ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ರೂ. 5 ಕೋಟಿ, ಬೆಳ್ಳಿ ಪದಕಕ್ಕೆ ರೂ. 3 ಕೋಟಿ ಮತ್ತು ಕಂಚು ಪದಕವನ್ನು ಮುಡಿಗೇರಿಸಿಕೊಳ್ಳುವ ಕ್ರೀಡಾಪಟುಗಳಿಗೆ ರೂ. 2 ಕೋಟಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು (ಡಿ. 26): ರಾಜ್ಯದ ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಬಹುಮಾನ ಘೋಷಣೆ ಮಾಡಿದ್ದಾರೆ.
ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ರೂ. 5 ಕೋಟಿ, ಬೆಳ್ಳಿ ಪದಕಕ್ಕೆ ರೂ. 3 ಕೋಟಿ ಮತ್ತು ಕಂಚು ಪದಕವನ್ನು ಮುಡಿಗೇರಿಸಿಕೊಳ್ಳುವ ಕ್ರೀಡಾಪಟುಗಳಿಗೆ ರೂ. 2 ಕೋಟಿ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ನಗರದ ಯವನಿಕಾ ಸಭಾಂಗಣದಲ್ಲಿ ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ ನೀಡಿದ ಒಲಿಂಪಿಕ್ಸ್ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ದೇಶದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದರೆ, ದೇಶಕ್ಕೆ ಕೀರ್ತಿ ಬರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಗುರುತಿಸಿಕೊಳ್ಳುವ ಜತೆಗೆ, ಕ್ರೀಡಾಪಟುವಿನ ಪ್ರತಿಭೆ ಅನಾವರಣಗೊಳ್ಳಲಿದೆ. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಹುಮಾನ ನೀಡಲಾಗುತ್ತಿದೆ ಎಂದು ಹೇಳಿದರು.
ಕಡಿಮೆ ಆದ್ಯತೆಗೆ ಅಸಮಾಧಾನ:
ದೇಶದ ಕ್ರೀಡಾಪಟುಗಳು ಕಾಮನ್ವೆಲ್ತ್, ಏಷ್ಯನ್ ಗೇಮ್ಸ್ಗಳಲ್ಲಷ್ಟೇ ಸಾಧನೆ ಮಾಡುತ್ತಿದ್ದಾರೆ. ಆದರೆ, ಒಲಿಂಪಿಕ್ಸ್ನಲ್ಲಿ ಮಾತ್ರ ಅಷ್ಟಕಷ್ಟೆ. ಈ ಬಾರಿ ಕುಸ್ತಿ ಮತ್ತು ಬ್ಯಾಡ್ಮಿಂಟನ್ಗಳಲ್ಲಿ ಮಾತ್ರ ಕ್ರಮವಾಗಿ ಕಂಚು ಮತ್ತು ಬೆಳ್ಳಿ ಪದಕ ಗೆದ್ದಿದ್ದಾರೆ. ಆದ್ದರಿಂದ ಹೆಚ್ಚಿನ ಪರಿಶ್ರಮ ವಹಿಸಿ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಬೇಕು. ದೇಶದಲ್ಲಿ 125 ಕ್ಕೂ ಹೆಚ್ಚು ಕೋಟಿ ಜನರಿದ್ದರೂ ಕ್ರೀಡೆಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಈ ಬಗ್ಗೆ ಕ್ರೀಡಾ ಇಲಾಖೆಯು ಕ್ರೀಡಾಪಟುಗಳಿಗೆ ಪೂರಕ ಅಗತ್ಯತೆಗಳು, ಸೌಕರ್ಯಗಳು ಮತ್ತು ಸಲಕರಣೆಗಳನ್ನು ಒದಗಿಸಲು ಆಸಕ್ತಿ ವಹಿಸುವಂತೆ ತಿಳಿಸಿದರು.
ಮುಂದಿನ ಬಜೆಟ್ನಲ್ಲಿ ಕ್ರೀಡಾ ಇಲಾಖೆಗೆ ಹೆಚ್ಚಿನ ಅನುದಾನ ನೀಡಲು ಚಿಂತನೆ ನಡೆಸಲಾಗುವುದು. ಅದರಂತೆ ಫಲಿತಾಂಶ ಕೂಡ ಬಂದರೆ, ಅನುದಾನ ನೀಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಯುವಜನ ಸೇವಾ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಕೇಂದ್ರ ಮತ್ತು ವಿವಿಧ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕ್ರೀಡಾ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಹೀಗಾಗಿಯೇ ದೇಶದಲ್ಲಿಯೇ ಅತಿ ಹೆಚ್ಚು (13) ಸಿಂಥೆಟಿಕ್ ಟ್ರ್ಯಾಕ್ಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಕ್ರೀಡಾರತ್ನ, ಏಕಲವ್ಯ ಪ್ರಶಸ್ತಿಗಳನ್ನು ನೀಡುತ್ತಿರುವಂತೆಯೇ ಖಾಸಗಿ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ ಕ್ರೀಡಾಪಟುಗಳಿಗೂ ಪ್ರಶಸ್ತಿ ನೀಡಲು ಸೂಚಿಸಲಾಗಿದೆ. 32 ಕ್ರೀಡಾ ಹಾಸ್ಟೆಲ್ಗಳಲ್ಲಿ ಹಾಕಿ, ಅಥ್ಲೆಟಿಕ್ಸ್ ಸೇರಿದಂತೆ ರೂ. 4 ಕೋಟಿ ವೆಚ್ಚದಲ್ಲಿ 6 ಅಕಾಡೆಮಿಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರಶಸ್ತಿ ವಿಜೇತರು
ಎಚ್.ಎಂ. ಜ್ಯೋತಿ- ಅಥ್ಲೆಟಿಕ್ಸ್, ಶಿಖಾ ರಾಜೇಶ್ ಗೌತಮ್- ಬ್ಯಾಡ್ಮಿಂಟನ್, ಎಚ್.ಎಂ. ಬಾಂಧವ್ಯ- ಬಾಸ್ಕೆಟ್ಬಾಲ್, ಸಂದೇಶ್ ಎಂ. ಉಪ್ಪಾರ್- ಸೈಕ್ಲಿಂಗ್, ಎಸ್. ಚಿಕ್ಕರಂಗಪ್ಪ- ಗಾಲ್ಫ್, ಎಸ್.ಕೆ. ಉತ್ತಪ್ಪ- ಹಾಕಿ, ಮಲ್ಲಪ್ರಭ ಜಾಧವ್- ಜುಡೋ, ಉಷಾರಾಣಿ ಎನ್.- ಕಬಡ್ಡಿ, ಮಯೂರ್ ಡಿ. ಬಾನು- ಶೂಟಿಂಗ್, ದಾಮಿನಿ ಕೆ. ಗೌಡ- ಈಜು, ಅನಿತಾ ಆರ್.- ಟೀಕ್ವುಂಡೋ, ಅರ್ಚನಾ ಗಿರೀಶ್ ಕಾಮತ್- ಟೇಬಲ್ ಟೆನ್ನಿಸ್, ಧೃತಿ ಟಿ. ವೇಣುಗೋಪಾಲ್- ಟೆನ್ನಿಸ್, ವಿನಾಯಕ್ ಎಲ್. ರೋಕಡೆ- ವಾಲಿಬಾಲ್, ನವೀನ್ಚಂದ್ರ- ವೇಟ್ ಲಿಫ್ಟಿಂಗ್, ಜಿ. ಮೋಹನ್- ಛಾಯಾಗ್ರಾಹಕ, ಬಿ.ಜೆ. ಕಾರಿಯಪ್ಪ- ಹಾಕಿ, ಶರಣ್ಗೌಡ ಬೆಲೆರಿ- ವ್ರಿಷ್ಟ್ಲಿಂಗ್ ಕೋಚ್, ಎನ್. ವಿನಯ ಹೆಗ್ಡೆ- ಕ್ರೀಡಾ ಪ್ರೊಮೋಟರ್.
