ಬೆಂಗಳೂರು :  ಜಿಂದಾಲ್‌ ಸ್ಟೀಲ್‌ ಕಂಪನಿಗೆ ಅಗ್ಗದ ದರದಲ್ಲಿ 3,667 ಎಕರೆ ಜಮೀನು ಪರಭಾರೆ ಮಾಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪರ-ವಿರೋಧದ ಜಟಾಪಟಿಗೆ ಬಿದ್ದಿರುವ ಬೃಹತ್‌ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್ ಹಾಗೂ ಎಚ್‌.ಕೆ. ಪಾಟೀಲ್‌ ನಡುವೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರಾಥಮಿಕ ಸಭೆ ನಡೆಸಿ ಸರ್ಕಾರದ ನಿರ್ಧಾರಗಳ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ.

ಅಲ್ಲದೆ, ಜಮೀನು ಪರಭಾರೆ ವಿರುದ್ಧ ಧ್ವನಿ ಎತ್ತಿರುವ ಎಚ್‌.ಕೆ. ಪಾಟೀಲ್‌ ಹಾಗೂ ಮಾರಾಟ ನಿರ್ಧಾರ ಸಮರ್ಥಿಸಿಕೊಳ್ಳುತ್ತಿರುವ ಕೆ.ಜೆ. ಜಾರ್ಜ್ ಇಬ್ಬರೂ ಭಾನುವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಚರ್ಚೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ. ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚಿಸುವ ನಿರ್ಧಾರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ತನ್ಮೂಲಕ ಕಾಂಗ್ರೆಸ್‌ ಪಕ್ಷದೊಳಗಿನ ಜಿಂದಾಲ್‌ ದಂಗಲ್‌ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಂಗಳ ತಲುಪಿದಂತಾಗಿದೆ.

ಜಿಂದಾಲ್‌ ಸ್ಟೀಲ್‌ ಕಂಪನಿಗೆ ಬಳ್ಳಾರಿಯಲ್ಲಿ 3,667 ಎಕರೆ ಜಮೀನು ಅಗ್ಗದ ದರಕ್ಕೆ ಮಾರಾಟ ಮಾಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ಇದನ್ನು ವಿರೋಧ ಪಕ್ಷ ಬಿಜೆಪಿ ವಿರೋಧಿಸಿರುವುದಕ್ಕಿಂತ ತೀವ್ರವಾಗಿ ಕಾಂಗ್ರೆಸ್‌ನ ಹಿರಿಯ ನಾಯಕರ ಎಚ್‌.ಕೆ.ಪಾಟೀಲ್‌ ಅವರೇ ವಿರೋಧಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಎಚ್‌.ಕೆ.ಪಾಟೀಲ್‌ ಎರಡು ಬಾರಿ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧದ ಲೋಕಾಯುಕ್ತ ವರದಿಯಲ್ಲಿ ಜಿಂದಾಲ್‌ ಕಂಪನಿಯ ಹೆಸರು ಇದೆ ಮತ್ತು ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಕಂಪನಿಗೆ ಜಿಂದಾಲ್‌ ಹಣ ಬಾಕಿ ಉಳಿಸಿಕೊಂಡಿದೆ. ಇಂತಹ ಕಂಪನಿಗೆ ಸರ್ಕಾರ ಜಮೀನು ನೀಡಬಾರದು ಎಂದು ಆಗ್ರಹಿಸಿದ್ದರು.

ಎಚ್‌.ಕೆ. ಪಾಟೀಲ್‌ ಅವರ ಈ ಆಕ್ಷೇಪಗಳಿಗೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ್ದ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್, ಜಿಂದಾಲ್‌ ಸ್ಟೀಲ್‌ ಕಂಪನಿಯು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಕಂಪನಿಗೆ ಯಾವುದೇ ರೀತಿಯಲ್ಲಿ ಹಣ ಬಾಕಿ ಉಳಿಸಿಕೊಂಡಿಲ್ಲ. ಜತೆಗೆ ಜಿಂದಾಲ್‌ ಕಂಪನಿಯು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂಬ ಲೋಕಾಯುಕ್ತರ ವರದಿಯನ್ನು ಹೈಕೋರ್ಟ್‌ ತಳ್ಳಿಹಾಕಿದೆ ಎಂದು ಸ್ಪಷ್ಟನೆ ನೀಡಿದ್ದರು.

ಇದಕ್ಕೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದ ಎಚ್‌.ಕೆ.ಪಾಟೀಲ್‌, ರಾಜ್ಯ ಸರ್ಕಾರದ ನಿರ್ಣಯ ಕಾನೂನುಬಾಹಿರ ಎಂದು ಆರು ಪುಟಗಳ ಬಹಿರಂಗ ಪತ್ರ ಹಾಗೂ ಸಂಬಂಧಪಟ್ಟದಾಖಲೆಗಳನ್ನು ಟ್ವೀಟ್‌ ಮಾಡಿ, ಕೂಡಲೇ ನಿರ್ಣಯ ಹಿಂಪಡೆಯುವಂತೆ ಆಗ್ರಹ ಮಾಡಿದ್ದರು. ಈ ಮೂಲಕ ಜಾಜ್‌ರ್‍ ಹಾಗೂ ಎಚ್‌.ಕೆ. ಪಾಟೀಲ್‌ ಜಟಾಪಟಿ ಕಾವು ಪಡೆದಿತ್ತು.

ಇದರ ಬೆನ್ನಲ್ಲೇ ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಇಬ್ಬರೂ ನಾಯಕರನ್ನು ಕಚೇರಿಗೆ ಕರೆಸಿಕೊಂಡು ಮಾತನಾಡಿದ್ದಾರೆ. ಈ ವೇಳೆ ಪಕ್ಷ ಅಥವಾ ಸರ್ಕಾರದ ನಿರ್ಧಾರಗಳನ್ನು ಬಹಿರಂಗ ವೇದಿಕೆಯಲ್ಲಿ ಚರ್ಚಿಸಬಾರದು. ಸರ್ಕಾರದ ನಿರ್ಣಯಗಳ ಬಗ್ಗೆ ಅಸಮಾಧಾನವಿದ್ದರೆ ಪಕ್ಷ ಅಥವಾ ಸರ್ಕಾರದ ಗಮನಕ್ಕೆ ತರಬೇಕು. ವೈಯಕ್ತಿಕವಾಗಿ ಭೇಟಿ ಮಾಡಿ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಬಹಿರಂಗ ಚರ್ಚೆ ಮೂಲಕ ಮಾಧ್ಯಮಗಳು ಹಾಗೂ ವಿರೋಧಪಕ್ಷಗಳಿಗೆ ಆಹಾರವಾಗಬಾರದು ಎಂದು ತಾಕೀತು ಮಾಡಿದ್ದಾರೆ. ಅಲ್ಲದೆ, ಭಾನುವಾರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಿಂದಾಲ್‌ಗೆ ಭೂಮಿ ಮಾರಾಟದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಕೆ.ಜೆ.ಜಾಜ್‌ರ್‍ ಎದುರೇ ದಿನೇಶ್‌ ಗುಂಡೂರಾವ್‌ ಅವರಿಗೆ ಹೇಳಿದ್ದೇನೆ. ಜಾಜ್‌ರ್‍ ಕೂಡ ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಮೈತ್ರಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೇವೆ. ಭಾನುವಾರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಈ ವೇಳೆ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ.

- ಎಚ್‌.ಕೆ. ಪಾಟೀಲ್‌, ಮಾಜಿ ಸಚಿವ

ಜಿಂದಾಲ್‌ಗೆ ಭೂಮಿ ನೀಡುವ ವಿಚಾರವಾಗಿ ಭಾನುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಈ ವೇಳೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಒಂದು ತೀರ್ಮಾನವನ್ನು ಮಾಡುತ್ತಾರೆ.

- ಕೆ.ಜೆ.ಜಾರ್ಜ್, ಬೃಹತ್‌ ಕೈಗಾರಿಕೆ ಸಚಿವ

ಜಿಂದಾಲ್‌ಗೆ ಭೂಮಿ ಮಾರಾಟ ಮಾಡುತ್ತಿರುವ ಬಗ್ಗೆ ಎಚ್‌.ಕೆ.ಪಾಟೀಲ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಸಚಿವ ಕೆ.ಜೆ.ಜಾಜ್‌ರ್‍ ಅವರು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಹೀಗಾಗಿ ಜಾಜ್‌ರ್‍ ಹಾಗೂ ಎಚ್‌.ಕೆ. ಪಾಟೀಲ್‌ ಇಬ್ಬರ ಜೊತೆಗೂ ಚರ್ಚೆ ನಡೆಸಿದ್ದೇನೆ. ರಾಜ್ಯದ ಹಿತದೃಷ್ಟಿಯಿಂದ ಉತ್ತಮ ತೀರ್ಮಾನಕ್ಕೆ ಬಂದಿದ್ದೇವೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ