ ಮಾಡುವ ಸಂದರ್ಭದಲ್ಲಿಯ ಮಾರುಕಟ್ಟೆಮೌಲ್ಯದಲ್ಲಿ ಅಜಗಜಾಂತರ ವ್ಯತ್ಯಾಸವಿರುತ್ತದೆ. ಆಸ್ತಿಯ ಲೆಕ್ಕವನ್ನು ದಾಳಿಯ ಸಂದರ್ಭದಲ್ಲಿಯ ಮಾರುಕಟ್ಟೆಬೆಲೆಯನ್ನು ಲೆಕ್ಕಹಾಕಿ ದೂರು ದಾಖಲಿಸಲಾಗುತ್ತದೆ. 

ಎರಡನೆಯದು: ಒಬ್ಬ ಸರ್ಕಾರಿ ಸೇವಕ ಆತನ ಹಾಗೂ ಆತನ ಹೆಂಡತಿ, ಮಕ್ಕಳು, ತಂದೆ-ತಾಯಿ, ಅವಿವಾಹಿತ ಸಹೋದರಿಯರ ಹೆಸರಿನಲ್ಲಿ ಯಾವುದೇ ಆಸ್ತಿ ಖರೀದಿ ಮಾಡಿದರೂ ಅದರ ಕುರಿತು ಅಸೆಟ್ಸ್‌ ಆ್ಯಂಡ್‌ ಲೇಯಾಬ್ಲಿಟಿ ವರದಿಯನ್ನು ಪ್ರತಿವರ್ಷ ಸರ್ಕಾರಕ್ಕೆ ಸಲ್ಲಿಸಬೇಕು. ಹಾಗೆ ವರದಿ ಸಲ್ಲಿಸದಿದ್ದರೆ ಅಂಥ ಆಸ್ತಿ ವಶಪಡಿಸಿಕೊಳ್ಳಲು ಅರ್ಹ. ಈ ರೀತಿ ಗಳಿಸಿದ ಆಸ್ತಿಗೆ ಆದಾಯದ ಮೂಲ ಯಾವುದು ಎಂಬುದನ್ನು ಆ ಸೇವಕ ತೋರಿಸಬೇಕಾಗುತ್ತದೆ. ಸರ್ಕಾರಿ ಸೇವಕನ ಅತ್ತೆ, ಮಾವ, ಸೊಸೆ, ಅಳಿಯ, ಮುಂತಾದ ಕ್ಲಾಸ್‌ 2 ವಾರಸುದಾರರ ಹೆಸರಿನಲ್ಲಿದ್ದ ಆಸ್ತಿಯನ್ನು ಸರ್ಕಾರಿ ಸೇವಕನ ಗಳಿಕೆಯ ಆಸ್ತಿಯಂದು ಪರಿಗಣಿಸಲು ಬರುವುದಿಲ್ಲ. ಆ ಗಳಿಕೆ ಆಸ್ತಿ ಯಾರ ಹೆಸರಿನಲ್ಲಿರುತ್ತದೆಯೋ ಅವರನ್ನು ಆದಾಯ ಕರ ಇಲಾಖೆಯವರು ವಿಚಾರಣೆ ಮಾಡಬೇಕಾಗುತ್ತದೆ. ಆದರೆ ಎಸಿಬಿ ಪೊಲೀಸರು ದೂರದ ಸಂಬಂಧಿಕರ ಆಸ್ತಿಯನ್ನೆಲ್ಲ ದಾಳಿಗೆ ಒಳಗಾದ ವ್ಯಕ್ತಿಯ ಹಣೆಗೆ ಕಟ್ಟಿಪ್ರಕರಣ ದಾಖಲಿಸುತ್ತಾರೆ. ಹೀಗೆ ಮಾಡುವುದರಿಂದ ಪ್ರಕರಣ ವಿಚಾರಣೆಯ ಹಂತದಲ್ಲಿ ಬಿದ್ದುಹೋಗುತ್ತದೆ.

ಎಷ್ಟುಜನರಿಗೆ ಶಿಕ್ಷೆಯಾಗಿದೆ?
ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವ ಮತ್ತು ಆಮಿಷ ಒಡ್ಡುವ ಅಥವಾ ಅವರನ್ನು ವರ್ಗಾವಣೆ ಮಾಡುವ ಮೂಲಕವೂ ಪ್ರಕರಣವನ್ನು ಸಡಿಲಗೊಳಿಸಲಾಗುತ್ತದೆ. ಎಫ್‌ಐಆರ್‌ ದಾಖಲಾಗಿ 2 ತಿಂಗಳಾದರೂ ಚಾಜ್‌ರ್‍ಶೀಟ್‌ ಸಲ್ಲಿಸದಂತೆ ಮಾಡಲಾಗುತ್ತದೆ. ಆಗ ಅನಿವಾರ್ಯವಾಗಿ ಕೋರ್ಟ್‌ ಆಪಾದಿತನಿಗೆ ಜಾಮೀನು ಮಂಜೂರು ಮಾಡುತ್ತದೆ. ವಿಚಾರಣೆ ಮುಗಿಯುವಷ್ಟರಲ್ಲಿ ಆಪಾದಿತ ನಿವೃತ್ತಿ ಹೊಂದಿರುತ್ತಾನೆ. ಅಥವಾ ನಿವೃತ್ತನಾದ ಮೇಲೆ ಚಾಜ್‌ರ್‍ಶೀಟ್‌ ಸಲ್ಲಿಸಲಾಗುತ್ತದೆ! 

ವಿಚಾರಣೆ ಹಂತದಲ್ಲಿ ಸಾಕ್ಷ್ಯಾಧಾರಗಳ ಕೊರತೆ, ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡುವುದು ಹಾಗೂ ಹೇಳಲಾಗದ ಇನ್ನಿತರ ಕಾರಣಗಳಿಂದಾಗಿ ಇಂತಹ ಪ್ರಕರಣಗಳು ಸೋಲುತ್ತಿವೆ. ಇದರಿಂದಾಗಿ 2012ರಲ್ಲಿ ಶೇ.38ರರಷ್ಟಿದ್ದ ಶಿಕ್ಷೆಯ ಪ್ರಮಾಣ 2015ರಲ್ಲಿ ಶೇ.21ಕ್ಕೆ ಕುಸಿದಿದೆ. ಲೋಕಾಯುಕ್ತದ ಹಲ್ಲು ಕಿತ್ತ ಮೇಲೆ ಇದು ಇನ್ನಷ್ಟುಕುಸಿದಿದೆ. ಇನ್ನು ಎಸಿಬಿ ಎಷ್ಟುಜನರಿಗೆ ಶಿಕ್ಷೆ ಕೊಡಿಸಿದೆ ಅನ್ನುವುದನ್ನು ದೀಪ ಹಚ್ಚಿಯೇ ಹುಡುಕಬೇಕು!

ಸರ್ಕಾರದ ಪೂರ್ವಾನುಮತಿಯೇ ಅಡ್ಡಿ
ಭ್ರಷ್ಟರನ್ನು ಶಿಕ್ಷಿಸುವಲ್ಲಿ ಇರುವ ಮತ್ತೊಂದು ಬಹಳ ದೊಡ್ಡ ತೊಡಕೆಂದರೆ ಆಪಾದನೆಗೆ ಒಳಗಾದ ಸರ್ಕಾರಿ ಅಧಿಕಾರಿಯ ಮೇಲೆ ಪ್ರಕರಣ ದಾಖಲಿಸಬೇಕಾದರೆ ಭ್ರಷ್ಟಾಚಾರ ತಡೆ ಕಾಯ್ದೆಯ ನಿಯಮ 19ರ ಪ್ರಕಾರ ಸರ್ಕಾರದ ಪೂರ್ವಾನುಮತಿ ಬೇಕಾಗುತ್ತದೆ. ಆದರೆ ಸರ್ಕಾರ ಅನುಮತಿಯನ್ನೇ ಕೊಡುವುದಿಲ್ಲ. ಕೊಟ್ಟರೂ ವಿಳಂಬ ಮತ್ತು ದೋಷಪೂರಿತ ಅನುಮತಿ ಕೊಡುತ್ತದೆ. ಇಂತಹ ಸಂದರ್ಭದಲ್ಲಿ ಅನುಮತಿ ನೀಡದ ಅಥವಾ ವಿಳಂಬ ಮಾಡುವ ಸಕ್ಷಮ ಪ್ರಾಧಿಕಾರವನ್ನು ಐಪಿಸಿ ಕಲಂ 218ರ ಪ್ರಕಾರ ಶಿಕ್ಷೆಗೆ ಗುರಿಪಡಿಸಬಹುದು. 

ಸುಪ್ರೀಂ ಕೋರ್ಟ್‌ ಡಾ. ಸುಬ್ರಮಣ್ಯಸ್ವಾಮಿ v/s ಡಾ. ಮನಮೋಹನ್‌ ಸಿಂಗ್‌ ಹಾಗೂ ಇತರರ (ಸಿವಿಲ್‌ ಅಪೀಲ್‌ ನಂ.1193/2012) ಪ್ರಕರಣದಲ್ಲಿ ಉನ್ನತಾಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ಮಾಡಬೇಕಾದರೆ ಸರ್ಕಾರದ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸುವ ದಿಲ್ಲಿ ಪೊಲೀಸ್‌ ಕಾಯ್ದೆ ಸೆಕ್ಷನ್‌ 6 (ಅ)ನ್ನು ಅಸಂವಿಧಾನಿಕ ಎಂದು ರದ್ದುಪಡಿಸಿದೆ. ಇದೇ ಆದೇಶವನ್ನು ಎಲ್ಲ ತನಿಖಾ ಸಂಸ್ಥೆಗಳು ಅನುಸರಿಸಬೇಕು.

ಎಸಿಬಿಗೆ ಕಾನೂನು ಮಾನ್ಯತೆ ಇದೆಯೇ?
ಕೇವಲ ಸರ್ಕಾರದ ಒಂದು ಆದೇಶದ ಮೇರೆಗೆ ರಚನೆಯಾದ ಎಸಿಬಿಗೆ ಶಾಸನಾತ್ಮಕ ಮಾನ್ಯತೆಯಿಲ್ಲ. ಹಾಗಾಗಿ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಪ್ರಕಾರ ಪ್ರಕರಣ ದಾಖಲಿಸುವ ಅಧಿಕಾರ ಎಸಿಬಿಗೆ ಇಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಎಸಿಬಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಎಸಿಬಿ ದಾಖಲಿಸಿದ ಪ್ರಕರಣಗಳಿಗೆ ಹೈಕೋರ್ಟ್‌ ಈಗಾಗಲೆ ತಡೆಯಾಜ್ಞೆ ನೀಡಿದೆ. ಅಲ್ಲದೆ ಲೋಕಾಯುಕ್ತದಂತಹ ಸಶಕ್ತ ಸಂಸ್ಥೆ ಇರುವಾಗ ಅದನ್ನು ಅಶಕ್ತಗೊಳಿಸಿ, ಎಸಿಬಿಯನ್ನು ರಚಿಸುವ ಉದ್ದೇಶವಾದರೂ ಏನು? ಎಂದು ಹೈಕೋರ್ಟ್‌ ಕೇಳಿದೆ. 

ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿಗಳ ನಿಯಂತ್ರಣದಲ್ಲಿ ನಡೆಯುವ ಎಸಿಬಿಯಿಂದ ಭ್ರಷ್ಟಾಚಾರ ನಿಗ್ರಹವಾಗುವುದು, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಸಾಧ್ಯವೆ? ಎಂಬುದು ಮುಖ್ಯ ಪ್ರಶ್ನೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಹಲವು ಮಹತ್ವದ ತೀರ್ಪು ನೀಡುತ್ತಿರುವ ನ್ಯಾಯಾಂಗ ಎಸಿಬಿಯನ್ನು ರದ್ದುಪಡಿಸಿ, ಲೋಕಾಯುಕ್ತವನ್ನು ಪುನಃಶ್ಚೇತನಗೊಳಿಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.

ಡಾ. ಮಲ್ಲಿಕಾರ್ಜುನ ಗುಮ್ಮಗೋಳ, ಧಾರವಾಡ

Follow Us:
Download App:
  • android
  • ios