ವಾಸ್ತವವಾಗಿ ತಮ್ಮ ಮೊದಲ ಪುತ್ರ ರಾಕೇಶ್‌ ಅವರನ್ನು ಕಣಕ್ಕೆ ಇಳಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ವರುಣಾ ಕ್ಷೇತ್ರದ ಹೊಣೆಗಾರಿಕೆಯನ್ನು ರಾಕೇಶ್‌ಗೆ ನೀಡಿದ್ದರು. ಆದರೆ, ರಾಕೇಶ್‌ ಅಕಾಲಿಕ ಸಾವಿನಿಂದ ಪರಿಸ್ಥಿತಿ ಬದಲಾಯಿತು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಎರಡನೇ ಪುತ್ರ ಡಾ| ಯತೀಂದ್ರ ಅವರಿಗೆ ಟಿಕೆಟ್‌ ಕೊಡಿಸುವುದು ಬಹುತೇಕ ಖಚಿತ ಎಂದು ಸಿಎಂ ಆಪ್ತ ಮೂಲಗಳು ಹೇಳುತ್ತವೆ. ಈ ಕಾರಣಕ್ಕಾಗಿಯೇ ಅವರು ಕಳೆದ ಬಾರಿ ತಾವು ಸ್ಪರ್ಧಿಸಿದ್ದ ವರುಣಾ ಕ್ಷೇತ್ರವನ್ನು ಬಿಟ್ಟು ತಮ್ಮ ಹಳೆಯ ಕ್ಷೇತ್ರವಾದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ವಲಸೆ ಹೋಗಲಿದ್ದಾರೆ. ವರುಣಾ ಕ್ಷೇತ್ರದಲ್ಲಿ ಡಾ| ಯತೀಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ವಾಸ್ತವವಾಗಿ ತಮ್ಮ ಮೊದಲ ಪುತ್ರ ರಾಕೇಶ್‌ ಅವರನ್ನು ಕಣಕ್ಕೆ ಇಳಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ವರುಣಾ ಕ್ಷೇತ್ರದ ಹೊಣೆಗಾರಿಕೆಯನ್ನು ರಾಕೇಶ್‌ಗೆ ನೀಡಿದ್ದರು. ಆದರೆ, ರಾಕೇಶ್‌ ಅಕಾಲಿಕ ಸಾವಿನಿಂದ ಪರಿಸ್ಥಿತಿ ಬದಲಾಯಿತು. ಈ ಘಟನೆಯವರೆಗೂ ರಾಜಕೀಯದಿಂದ ದೂರವಿದ್ದ ಡಾ| ಯತೀಂದ್ರ, ಕೆಲ ತಿಂಗಳಿನಿಂದ ಕ್ರಮೇಣ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳತೊಡಗಿದರು. ಈಗ ರಾಕೇಶ್‌ ನಿರ್ವಹಿಸುತ್ತಿದ್ದ ಹೊಣೆಗಾರಿಕೆಯನ್ನು ಯತೀಂದ್ರ ನಿರ್ವಹಿಸುತ್ತಿದ್ದು, ಮೈಸೂರಿನ ವ್ಯವಹಾರಗಳನ್ನು ಯತೀಂದ್ರ ನೋಡಿಕೊಳ್ಳುತ್ತಿದ್ದಾರೆ ಎನ್ನುತ್ತವೆ ಸಿಎಂ ಆಪ್ತ ಮೂಲಗಳು.

ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಪ್ರಚಾರದ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಯತೀಂದ್ರ ಅವರು ನಿರ್ವಹಿಸಿದ್ದರು. ತಮ್ಮ ಸ್ನೇಹಿತರ ತಂಡದೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ತನ್ಮೂಲಕ ಯತೀಂದ್ರ ಅವರು ರಾಜಕೀಯ ಆಸಕ್ತಿ ಬೆಳೆಸಿಕೊಂಡಿರುವುದು ಸ್ಪಷ್ಟ. ಸಿಎಂ ಆಪ್ತ ಮೂಲಗಳ ಪ್ರಕಾರ ಮುಂದಿನ ಚುನಾವಣೆಗೆ ಯತೀಂದ್ರ ಅವರಿಗೆ ಟಿಕೆಟ್‌ ಕೊಡಿಸುವ ಪ್ರಯ​ತ್ನ​ವನ್ನು ಸಿಎಂ ಈಗಾಗಲೇ ಆರಂಭಿ​ಸಿದ್ದಾರೆ. ಹೈಕಮಾಂಡ್‌ನ ಕೆಲ ವರಿಷ್ಠರ ಬಳಿ ವರುಣಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕೆ ಇಳಿಸುವ ಬಯಕೆಯನ್ನು ಅರುಹಿಕೊಂಡಿದ್ದು, ಇದಕ್ಕೆ ಗ್ರೀನ್‌ ಸಿಗ್ನಲ್‌ ದೊರಕಿದೆ ಎಂದು ಮೂಲಗಳು ಹೇಳುತ್ತವೆ.