ಬೆಂಗಳೂರು (ಆ. 05): ಕೃಷ್ಣಾ ಕೊಳ್ಳ ಪ್ರದೇಶಗಳಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಆ ಭಾಗದ ಜನರಿಗೆ ಸೂಕ್ತ ಪರಿಹಾರ ಒದಗಿಸಲು ಕೇಂದ್ರ ಸರ್ಕಾರದಿಂದ ನೆರವು ಕೋರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ತಮ್ಮ ದೆಹಲಿ ಪ್ರವಾಸ ರದ್ದುಗೊಳಿಸಿ ಮೊದಲು ಕೃಷ್ಣಾ ಕೊಳ್ಳದ ಜನರು ಎದುರಿಸುತ್ತಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಗಮನ ಹರಿಸುವಂತೆ ಕೋರಿ ಕಾಂಗ್ರೆಸ್‌ ನಾಯಕ ಎಚ್‌.ಕೆ.ಪಾಟೀಲ್‌ ಅವರು ಬರೆದಿದ್ದ ಪತ್ರಕ್ಕೆ ಸ್ಪಂದಿಸಿ ಮಾರುತ್ತರ ಬರೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಕೋರುವುದಾಗಿ ತಿಳಿಸಿದ್ದಾರೆ.

 

ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಬೆಳಗಾವಿ, ವಿಜಯಪುರ, ಬಾಗಲ ಕೋಟೆ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಜನ ಹಾಗೂ ಜಾನುವಾರುಗಳ ರಕ್ಷಣೆ, ಆಸ್ತಿಪಾಸ್ತಿಗಳಿಗೆ ಆಗಿರುವ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹಾರ ಕಲ್ಪಿಸಲು ಆಯಾ ಜಿಲ್ಲಾಡಳಿತಗಳನ್ನು ಸಜ್ಜುಗೊಳಿಸಲಾಗಿದೆ. ಭಾನುವಾರ ರಜಾದಿನವಾದರೂ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆ ಎಲ್ಲಾ ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ಬಗ್ಗೆ ಅವಲೋಕನ ಮತ್ತು ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದೇನೆ.

ಅಲ್ಲದೆ, ಆ.5ರ ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೂ ಇಡೀ ದಿನ ಈ ಐದೂ ಜಿಲ್ಲೆಗಳಲ್ಲಿ ಖುದ್ದು ವೈಮಾನಿಕ ಸಮೀಕ್ಷೆ ಕೈಗೊಳ್ಳುತ್ತೇನೆ. ಜತೆಗೆ ನಾನು ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರವಾಹ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಪರಿಹಾರಕ್ಕೆ ನೆರವು ಕೋರುತ್ತೇನೆ. ರಾಜ್ಯದ ಸಂಸದರೊಂದಿಗೂ ಸಭೆ ನಡೆಸಿ ಸಂಕಷ್ಟಪರಿಸ್ಥಿತಿಯಲ್ಲಿ ಕೇಂದ್ರ ಸಹಾಯವನ್ನು ಪಡೆದುಕೊಳ್ಳಲು ಸಹಕಾರ ಕೋರುತ್ತೇನೆ ಎಂದು ಎಚ್‌.ಕೆ. ಪಾಟೀಲ್‌ ಅವರ ಪತ್ರಕ್ಕೆ ಉತ್ತರ ನೀಡಿದ್ದಾರೆ.

ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ್‌ ಅವರು ಭಾನುವಾರ ಯಡಿಯೂರಪ್ಪ ಅವರಿಗೆ ಪತ್ರ ಬರೆದು, ಕೃಷ್ಣಾ ಕೊಳ್ಳ ಪ್ರದೇಶದ ಪ್ರವಾಹದಿಂದ ಕಂಗೆಟ್ಟಿರುವ ಜನರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದ್ದರು.