ಬೆಂಗಳೂರು [ಆ.27]:  ಮಾಲಿಕತ್ವ ಪಡೆಯದೆ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 187 ಕೋಟಿ ರು. ನಷ್ಟವನ್ನುಂಟುಮಾಡಿದ್ದಾರೆ ಎಂಬ ಆರೋಪದ ಮೇಲೆ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿ ಎಂಟು ಮಂದಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.

ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸೋಮವಾರ ಎಸಿಬಿ ಕಚೇರಿಗೆ ತೆರಳಿ ದಾಖಲೆ ಸಮೇತ ದೂರು ದಾಖಲಿಸಿದ್ದಾರೆ. ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಐಎಎಸ್‌ ಅಧಿಕಾರಿಗಳಾದ ಮಹೇಂದ್ರ ಜೈನ್‌, ಗಂಗಾರಾಮ್‌ ಬಡೇರಿಯಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಈ ಹಿಂದೆ ನಿರ್ದೇಶಕರಾಗಿದ್ದ ಬಸಪ್ಪ ರೆಡ್ಡಿ, ಖಾಸಗಿ ವ್ಯಕ್ತಿಗಳಾದ ಬಿ.ಎಸ್‌.ಪುಟ್ಟರಾಜು, ಸೋಮಶೇಖರ್‌, ಬಿ.ಎಸ್‌.ನವೀನ್‌ ವಿರುದ್ಧ ದೂರು ನೀಡಲಾಗಿದೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನಲ್ಲಿ ಅಮರ್‌ಸಿಂಗ್‌ ಎಂಬುವವರು ಮಾತಾ ಮಿನರಲ್ಸ್‌ ಮೈನಿಂಗ್‌ ಸಂಸ್ಥೆ ಮಾಲಿಕರಾಗಿದ್ದರು. ಆದರೆ, ಸಚಿವ ಸೋಮಣ್ಣ ಸೇರಿದಂತೆ ಇತರರು ಮಾಲಿಕತ್ವ ಪಡೆಯದೆ ಮಾತಾ ಮಿನರಲ್ಸ್‌ ಹೆಸರಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 187 ಕೋಟಿ ರು. ನಷ್ಟಮಾಡಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಇರುವ ಕಾರಣ ಮಾತಾ ಮಿನರಲ್ಸ್‌ಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದು ಎಂದು ನ್ಯಾಯಾಲಯ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶ ಇದ್ದರೂ ಅಕ್ರಮವಾಗಿ ಮೈನಿಂಗ್‌ ನಡೆಸಿರುವುದು ಲೋಕಾಯುಕ್ತ ಸಂಸ್ಥೆ ತನಿಖೆಯಲ್ಲಿ ಗೊತ್ತಾಗಿದೆ ಎಂದು ದೂರಿನಲ್ಲಿ ಟಿ.ಜೆ.ಅಬ್ರಾಹಂ ಆರೋಪ ಮಾಡಿದ್ದಾರೆ.