ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವವರು ಇನ್ನುಮುಂದೆ ಬೋರಾಗುತ್ತಿದೆ ಎಂದು ಬೇಸರ ಮಾಡಿಕೊಳ್ಳುವಂತಿಲ್ಲ. ಭಾರತೀಯ ಆಗಸದಲ್ಲಿ ಹಾರುವಾಗ ಇನ್ನುಮುಂದೆ ವಿಮಾನದಲ್ಲೂ ಫೋನ್ ಕರೆಗಳನ್ನು ಮಾಡುವ ಹಾಗೂ ಇಂಟರ್ನೆಟ್ ಬಳಸುವ ಸೌಕರ್ಯ ಪ್ರಯಾಣಿಕರಿಗೆ ಶೀಘ್ರದಲ್ಲೇ ದೊರೆಯಲಿದೆ. ಈ ಕುರಿತ ಕೇಂದ್ರ ದೂರಸಂಪರ್ಕ ಇಲಾಖೆಯ ಪ್ರಸ್ತಾವನೆಗೆ ದೂರಸಂಪರ್ಕ ಆಯೋಗ ಅನುಮತಿ ನೀಡಿದೆ. 
ಇಷ್ಟು ದಿನ ವಿಮಾನ ಟೇಕಾಫ್ ಆಗುವುದಕ್ಕೂ ಮುನ್ನ ಮೊಬೈಲ್ ಫೋನ್‌ಗಳನ್ನು ಸ್ವಿಚಾಫ್ ಮಾಡಲು ವಿಮಾನಗಳಲ್ಲಿ  ಸೂಚಿಸಲಾಗುತ್ತಿತ್ತು.

ವಿಮಾನ ಎತ್ತರಕ್ಕೆ ಹಾರಿದ ಮೇಲೆ ಮೊಬೈಲ್ ಬಳಸಬಹುದಿತ್ತಾದರೂ ಭಾರತದ ಆಕಾಶದಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿರಲಿಲ್ಲ. ಹೀಗಾಗಿ ಕರೆಗಳನ್ನು ಮಾಡಲು ಹಾಗೂ ಇಂಟರ್ನೆಟ್ ಬಳಸಲು ಸಾಧ್ಯವಿರಲಿಲ್ಲ. ಈಗ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಪ್ರಸ್ತಾವನೆಯನ್ವಯ ಇನ್ನು 3-4 ತಿಂಗಳಿನಲ್ಲಿ ವಿಮಾನಗಳಲ್ಲಿ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಸಿಗ್ನಲ್ ಸಿಗಲಿದೆ. 


ಆದರೆ, ವಿಮಾನಕ್ಕೆ ಅಗತ್ಯವಿರುವ ಸಂಪರ್ಕದ ಸಿಗ್ನಲ್‌ಗಳಿಗೆ ತೊಂದರೆಯಾಗಬಾರದು ಎಂದು ವಿಮಾನವು 3000 ಮೀಟರ್ ಎತ್ತರಕ್ಕೆ ಹಾರಿದ ನಂತರವಷ್ಟೇ ಇವುಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ವಿಮಾನ ಟೇಕಾಫ್ ಆದ 4-5 ನಿಮಿಷದಲ್ಲಿ ಕನಿಷ್ಠ 3000 ಮೀಟರ್ ಎತ್ತರಕ್ಕೆ ಹೋಗುತ್ತದೆ.
ವಿಮಾನದಲ್ಲಿ ಕರೆ ಹಾಗೂ ಇಂಟರ್ನೆಟ್ ಸೌಕರ್ಯ ನೀಡುವುದಕ್ಕೆ ಅಗತ್ಯವಿರುವ ಕಾಯ್ದೆಗಳ ತಿದ್ದುಪಡಿಯನ್ನು ದೂರಸಂಪರ್ಕ ಇಲಾಖೆ ಮಾಡಲಿದೆ. ನಂತರ ವಿಮಾನದೊಳಗೆ ಮೊಬೈಲ್ ಸೇವೆ ಒದಗಿಸಲು ದೂರಸಂಪರ್ಕ ಕಂಪನಿಗಳಿಗೆ ಪರವಾನಗಿ ನೀಡಲಿದೆ. ಇದಕ್ಕೆ ಸಾಂಕೇತಿಕವಾಗಿ ಒಂದು ವರ್ಷಕ್ಕೆ ಕೇವಲ 1 ರು. ಶುಲ್ಕ ವಿಧಿಸಲಿದೆ. ವಿಮಾನದಲ್ಲಿ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಸೇವೆ ಸೋವಿಯಾಗಿರಲಿ ಎಂಬ ಕಾರಣಕ್ಕೆ ಕಡಿಮೆ ಶುಲ್ಕ ಪಡೆಯಲಾಗುತ್ತದೆ.

ಆದರೆ, ಕರೆ ಹಾಗೂ ಇಂಟರ್ನೆಟ್‌ಗೆ ದರ ನಿಗದಿಪಡಿಸುವ ಸ್ವಾತಂತ್ರ್ಯವನ್ನು ಟೆಲಿಕಾಂ ಕಂಪನಿಗಳಿಗೇ ನೀಡಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ವಿಮಾನಗಳಲ್ಲಿ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಸೇವೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತದೆ.