ಧಾರವಾಡ (ಜ. 07): 84 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ವಿದ್ಯಾಕಾಶಿ ಧಾರವಾಡದಲ್ಲಿ ಕನ್ನಡ ಡಿಂಡಿಮ ಮೊಳಗಿದೆ. ಅನೇಕ ಚರ್ಚೆ, ಸಂವಾದ, ಸುದ್ದಿಗೋಷ್ಟಿಗಳು ನಡೆದವು. ಕಲಾಭಿಮಾನಿಗಳಿಗೆ. ಸಾಹಿತ್ಯಾಸಕ್ತರಿಗೆ ಮೂರು ದಿನ ಅರ್ಥಪೂರ್ಣವಾಗಿತ್ತು. ಮೂರನೇ ದಿನದ ಕಾರ್ಯಕ್ರಮದಲ್ಲಿ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದವು. ಅದರ ವಿವರ ಇಲ್ಲಿದೆ ನೋಡಿ.  

ಯೇ ಪಾಪಡ್ ಹೈ

ಕನ್ನಡ ಸಾಹಿತ್ಯ ಸಮ್ಮೇಳನದ ಬೇರೆ ಬೇರೆ ಊಟದ ಕೌಂಟರುಗಳ ನಿರ್ವಹಣೆಯನ್ನು ಗುತ್ತಿಗೆ ಪಡೆದವರು ಮಹಾರಾಷ್ಟ್ರದಿಂದಲೂ ಕಾರ್ಮಿಕರನ್ನು ಕರೆತಂದಿದ್ದರು. ಮಾಧ್ಯಮ ಕೇಂದ್ರದ ಭೋಜನ ಶಾಲೆಯಲ್ಲಿ ಊಟ ಬಡಿಸಲು ನಿಂತಿದ್ದವರು ಕೊಲ್ಲಾಪುರದ ಹುಡುಗರು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಖಡಕ್ ರೊಟ್ಟಿ ತೋರಿಸಿ ಇದೇನು ಎಂದು ಕೇಳಿದವರಿಗೆ ಯೇ ಪಾಪಡ್ ಹೈ ಅನ್ನುತ್ತಿದ್ದರು. ಸ್ವೀಟು ತೋರಿಸಿ ಇದೇನು ಎಂದು ಕೇಳಿದರೆ ‘ಮಾಲೂಂ ನಹಿ’ ಅನ್ನುತ್ತಿದ್ದರು.

ಅನ್ಯಾಯ ಅನ್ಯಾಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಧಾನ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಬ್ಬ ಯುವಕ ವೇದಿಕೆ ಏರಿ ಅನ್ಯಾಯ ಅನ್ಯಾಯ ಎಂದು ಕೂಗತೊಡಗಿದ. ಯಾರಿಗೆ ಅನ್ಯಾಯವಾಯಿತು ಎಂದು ಎಲ್ಲರೂ ನೋಡುತ್ತಿದ್ದಂತೆ ಪೊಲೀಸರು ಬಂದು ಅವನನ್ನು ಎಳೆದುಕೊಂಡು ಹೋದರು. ಆತ ನವಲಗುಂದದ ದ್ಯಾಮನಗೌಡ ಎಂಬ ಹೆಸ್ಕಾಂನ ಸರ್ಕಾರಿ ನೌಕರನೆಂದೂ, ಕರ್ತವ್ಯಲೋಪದ ಮೇಲೆ ಅಮಾನತಾದವನೆಂದೂ ನಂತರ ತಿಳಿಯಿತು. ಸಸ್ಪೆಂಡ್ ಆದ ಸಿಟ್ಟಿನಲ್ಲಿ ಆತ ವೇದಿಕೆ ಏರಿ ಹುಚ್ಚಾಟ ನಡೆಸಲು ಯತ್ನಿಸಿದ್ದ.

ಕವಿಗಳ ಹೆಂಡತಿ ನಾಪತ್ತೆ

ಸಾಹಿತ್ಯ ಸಮ್ಮೇಳನದ ಕೊನೆ ದಿನ ಭಾನುವಾರ ಪ್ರಧಾನ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಯೊಬ್ಬರ ಹೆಂಡತಿ ಕಳೆದುಹೋದರು. ತೀವ್ರ ಜನದಟ್ಟಣೆಯಿಂದ ಮೊಬೈಲ್ ಫೋನ್, ವಾಟ್ಸಪ್ ಕೆಲಸ ಮಾಡದೇ ಇರುವುದರಿಂದ ಕವಿ ಹಾಗೂ ಅವರ ಪತ್ನಿ ಮಧ್ಯೆ ಸಂಪರ್ಕ ಕಡಿತಗೊಂಡು ಈ ಸಮಸ್ಯೆಯಾಯಿತು. ಪತ್ನೀಸಮೇತರಾಗಿ ಬಂದಿದ್ದ ಕವಿಗಳು ಕವನ ಹೇಳುವಷ್ಟರಲ್ಲಿ ವೇದಿಕೆ ಕೆಳಗೆ ಕುಳಿತಿದ್ದ ಅವರ ಪತ್ನಿ ಹೊರಗಡೆ ಹೋಗಿದ್ದರು. ಕವಿಗೋಷ್ಠಿ ಮುಗಿಸಿ ಬರುವಷ್ಟರಲ್ಲಿ ಹೆಂಡತಿ ಇಲ್ಲದ್ದನ್ನು ಗಮನಿಸಿ ಕಕ್ಕಾಬಿಕ್ಕಿಯಾದ ಕವಿ, ಆಯೋಜಕರ ಮೂಲಕ ಕೊನೆಗೆ ಒಂದು ಗಂಟೆ ಬಳಿಕ ತನ್ನ ಪತ್ನಿಯನ್ನು ಸೇರಿದರು.

ಕವಿಯ ಜಾಣತನ

ಸಮ್ಮೇಳನದ 3 ನೇ ಕವಿಗೋಷ್ಠಿಯಲ್ಲಿ ಒಬ್ಬ ಜಾಣ ಕವಿ ಭಾಗವಹಿಸಿದ್ದರು. ಅವರು ವಾಚಿಸಿದ ಕವನ ಹೀಗಿತ್ತು- ಮಲೆನಾಡಿನ ಮೈಕೊರೆಯುವ ಚಳಿ ಬಿಟ್ಟು ನೀ ಬಾ ನಲ್ಲೆ ಕಲ್ಯಾಣ ಕರ್ನಾಟಕದ ಬಿಸಿಲು ನಾಡಿಗೆ ಹೇಗೆ ಬರಲಿ ಎಂದಳು ನಲ್ಲೆ ರೈಲಲ್ಲಿ ಬಾ ನೀ ಧಾರವಾಡಕೆ ಅಥವಾ ಕಲ್ಬುರ್ಗಿಗೆ ಇಷ್ಟು ಹೇಳಿದ ಕವಿಗಳು ನಂತರ ಸಿನಿಮಾ ನಾಯಕರ ಥರ ನಸುನಗುತ್ತಾ ಸಭಾಸದರೆಡೆಗೆ ನೋಡಿ ನನ್ನ ಊರು ಕಲ್ಬುರ್ಗಿ ಎಂದರು. ನೆರೆದಿದ್ದ ಸಭಾಸದರು ಚಪ್ಪಾಳೆ ತಟ್ಟಿ, ಶಿಳ್ಳೆ ಹೊಡೆದು ಜಾಣ ಕವಿಯನ್ನು ಮೆಚ್ಚಿಕೊಂಡರು. ಕವಿ ಪುಂಗವರು ಭಾರಿ ಖುಷಿಯಾದರು.

ಮತ್ತೆ ಧಾರವಾಡಕ್ಕೆ ಬನ್ನಿ

ಸಮಾರೋಪ ಸಮಾರಂಭದಲ್ಲಿ ಕವಿ ಚನ್ನವೀರ ಕಣವಿ, ತಾವೇ ರಚಿಸಿದ ಹೋಗಿ ಮತ್ತೆ ಬರ‌್ರಿ.. ಹೋಗಿ ಬರ‌್ರಿ, ಮರಿಬ್ಯಾಡ್ರಿ ನನ್ನನ್ನು ಎಂದು ಕವಿತೆ ಮೂಲಕ ಮತ್ತೆ ಧಾರವಾಡಕ್ಕೆ ಮತ್ತೆ ಸಮ್ಮೇಳನ ಬರಲಿ ಎಂದು ಆಶಯ ವ್ಯಕ್ತಪಡಿಸಿದರು. ಜತೆಗೆ ನನಗೆ ಈ ಸಲ ಯಾವುದೇ ಕವಿಗೋಷ್ಠಿಯೊಳಗೆ ಹಾಕಿಕೊಂಡಿಲ್ಲ. ಅದಕ್ಕಾಗಿ ಈಗ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳಿದರು.