ಬಬಲೇಶ್ವರದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ  ಬಿಜೆಪಿ ಪರಿವರ್ತನಾ ಯಾತ್ರೆ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯಪುರ (ಡಿ.20): ಬಬಲೇಶ್ವರದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಬಿಜೆಪಿ ಪರಿವರ್ತನಾ ಯಾತ್ರೆ ವಿರುದ್ಧ ಹರಿಹಾಯ್ದಿದ್ದಾರೆ.

ಪರಿವರ್ತನೆ ಆಗಬೇಕಿದ್ದು ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ, ಶೋಭಾ ಕರಂಬ್ಲಾಜೆ ಹಾಗೂ ಬಿಜೆಪಿ ಮುಖಂಡರು. ಬಿಎಸ್’ವೈ ಜನರಿಗೆ ಕೊಟ್ಟಿದ್ದು ಸೈಕಲ್ ಹಾಗೂ ಹರಿದ ಸೀರೆ ಅಷ್ಟೇ. ಬಿಟ್ಟರೆ ಬಿಎಸ್’ವೈ ಜೈಲಿಗೆ ಹೋಗಿ ಬಂದಿದ್ದು ಕೊಡುಗೆ ಮಾತ್ರ. ಬಿಜೆಪಿ ಅಧಿಕಾರವಿದ್ದಾಗ ಮೂವರು ಸಚಿವರು ತಮ್ಮ ಮಾನಗೆಟ್ಟು, ಲಚ್ಚೆಗೆಟ್ಟು ವಿಧಾನ ಸೌಧದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ಇಂತವರನ್ನು ಮುಂದಿನ ಬಾರಿ ಎಂ.ಎಲ್.ಎ ಹಾಗೂ ಸಚಿವರು ಆಗೋಕೆ ಯೋಗ್ಯರಾ? ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

ಅಚ್ಚೆ ದಿನ ಆಯೇಗಾ ಅಂತ ಮೂರು ವರ್ಷದಿಂದ ಹೇಳ್ತಾ ಇದ್ದಾರೆಯೇ ಹೊರತು ಯಾವುದೇ ಕೆಲಸ ಮಾಡಿಲ್ಲ. ಇನ್ನೂ ಬಡ ಮಕ್ಕಳಿಗೆ, ದಲಿತರಿಗೆ, ಮಹಿಳೆಯರಿಗೆ ಅಚ್ಚೇ ದಿನ ಬರಲಿಲ್ಲ. ಪ್ರಧಾನಿ ಮೋದಿ ಅವರಿಂದ ಶ್ರೀಮಂತರಿಗೆ ಮಾತ್ರ ಅಚ್ಚೆ ದಿನಾ ಮಾತ್ರ . ವಿದೇಶದಲ್ಲಿರುವ ಕಪ್ಪು ಹಣ ಮರಳಿ ತರುವುದಾಗಿ ಮೋದಿ ಹೇಳಿದ್ರು. ಆದರೆ ಇಲ್ಲಿಯವರೆಗೂ ಕಪ್ಪು ಹಣ ತಂದಿಲ್ಲ. ಅಲ್ಲದೇ ಕಪ್ಪು ತಂದು ಬಡವರಿಗೆ 15 ಲಕ್ಷ ಬ್ಯಾಂಕ್’ಗಳಿಗೆ ಹಾಕ್ತೀನಿ ಅಂದಿದ್ರು. ಆದರೆ ಇಲ್ಲಿಯವರೆಗೂ 15 ರೂಪಾಯಿ ಕೂಡ ಕೊಟ್ಟಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಕೂಡ ಮೋದಿ ಕೆಲಸ ಮಾಡಿಲ್ಲ. ಹಣ ಹೂಡಿಕೆಯಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ನಾನು ತಂದಿದ್ದೇನೆ. ದಲಿತರ ಮನೆಗೆ ಈಗ ಬಿಜೆಪಿ ಮುಖಂಡರು ಭೇಟಿ ನೀಡುತ್ತಿದ್ದಾರೆ. ಬಿಜೆಪಿನವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ನಿಮ್ಮ ಮಕ್ಕಳಿಗೆ ದಲಿತರ ಹೆಣ್ಣುಮಕ್ಕಳನ್ನು ಮನೆ ತುಂಬಿಸಿಕೊಳ್ಳಿ ಎಂದು ಸಿಎಂ ಸವಾಲು ಹಾಕಿದ್ದಾರೆ.