ಬರ ಹಿನ್ನೆಲೆಯಲ್ಲಿ ನೀಡುವ ಬೆಳೆ ಪರಿಹಾರವನ್ನು ಇನ್ನು ಮುಂದೆ ರೈತರ ಮನೆ ಬಾಗಿಲಿಗೇ ತಲುಪಿಸಲು ಸರ್ಕಾರ ನಿರ್ಧರಿಸಿದೆ. ಬೆಳೆ ಪರಿಹಾರವನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂಬ ಜೆಡಿಎಸ್‌ನ ಟಿ.ಎ. ಶರವಣ, ಪ್ರತಿಪಕ್ಷ ನಾಯಕ ಈಶ್ವರಪ್ಪ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪಿಸಿದಾಗ ಸಚಿವ ಕಾಗೋಡು ತಿಮ್ಮಪ್ಪ ಇನ್ನುಮುಂದೆ ಬೆಳೆ ಪರಿಹಾರವನ್ನು ರೈತರ ಮನೆಗೇ ಹೋಗಿ ನೀಡಲಾಗುವುದು ಎಂದರು.

ಬೆಂಗಳೂರು: ಬರ ಹಿನ್ನೆಲೆಯಲ್ಲಿ ನೀಡುವ ಬೆಳೆ ಪರಿಹಾರವನ್ನು ಇನ್ನು ಮುಂದೆ ರೈತರ ಮನೆ ಬಾಗಿಲಿಗೇ ತಲುಪಿಸಲು ಸರ್ಕಾರ ನಿರ್ಧರಿಸಿದೆ.

ಬೆಳೆ ಪರಿಹಾರವನ್ನು ಸಕಾಲಕ್ಕೆ ನೀಡುತ್ತಿಲ್ಲ ಎಂಬ ಜೆಡಿಎಸ್‌ನ ಟಿ.ಎ. ಶರವಣ, ಪ್ರತಿಪಕ್ಷ ನಾಯಕ ಈಶ್ವರಪ್ಪ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪಿಸಿದಾಗ ಸಚಿವ ಕಾಗೋಡು ತಿಮ್ಮಪ್ಪ ಇನ್ನುಮುಂದೆ ಬೆಳೆ ಪರಿಹಾರವನ್ನು ರೈತರ ಮನೆಗೇ ಹೋಗಿ ನೀಡಲಾಗುವುದು ಎಂದರು.

ಈಗಾಗಲೇ 22,99,757 ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರದ ಹಣ ರೂ.1,530.37 ಕೋಟಿ ಜಮಾ ಮಾಡಲಾಗಿದೆ. ಉಳಿದಿರುವ 70 ಸಾವಿರ ರೈತರಿಗೆ ರೂ.155 ಕೋಟಿ ಪರಿಹಾರವನ್ನು ರೈತರ ಮನೆಗಳಿಗೇ ತಲುಪಿಸಲಾಗುವುದು.

ಅಂದರೆ ಈ ಹಣವನ್ನು ಈಗಾಗಲೇ ಜಿಲ್ಲಾ ಧಿಕಾರಿಗಳಿಗೆ ನೀಡಲಾಗಿದ್ದು, ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ರೈತರನ್ನು ಭೇಟಿ ಮಾಡಿ ಪರಿಹಾರದ ಚೆಕ್‌ ನೀಡಲಿದ್ದಾರೆ. ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡುವುದು ಕಷ್ಟವಾಗಿದ್ದರಿಂದ ವಿತರಣೆ ವಿಳಂಬವಾಗಿದೆ ಎಂದು ಕಾಗೋಡು ತಿಮ್ಮಪ್ಪ ವಿವರಿಸಿದರು. ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಡಿಸೆಂಬರ್‌ನಲ್ಲೇ ಪರಿಹಾರ ಘೋಷಣೆ ಮಾಡಿದೆ. ಆಗಲೇ ಅಧಿಕಾರಿಗಳು ಆಧಾರ್‌ ಲಿಂಕ್‌ ಮಾಡಬೇಕಿತ್ತು. ಆಗ ಈ ಅಧಿಕಾರಿಗಳಿಗೆ ಏನು ರೋಗ ಬಂದಿತ್ತೋ, ನೀವು ಅಧಿಕಾರಿಗಳನ್ನು ರಕ್ಷಿಸಬೇಡಿ. ಸಭೆ ಕರೆದು ಛೀಮಾರಿ ಹಾಕಿ ಎಂದು ಈಶ್ವರಪ್ಪ ಸಲಹೆ ನೀಡಿದರು.

ಮತ್ತೆ ಕಾಗೋಡು ಕ್ಷಮೆ:

ಈತನಕ ಬರ ಪರಿಹಾರದಲ್ಲಿ ಕೊರತೆಯಾಗಿದ್ದರೆ ಕ್ಷಮಿಸಿ ಎನ್ನುತ್ತಿದ್ದ ಸಚಿವ ಕಾಗೋಡು ತಿಮ್ಮಪ್ಪ, ಮೇವು ಹಂಚಿಕೆಯಲ್ಲಿ ತೊಂದರೆಯಾಗಿದ್ದರೆ ನನ್ನನ್ನು ಕ್ಷಮಿಸಬೇಕೆಂದು ಕೇಳಿದರು. ರಾಜ್ಯದಲ್ಲಿ ಮೇವು ಹಗರಣ ನಡೆದಿದ್ದು, ಇದನ್ನು ಸರ್ಕಾರ ಇಲ್ಲ ಎಂದು ವಾದಿಸುತ್ತಿದೆ. ಅಧಿಕಾರಿಗಳು ಮೇವು ಖರೀದಿ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಸೋಮಣ್ಣ ಆರೋಪಿಸಿದರು. ಇದನ್ನು ಒಪ್ಪದ ಸಚಿವ ಕಾಗೋಡು, ಮೇವಿನ ವಿತರಣೆ ಸಾಧ್ಯವಾದಷ್ಟುಪ್ರಾಮಾಣಿಕವಾಗಿ ನಡೆದಿದೆ. ಎಲ್ಲೂ ಮೇವು ಕೊರತೆ ಇಲ್ಲ. ಇನ್ನೂ 55 ಲಕ್ಷ ಟನ್‌ ಮೇವು ದಾಸ್ತಾನು ಇದೆ. ಎಲ್ಲಾದರೂ ಸಣ್ಣ ಪುಟ್ಟಸಮಸ್ಯೆ ಇರಬಹುದು. ಅದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದರು.

ಸಿಎಂ ಹೋದಾಗ 375, ನನ್ನ ಭೇಟಿ ವೇಳೆ 175 ಗೋವು!

ಗೋಶಾಲೆ, ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ಸಮರ್ಥಿಸಲು ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಗೋಶಾಲೆ ಪರಿಸ್ಥಿತಿಯನ್ನು ಸದನಕ್ಕೆ ವಿವರಿಸಿದರು.ಕಲಬುರಗಿಯಲ್ಲಿ ಮುಖ್ಯಮಂತ್ರಿ ಭೇಟಿ ನೀಡಿದ ಗೋಶಾಲೆಯಲ್ಲಿ 375 ಗೋವುಗಳಿದ್ದವು. ಅದೇ ಗೋಶಾಲೆಗೆ ಅಧಿಕಾರಿಗಳ ಜತೆಗೆ ನಾನು ಭೇಟಿ ನೀಡಿದಾಗ ಗೋವುಗಳ ಸಂಖ್ಯೆ 175ಕ್ಕೆ ಇಳಿದಿತ್ತು. ಆನಂತರ ಅಲ್ಲಿ ಗೋವುಗಳನ್ನು ಕರೆತಂದು ಮೇವು ಹೆಸರಿನಲ್ಲಿ ದುರ್ಬಳಕೆ ನಡೆಯುತ್ತಿರುವುದು ಗೊತ್ತಾಯಿತು ಎಂದು ಈಶ್ವರಪ್ಪ ಹೇಳಿದರು. ಅಧಿಕಾರಿಗಳು ಗೋಶಾಲೆ, ಮೇವು ಹೆಸರಿನಲ್ಲಿ ದುಡ್ಡು ತಿನ್ನುತ್ತಿದ್ದಾರೆ. ಅದಕ್ಕಾಗಿಯೇ ಬರ ಬಂದರೆ ಸಾಕು ಎಂದು ಕಾಯುತ್ತಿರುತ್ತಾರೆ ಎಂದು ಆರೋಪಿಸಿದರು.