ವಕೀಲರ ಉಪವಾಸಕ್ಕೆ ಸಿಎಂ ಬೆಂಬಲ

First Published 6, Feb 2018, 8:56 AM IST
CM Siddharamaiah Supports to Advocates
Highlights

ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ಗೆ ಆಗ್ರಹಿಸಿ ವಕೀಲರು ಸೋಮವಾರ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ವಿಶೇಷವೆಂದರೆ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನಾನಿರತ ವಕೀಲರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರಲ್ಲದೆ, ನ್ಯಾಯಮೂರ್ತಿಗಳ ನೇಮಕಾತಿ ಬಗ್ಗೆ ಸದನದಲ್ಲಿ ಗೊತ್ತುವಳಿ ಅಂಗೀಕಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

ಬೆಂಗಳೂರು (ಫೆ.06): ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ಗೆ ಆಗ್ರಹಿಸಿ ವಕೀಲರು ಸೋಮವಾರ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ವಿಶೇಷವೆಂದರೆ, ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನಾನಿರತ ವಕೀಲರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರಲ್ಲದೆ, ನ್ಯಾಯಮೂರ್ತಿಗಳ ನೇಮಕಾತಿ ಬಗ್ಗೆ ಸದನದಲ್ಲಿ ಗೊತ್ತುವಳಿ ಅಂಗೀಕಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

 

ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕಾತಿ ಮಾಡುವುದರಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇದು ಸರಿಯಲ್ಲ. ವಕೀಲರ ಉಪವಾಸ ಮುಷ್ಕರಕ್ಕೆ ನಮ್ಮ ಬೆಂಬಲವಿದೆ. ದೆಹಲಿಗೆ ಹೋದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರನ್ನು ಭೇಟಿ ಮಾಡಿ ನ್ಯಾಯಮೂರ್ತಿ ಹುದ್ದೆಗಳ ನೇಮಕ ಸಂಬಂಧ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿಯಿರುವ 38 ನ್ಯಾಯಮೂರ್ತಿಗಳ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕರ್ನಾಟಕ ವಕೀಲರ ಪರಿಷತ್‌, ಬೆಂಗಳೂರು ವಕೀಲರ ಸಂಘದ ಸದಸ್ಯ ವಕೀಲರು ಹಾಗೂ ಹಿರಿಯ ವಕೀಲರು ಸೋಮವಾರದಿಂದ ನಗರದ ಹೈಕೋರ್ಟ್‌ನ ಗೋಲ್ಡನ್‌ ಜ್ಯೂಬಿಲಿ ಗೇಟ್‌ ಎದುರು ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಬೆಳಗ್ಗೆ 10.30ಕ್ಕೆ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು. ಹಿರಿಯ ವಕೀಲರರಾದ ಬಿ.ವಿ.ಆಚಾರ್ಯ, ಕೆ.ಸುಬ್ಬರಾವ್‌, ಉದಯ ಹೊಳ್ಳ, ಎಸ್‌.ಎಸ್‌.ನಾಗಾನಂದ್‌, ಪ್ರೊ.ರವಿವರ್ಮ ಕುಮಾರ್‌, ಅಶೋಕ್‌ ಹಾರನಹಳ್ಳಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಸೇರಿದಂತೆ 250ಕ್ಕೂ ಹೆಚ್ಚು ಜನ ಸತ್ಯಾಗ್ರಹ ಭಾಗವಹಿಸಿದರು. ಮಧ್ಯಾಹ್ನದ ವೇಳೆಗೆ ಪ್ರತಿಭಟನಾನಿರತರನ್ನು ಭೇಟಿ ಮಾಡಲು ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರಣಿ ನಿರತರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಮನವಿ ಪತ್ರ ಸ್ವೀಕರಿಸಿದರು. ಸ್ಥಳಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ ಮತ್ತು ವಿಧಾನಪರಿಷತ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಭೇಟಿ ನೀಡಿ, ವಕೀಲರ ಜತೆ ಮಾತುಕತೆ ನಡೆಸಿದರು.

ಈ ವೇಳೆ ಹಿರಿಯ ವಕೀಲ ಬಿ.ವಿ.ಆಚಾರ್ಯ ಮಾತನಾಡಿ, 2017ರ ಫೆಬ್ರವರಿಯಲ್ಲಿ ಹಲವು ರಾಜ್ಯ ಹೈಕೋರ್ಟ್‌ಗಳಿಗೆ 150 ನ್ಯಾಯಾಮೂರ್ತಿಗಳ ನೇಮಕ ಮಾಡಲಾಯಿತು. ಆದರೆ, ಕರ್ನಾಟಕ ಹೈಕೋರ್ಟ್‌ಗೆ ಕೇವಲ ಇಬ್ಬರನ್ನು ನೇಮಿಸಲಾಯಿತು. ಸದ್ಯ ಹೈಕೋರ್ಟ್‌ನಲ್ಲಿ ಸುಮಾರು ಮೂರು ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ. ಕರ್ನಾಟಕ ಹೈಕೋರ್ಟ್‌ಗೆ 62 ನ್ಯಾಯಮೂರ್ತಿಗಳ ನೇಮಕಕ್ಕೆ ಅವಕಾಶವಿದೆ. ಆದರೆ, ಸದ್ಯ 24 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, 38 ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಿವೆ. ಇದರಿಂದ ಕಕ್ಷಿದಾರರಿಗೆ ನ್ಯಾಯದಾನ ಮಾಡಲು ವಿಳಂಬವಾಗುತ್ತಿದೆ. ಕೊಲಿಜಿಯಂ ಹಾಗೂ ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ನ್ಯಾಯಾಲಯದ ಬಗ್ಗೆ ಜನರಿಗೆ ನಂಬಿಕೆ ಉಳಿಯಬೇಕು ಎನ್ನುವುದಾದರೆ ಶೀಘ್ರ ನ್ಯಾಯಮೂರ್ತಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ವಕೀಲರು ಶುಕ್ರವಾರದವರೆಗೆ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

 

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗಳ ಭರ್ತಿ ವಿಚಾರದಲ್ಲಿ ವ್ಯತ್ಯಾಸವಾಗಿದೆ. ನಮ್ಮ ಹಿರಿಯ ವಕೀಲರು ಈ ರೀತಿ ಧರಣಿಗೆ ಕೂತಿರುವುದು ವಿಷಾದನೀಯ. ಕೊಲಿಜಿಯಂ ಸೂಚಿಸಿದ ಹೆಸರುಗಳನ್ನು ಕೇಂದ್ರ ಸರ್ಕಾರ ನೇಮಕ ಮಾಡುತ್ತಿದೆ. ಅದರಂತೆ ಈ ಹಿಂದೆ ನಾನು ಕೇಂದ್ರ ಕಾನೂನು ಸಚಿವನಾಗಿದ್ದಾಗ ನ್ಯಾಯಮೂರ್ತಿಗಳ ನೇಮಕಕ್ಕೆ ಪ್ರಯತ್ನಿಸಿದ್ದೆ. ಕೊಲಿಜಿಯಂ ಸೂಚಿಸಿದ್ದ ಹೆಸರುಗಳಿಗೆ ರಾಜ್ಯ ಸರ್ಕಾರವೇ ತಕರಾರು ತೆಗೆದಿತ್ತು. ಆನಂತರ ಕಾರಣಾಂತರಗಳಿಂದ ಅಗತ್ಯ ಪ್ರಮಾಣದಲ್ಲಿ ನೇಮಕಾತಿ ಆಗಲಿಲ್ಲ. ನಾಳೆ ದೆಹಲಿಗೆ ತೆರಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಾನೂನು ಸಚಿವರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ. ಸದ್ಯಕ್ಕೆ ಧರಣಿ ಹಿಂಪಡೆಯಬೇಕು.

- ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ

loader