ಬೆಂಗಳೂರು: ಬುದ್ಧಿಜೀವಿಗಳ ಕುರಿತು ಅವಹೇಳನಕಾರಿ ಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟವು ಶುಕ್ರವಾರ ದೂರು ದಾಖಲಿಸಿದೆ. 

ಈ ದೂರು ಸ್ವೀಕರಿಸಿದ ಪೊಲೀಸರು, ಕೃತ್ಯವು ವಿಜಯಪುರ ಪೊಲೀಸರ ವ್ಯಾಪ್ತಿಯಲ್ಲಿ ನಡೆದಿದ್ದು, ಈ ದೂರನ್ನು ಅಲ್ಲಿನ ಪೊಲೀಸರಿಗೆ ಮುಂದಿನ ತನಿಖೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದಾರೆ. 

‘ನಾನು ಗೃಹ ಸಚಿವನಾಗಿದ್ದರೆ ಬುದ್ಧಿಜೀವಿಗಳನ್ನು ಗುಂಡಿಕ್ಕಿ ಕೊಲ್ಲಿಸುತ್ತಿದ್ದೆ’ ಎಂಬ ವಿವಾದಾತ್ಮಕ ಹೇಳಿಕೆಯನ್ನು ಗುರುವಾರ ವಿಜಯ ಪುರದಲ್ಲಿ ಗುರುವಾರ ಯತ್ನಾಳ್  ಅವರು ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆ ಖಂಡಿಸಿರುವ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಅವರು, ಈ ರೀತಿ ಕೀಳು ಮಟ್ಟದ ಹೇಳಿಕೆ ನೀಡಿರುವ ಶಾಸಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.