ವಕೀಲ ಸಿರಾಜಿನ್‌ ಭಾಷಾ ಖಾಸಗಿ ದೂರು | ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ 27ರಂದು ವಿಚಾರಣೆ

ಬೆಂಗಳೂರು (ಅ.07): ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣಗಳ ಸಂಬಂ​ಧ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ವಕೀಲ ಸಿರಾ​ಜಿನ್‌ ಬಾಷಾ ಗುರುವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮತ್ತೆ ಖಾಸಗಿ ದೂರು ಸಲ್ಲಿಸಿದ್ದು, ಅ.27ರಂದು ವಿಚಾರಣೆ ನಡೆಯಲಿದೆ.

ಈ ಮೊದಲು ಅಂದರೆ 2010ರಲ್ಲಿ ಸಿರಾಜಿನ್‌ ಬಾಷಾ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಯಡಿಯೂರಪ್ಪ ವಿರುದ್ಧ ಐದು ಪ್ರತ್ಯೇಕ ಖಾಸಗಿ ದೂರು ಸಲ್ಲಿಸಿದ್ದರು. ಆದರೆ, ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದರಿಂದ ಅಂದಿ​ನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಯಡಿ​ಯೂರಪ್ಪ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು.

ಬಿ.ಎಸ್‌. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ಆಗಿರುವುದರಿಂದ ಈ ಸಂದರ್ಭ​ದಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯ​ಬೇಕಾದ ಅಗತ್ಯವಿಲ್ಲ ಎಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ದೂರು ದಾಖಲಿಸಲಾಗಿದೆ.
ಸಿರಾಜಿನ್‌ ಬಾಷಾ ದೂರುದಾರ

ಇದನ್ನು ಯಡಿಯೂರಪ್ಪ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ಕಾನೂನು ಬಾಹಿರವಾಗಿದೆ ಎಂದು ಅನುಮತಿ​ಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಕೀಲ ಸಿರಾಜಿನ್‌ ಬಾಷಾ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದು ವಿಚಾರಣೆ ಹಂತದಲ್ಲಿದೆ.

ಹಾಗೆಯೇ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಾಗಿರುವ ಕಾರಣ ಸಕ್ಷಮ ಪ್ರಾಧಿಕಾರದ ಅನುಮತಿ ಅಗತ್ಯ ಇಲ್ಲ ಎಂದು ಕೋರ್ಟ್‌ ಮೌಖಿಕವಾಗಿ ಅಭಿಪ್ರಾಯ​ಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿರಾಜಿನ್‌ ಬಾಷಾ ಮತ್ತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದು, ಅ.27ರಂದು ವಿಚಾರಣೆ ಬರುವ ಸಾಧ್ಯತೆಯಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.