ರಾಜ್ಯಾದ್ಯಂತ ಕೊರೆಯುವ ಚಳಿಯ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಹೆಚ್ಚು ಗಾಳಿ ಬೀಸುತ್ತಿದ್ದು, ಚಳಿ ಅನುಭವ ಮತ್ತಷ್ಟು ಹೆಚ್ಚಾಗಿದೆ. ಇನ್ನೂ 2-3 ದಿನ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು (ಜ.09): ರಾಜ್ಯಾದ್ಯಂತ ಕೊರೆಯುವ ಚಳಿಯ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಹೆಚ್ಚು ಗಾಳಿ ಬೀಸುತ್ತಿದ್ದು, ಚಳಿ ಅನುಭವ ಮತ್ತಷ್ಟು ಹೆಚ್ಚಾಗಿದೆ. ಇನ್ನೂ 2-3 ದಿನ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಡಿಸೆಂಬರ್ ಕೊನೆಯ ವಾರದಲ್ಲಿ ಮೈಕೊರೆಯುತ್ತಿದ್ದ ಚಳಿಯ ತೀವ್ರತೆ ಕಳೆದ ಒಂದು ವಾರದಿಂದ ಕಡಿಮೆ ಆಗಿತ್ತು. ಇದೀಗ ಸೋಮವಾರ ಬೆಳಗ್ಗೆಯಿಂದ ಮತ್ತೆ ಚಳಿಯ ತೀವ್ರತೆ ಹೆಚ್ಚಾಗಿದ್ದು, ಕನಿಷ್ಠ ಉಷ್ಣಾಂಶದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ. ಆದರೂ ಕಡಿಮೆ ತಾಪಮಾನ ಇದ್ದಾಗ ಗಾಳಿ ಬೀಸಿದರೆ ಚಳಿಯ ಅನುಭವ ಹೆಚ್ಚಾಗಲಿದೆ.
ಹೀಗಾಗಿಯೇ ಸೋಮವಾರ ಚಳಿಯ ಅನುಭವ ತೀವ್ರವಾಗಿ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ವಿಜಯಪುರದಲ್ಲಿ 10.5 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಗೆ ಬದಲಾಗಿ 14 ಡಿಗ್ರಿ ದಾಖಲಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12.4 ಡಿಗ್ರಿ ದಾಖಲಾಗಿದೆ. ಜನವರಿ 14ರವರೆಗೂ ಇದೇ ವಾತಾವರಣ ಮುಂದುವರೆಯಲಿದ್ದು, ಬಳಿಕ 1 ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಲಿದೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಹವಾಮಾನ ಇಲಾಖೆ ಬೆಂಗಳೂರು ವಲಯದ ನಿರ್ದೇಶಕ ಸುಂದರ್ ಮೇತ್ರಿ, ಕಳೆದ ಒಂದು ವಾರದಿಂದಲೂ ಇದೇ ತಾಪಮಾನ ಇದ್ದರೂ ಸೋಮವಾರ ಹೆಚ್ಚು ಚಳಿಯ ಅನುಭವ ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದೆ.
ವಾತಾವರಣದಲ್ಲಾದ ಬದಲಾವಣೆಯಿಂದಾಗಿ ಉತ್ತರ ಹಾಗೂ ಈಶಾನ್ಯ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ಕನಿಷ್ಠ ತಾಪಮಾನ ಕಳೆದ ವಾರದಿಂದಲೂ ಹೆಚ್ಚುಕಡಿಮೆ ಯಥಾಸ್ಥಿತಿ ಇದೆ. ಆದರೆ ಕನಿಷ್ಠ ತಾಪಮಾನ ಇದ್ದಾಗ ಗಾಳಿ ಬೀಸಿದರೆ ಚಳಿಯ ಅನುಭವ ತೀವ್ರವಾಗುತ್ತದೆ. ಇದೇ ಕಾರಣಕ್ಕೆ ಸೋಮವಾರ ಚಳಿಯ ಅನುಭವ ಹೆಚ್ಚಾಗಿದೆ ಎಂದು ತಿಳಿಸಿದರು. ಅಲ್ಲದೇ, ಮುಂದಿನ ಎರಡು ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ. ಗಾಳಿಯಿಂದಾಗಿ ಚಳಿಯ ತೀವ್ರತೆ ಹೆಚ್ಚಾಗಿ ಅನುಭವಕ್ಕೆ ಬರಲಿದೆ. ಕ್ರಮೇಣ ಚಳಿಯ ಅನುಭವ ಕಡಿಮೆಯಾಗಲಿದೆ ಎಂದರು.
