ಮಹಾರಾಷ್ಟ್ರ ಮಾಜಿ ಡಿಜಿಪಿ ಖಿಲ್ನಾನಿ ವಿರುದ್ಧ ಬೆಂಗಳೂರಲ್ಲಿ ಕೇಸು ದಾಖಲು!

Complaint lodge against Raj Prem Khilnani in Bengaluru
Highlights

ನಾನು ನಪುಂಸಕ ಎಂದು ಮಹಾರಾಷ್ಟ್ರದ ನಿವೃತ್ತ  ಡಿಜಿಪಿ (ಪೊಲೀಸ್ ಮುಖ್ಯಸ್ಥ)ಯೂ ಆಗಿರುವ ನನ್ನ ಮಾವ ಹಾಗೂ ಅವರ ಕುಟುಂಬದವರು ಅಪಪ್ರಚಾರ ಮಾಡಿ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಬಹು–ರಾಷ್ಟ್ರೀಯ ಕಂಪನಿಯ ಅಧಿಕಾರಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು (ಫೆ.17): ನಾನು ನಪುಂಸಕ ಎಂದು ಮಹಾರಾಷ್ಟ್ರದ ನಿವೃತ್ತ  ಡಿಜಿಪಿ (ಪೊಲೀಸ್ ಮುಖ್ಯಸ್ಥ)ಯೂ ಆಗಿರುವ ನನ್ನ ಮಾವ ಹಾಗೂ ಅವರ ಕುಟುಂಬದವರು ಅಪಪ್ರಚಾರ ಮಾಡಿ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಬಹು–ರಾಷ್ಟ್ರೀಯ ಕಂಪನಿಯ ಅಧಿಕಾರಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆರಂಭದಲ್ಲಿ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಸೈಬರ್ ಕ್ರೈಂ ಪೊಲೀಸರು, ಇದೀಗ ಕೋರ್ಟ್ ಸೂಚನೆ ಮೇರೆಗೆ ಮಹಾರಾಷ್ಟ್ರದ ನಿವೃತ್ತ ಡಿಜಿಪಿ ರಾಜ್ ಪ್ರೇಮ್ ಖಿಲ್ನಾನಿ, ಅವರ ಪತ್ನಿ ಮೀನಾ, ಪುತ್ರಿ ಪೂಜಾ ಹಾಗೂ ಪುತ್ರ ದಿವ್ಯೆ ವಿರುದ್ಧ ಎಫ್‌ಐಆರ್  ದಾಖಲಿಸಿದ್ದಾರೆ. ದೂರುದಾರ ಬನಾಲ್ ಗಜ್'ವಾನಿ (ಹೆಸರು ಬದಲಿಸಲಾಗಿದೆ) ಅವರು  ನಿವೃತ್ತ ಡಿಜಿಪಿ ಖಿಲ್ನಾನಿ ಅವರ ಅಳಿಯ, ಅಂದರೆ ಪೂಜಾಳ ಗಂಡ. ಬನಾಲ್ ಹಾಗೂ ಪೂಜಾ ನಡುವೆ ಕೌಟುಂಬಿಕ ಕಲಹ
ನಡೆಯುತ್ತಿದ್ದು, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದಾರೆ. ಅದರ ಮಧ್ಯೆಯೇ, ತನ್ನ ಹೆಸರಿನಲ್ಲಿ ನಕಲಿ ಇ-ಮೇಲ್ ಖಾತೆ ಸೃಷ್ಟಿಸಿ  ಅದರಿಂದ ತನ್ನ ಸ್ನೇಹಿತರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಮರ್ಯಾದೆ ತೆಗೆದಿದ್ದಾರೆ ಎಂದು ಬನಾಲ್ ತನ್ನ ಮಾವನ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.

ಪೂಜಾ ಕೂಡ ದೂರು ನೀಡಿದ್ದಳು: ರಾಜ್ ಪ್ರೇಮ್ ಖಿಲ್ನಾನಿ ಕುಟುಂಬ ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿದೆ. ಪುತ್ರಿ ಪೂಜಾ ಅವರನ್ನು ಬೆಂಗಳೂರಿನ ನಿವಾಸಿ ಬನಾಲ್ ಗಜ್‌ವಾನಿಗೆ 2011, ಡಿಸೆಂಬರ್ 21 ರಂದು ವಿವಾಹ ಮಾಡಿಕೊಟ್ಟಿದ್ದರು. ಬನಾಲ್ ಅವರು ಬೆಂಗಳೂರಿನ  ಮಲ್ಟಿನ್ಯಾಷನಲ್  ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮದುವೆ ನಂತರ ಪೂಜಾ ಮತ್ತು ಬನಾಲ್  ನಡುವೆ ಮನಸ್ತಾಪ ಏರ್ಪಟ್ಟಿತ್ತು. ತಾನು ಲೈಂಗಿಕ ಸಾಮರ್ಥ್ಯ ಹೊಂದಿಲ್ಲ ಎಂಬುದು ಬನಾಲ್‌ಗೆ ಗೊತ್ತಿದ್ದರೂ ಆ ವಿಷಯ ತಿಳಿಸದೆ ವಂಚಿಸಿ ತನ್ನನ್ನು ಮದುವೆಯಾಗಿದ್ದಾರೆ ಎಂದು ಪೂಜಾ 2017 ರ ಫೆಬ್ರವರಿಯಲ್ಲಿ ಶಿವಾಜಿನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ದಂಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಈ ಮಧ್ಯೆ ಪತ್ನಿ ಹಾಗೂ ಆಕೆಯ ಕುಟುಂಬದವರು ತನ್ನ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ಸ್ನೇಹಿತರು ಮತ್ತು ಪರಿಚಯಸ್ಥರಿಗೆ ತನ್ನ ಬಗ್ಗೆ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ.

ಸಂದೇಶದಲ್ಲಿ ಬನಾಲ್ ‘ನಪುಂಸಕ’ ಎಂದೆಲ್ಲ ಬರೆದಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೂಡ ಈ ರೀತಿಯಾಗಿ ಲಿಂಕ್ ಶೇರ್ ಮಾಡಿದ್ದಾರೆ. ಪತ್ನಿ ಹಾಗೂ ಆಕೆಯ ತಂದೆ ನಿವೃತ್ತ ಡಿಜಿಪಿ ಕುಟುಂಬ ತನ್ನ ಹೆಸರಿನ ನಕಲಿ ಇ-ಮೇಲ್ ಸೃಷ್ಟಿಸಿ ನನ್ನ ತೇಜೋವಧೆ ಮಾಡುವ ಮೂಲಕ ಘನತೆಗೆ ಧಕ್ಕೆ ತಂದಿದೆ ಎಂದು ಬನಾಲ್ ಸೈಬರ್ ಠಾಣೆಗೆ ದೂರು ನೀಡಿದ್ದರು. ದೂರು ಪಡೆದಿದ್ದ ಸೈಬರ್ ಕ್ರೈಂ ಪೊಲೀಸರು ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಬನಾಲ್ ಪರ ವಕೀಲ ಅನ್ಸರ್ ವಿಠ್ಠಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನ ಸೂಚನೆ ಮೇರೆಗೆ ಇದೀಗ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಐಟಿ (ಮಾಹಿತಿ ತಂತ್ರಜ್ಞಾತ) ಕಾಯ್ದೆಯಡಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದೇವೆ. ಯಾರು ಇ-ಮೇಲ್ ಕಳುಹಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ತನಿಖಾಧಿಕಾರಿ  ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. 

loader