ಕೋಮು ದಳ್ಳುರಿಗೆ ಕರಾವಳಿ ಕೊತ ಕೊತ ಕುದಿಯುತ್ತಿದೆ. ಆದರೆ ಅಮಾಯಕರನ್ನು ಬಲಿ ಕೊಟ್ಟು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ.
ಮಂಗಳೂರು(ಜು.09): ಕೋಮು ದಳ್ಳುರಿಗೆ ಕರಾವಳಿ ಕೊತ ಕೊತ ಕುದಿಯುತ್ತಿದೆ. ಆದರೆ ಅಮಾಯಕರನ್ನು ಬಲಿ ಕೊಟ್ಟು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಒಬ್ಬರ ಮೇಲೊಬ್ಬರು ಆರೋಪ- ಪ್ರತ್ಯಾರೋಪ ಮಾಡುತ್ತಿದ್ದಾರೆ.
ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಬಳಿಕ ಬಂಟ್ವಾಳದಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.. ಕರಾವಳಿಯ ಈ ಪರಿಸ್ಥಿತಿಗೆ ನೀವು ಕಾರಣ. ನೀವು ಕಾರಣ ಅಂಥ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಕೆಸರೆರಚಾಟದಲ್ಲಿ ತೊಡಗಿವೆ. ಅಮಾಯಕರನ್ನು ಬಲಿ ಕೊಟ್ಟು ಚುನಾವಣಾ ಹೊಸ್ತಿಲಲ್ಲಿ ವೋಟ್ ಬ್ಯಾಂಕ್'ಗಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಆರೋಪ - ಪ್ರತ್ಯಾರೋಪ ಮಾಡುತ್ತಿವೆ.
ಕರಾವಳಿಯಲ್ಲಿ ತಾರಕಕ್ಕೇರಿರೋ ಕೋಮು ದ್ವೇಷಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದರು ಹಾಗೂ ಕರಾವಳಿ ಭಾಗದಲ್ಲಿ ಎತ್ತಿಕಟ್ಟುವ ಕಾರ್ಯ ನಡೆಯುತ್ತಿದ್ದು, ಅಂಥವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಇಂಥಾದೊಂದು ಆರೋಪ ಮಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದರು. ಕೋಮು ಗಲಭೆಗಳನ್ನು ಸಿಎಂ ನೇತೃತ್ವದ ಸರ್ಕಾರವೇ ಹುಟ್ಟು ಹಾಕುತ್ತಿದೆ. ಮಂಗಳೂರಲ್ಲಿ ಶಾಂತಿ ಕದಡಲು ಸಿಎಂ ಸಿದ್ದರಾಮಯ್ಯನವರೇ ಕಾರಣ ಎಂದು ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು. ಅಲ್ಲದೇ ಶರತ್ ಹತ್ಯೆ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ರು.
ಸದ್ಯ ಬಂಟ್ವಾಳದಲ್ಲಿ ಮುನ್ನೆಚ್ಚರಿಕೆಯಾಗಿ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪ ಮಾಡುವುದನ್ನು ಬಿಟ್ಟು, ಶಾಂತಿ ನೆಲೆಸುವಂತೆ ಕಾರ್ಯಕ್ಕೆ ಮುಂದಾಗಬೇಕಿದೆ.
