ಗುಂಡ್ಲುಪೇಟೆ ಕಾಂಗ್ರೆಸ್​ ಶಾಸಕಿ ಗೀತಾ ಮಹದೇವಪ್ರಸಾದ್​ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದೆ. ರೂಫ್​ ಟಾಪ್​ ಸೋಲಾರ್​ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್​ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.

ಮೈಸೂರು(ಜು.04): ಗುಂಡ್ಲುಪೇಟೆ ಕಾಂಗ್ರೆಸ್​ ಶಾಸಕಿ ಗೀತಾ ಮಹದೇವಪ್ರಸಾದ್​ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದೆ. ರೂಫ್​ ಟಾಪ್​ ಸೋಲಾರ್​ ಘಟಕ ಅಳವಡಿಕೆ ಯೋಜನೆಯಲ್ಲಿ ಬೇನಾಮಿ ಕಂಪನಿ ಮೂಲಕ ಟೆಂಡರ್​ ಪಡೆದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿದೆ.

ರಾಜ್ಯ ಗೋದಾಮು ನಿಗಮದಲ್ಲಿ ರೂಫ್​ ಟಾಪ್​ ಸೋಲಾರ್​ ಉತ್ಪಾದನಾ ಘಟಕ ಅಳವಡಿಕೆಯಲ್ಲಿ ಟೆಂಡರ್​ ಪಡೆದ ಆರೋಪ ಮೇಲೆ ದೂರು ದಾಖಲಾಗಿದೆ. ರಾಜ್ಯದಲ್ಲಿ ನಿರ್ಮಾಣಗೊಳ್ಳಲಿರುವ 193 ಗೋದಾಮು ನಿಗಮದ ಕಟ್ಟಡಗಳಲ್ಲಿ ರೂಫ್​ ಟಾಪ್​ ಸೋಲಾರ್ ಘಟಕಗಳಲ್ಲಿ 18 ಲಕ್ಷ ರೂ. ಪಾವತಿಸಿ 2.500 ಕೋಟಿ ರೂ ಮೊತ್ತದ ಟೆಂಡರ್​ ಪಡೆದಿರುವ ಆರೋಪ ಮಾಡಲಾಗಿದೆ. ಅಲ್ಲದೇ ಟೆಂಡರ್​ ಪ್ರಕ್ರಿಯೆಯಲ್ಲಿ ಕೇವಲ ಶಾಸಕಿ ಗೀತಾ ಮಹದೇವಪ್ರಸಾದ್​ ಅವರ ನಿಯಂತ್ರಣದಲ್ಲಿರುವ ಕಂಪನಿ ಮಾತ್ರ ಭಾಗವಹಿಸಿತ್ತು ಎಂದೂ ಹೇಳಲಾಗಿದೆ.

100 ಮೆಗಾವ್ಯಾಟ್​ ಉತ್ಪಾದನಾ ಸಾಮರ್ಥ್ಯದ ಉತ್ಪಾದನಾ ಘಟಕಗಳ ಟೆಂಡರ್​ 25 ವರ್ಷಗಳ ಅವಧಿಗೆ ಪಡೆಯಲಾಗಿದೆ ಎಂದು ಬೆಂಗಳೂರಿನ ಎಸ್​.ಟಿ. ಮೂರ್ತಿ ಎಂಬವರು ತನಿಖೆಗೆ ಕೋರಿ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಿಸಿದ್ದಾರೆ.