Asianet Suvarna News Asianet Suvarna News

ಮೋದಿ-ಸಿದ್ದು ಏಟು-ಎದಿರೇಟು

ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರ, ಈ ರಾಜ್ಯದಲ್ಲಿ ಕೈಗಾರಿಕೆ ಆರಂಭಿಸುವುದಕ್ಕಿಂತ ಕೊಲೆ ಮಾಡುವುದು ಸುಲಭ, ಕೇಂದ್ರ ಹಣ ನೀಡಿದರೂ ಅದನ್ನು  ಬಳಸಿಕೊಳ್ಳುತ್ತಿಲ್ಲ, ಈ ಕಡು ಭ್ರಷ್ಟ ಸರ್ಕಾರದ ಕೌಂಟ್'ಡೌನ್ ಆರಂಭಗೊಂಡಿದೆ ಎಂದು ತೀವ್ರವಾಗಿ  ಹರಿಹಾಯ್ದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

CM Siddharamaiah and Narendra Modi Counter Attack

ಬೆಂಗಳೂರು (ಫೆ.06): ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಪರ್ಸಂಟೇಜ್ ಸರ್ಕಾರ, ಈ ರಾಜ್ಯದಲ್ಲಿ ಕೈಗಾರಿಕೆ ಆರಂಭಿಸುವುದಕ್ಕಿಂತ ಕೊಲೆ ಮಾಡುವುದು ಸುಲಭ, ಕೇಂದ್ರ ಹಣ ನೀಡಿದರೂ ಅದನ್ನು  ಬಳಸಿಕೊಳ್ಳುತ್ತಿಲ್ಲ, ಈ ಕಡು ಭ್ರಷ್ಟ ಸರ್ಕಾರದ ಕೌಂಟ್'ಡೌನ್ ಆರಂಭಗೊಂಡಿದೆ ಎಂದು ತೀವ್ರವಾಗಿ  ಹರಿಹಾಯ್ದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಭಾನುವಾರ ಸಂಜೆಯೇ ಮೋದಿ ವಿರುದ್ಧ  ಹರಿಹಾಯ್ದಿದ್ದರೆ ಸೋಮವಾರ ಸಿದ್ದರಾಮಯ್ಯ ಅವರು, ಜೈಲಿಗೆ ಹೋಗಿಬಂದ ಯಡಿಯೂರಪ್ಪ ಅವರನ್ನು ಪಕ್ಕ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವುದೇ ನಾಚಿಕೆಗೇಡಿನ ಸಂಗತಿ. ಆಧಾರರಹಿತವಾಗಿ ಒಂದು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವ ಮೋದಿ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುವ ನೈತಿಕ ಹಕ್ಕು ಹೊಂದಿಲ್ಲ. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗೋದ್ರಾ ಘಟನೆಯ ಮೂಲಕ 2 ಸಾವಿರ ಮಂದಿಯ ಸಾವಿಗೆ  ಕಾರಣರಾದ ಮೋದಿ ಅವರು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಪತನದ ಕೌಂಟ್‌ಡೌನ್ ಬಗ್ಗೆ ಮೋದಿ ಹೇಳುತ್ತಾರೆ. ಆದರೆ, ರಾಜಸ್ಥಾನ ಉಪಚುನಾವಣೆ ಫಲಿತಾಂಶವು ಪ್ರಧಾನಿ ಹುದ್ದೆಯಿಂದ ಮೋದಿ ನಿರ್ಗಮನದ ಕೌಂಟ್‌ಡೌನ್ ಆರಂಭವಾಗಿರುವುದನ್ನು ತೋರಿಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಮೋದಿ: ರಾಜ್ಯ ಸರ್ಕಾರದಲ್ಲಿ ಶೇ.10 ಲಂಚ ಕೊಡದಿದ್ದರೆ ಯಾವುದೇ ಕೆಲಸ ನಡೆಯುವುದಿಲ್ಲ. ಗುತ್ತಿಗೆ ಸೇರಿ ವಿವಿಧ ಯೋಜನೆಗೆ ಶೇ.10 ಕಮಿಷನ್ ಕೊಟ್ಟರಷ್ಟೇ ಕೆಲಸ ಆಗುತ್ತದೆ. ಈ ಬಗ್ಗೆ ರಾಜ್ಯದ ಜನತೆ ಮತಗಳ ಮೂಲಕ ಉತ್ತರಿಸಬೇಕು.

ಸಿದ್ದು: ಇದು ಆಧಾರ ರಹಿತ, ಬೇಜವಾಬ್ದಾರಿ ಆರೋಪ. ಯಾವ ಯೋಜನೆಯಲ್ಲಿ ಕಮಿಷನ್ ಪಡೆದಿದ್ದೇವೆ ಎಂದು ದಾಖಲೆ ಬಿಡುಗಡೆ ಮಾಡಲಿ. ಮೋದಿ ಗುಜರಾತ್ ಸಿಎಂ ಆಗಿದ್ದಾಗ ತಮ್ಮ ಭ್ರಷ್ಟಾಚಾರ ಹೊರಗೆ ಬರುತ್ತದೆ ಎಂದು ಲೋಕಾಯುಕ್ತರನ್ನೇ ನೇಮಕ ಮಾಡಲಿಲ್ಲ. ಈಗ ಲೋಕಪಾಲರನ್ನೂ ನೇಮಕ ಮಾಡುತ್ತಿಲ್ಲ.

ಮೋದಿ: ರಾಜ್ಯದ ಹಲವು ಸಚಿವರ ವಿರುದ್ಧ ಗಂಭೀರ ಆರೋಪಗಳಿಗಳಿವೆ. ಹಲವರ ಮೇಲೆ ಐಟಿ ದಾಳಿ ನಡೆದಿದೆ. ಕೆಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಜ್ಯದಲ್ಲಿ ಮರಳು, ಕಲ್ಲು, ಗಣಿಗಾರಿಕೆ ಮಾಫಿಯಾ ನಡೆಯುತ್ತಿದೆ.

ಸಿದ್ದು: ಯಡಿಯೂರಪ್ಪ , ಕಟ್ಟಾ, ಕೃಷ್ಣಯ್ಯ ಶೆಟ್ಟಿ, ರೆಡ್ಡಿ ಜೈಲಿಗೆ ಹೋಗಿ ಬಂದಿದ್ದಾರೆ. ಭ್ರಷ್ಟಾಚಾರ ಕೇಸಲ್ಲಿ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಮೋದಿ ಹೊರಟಿದ್ದಾರೆ. ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಅಮಿತ್ ಶಾ ಪುತ್ರನ ಆಸ್ತಿ ಅಪನಗದೀಕರಣಕ್ಕೆ ಮೊದಲು ಎಷ್ಟು ಇತ್ತು, ಈಗ ಎಷ್ಟಿದೆ?

ಮೋದಿ: ಕರ್ನಾಟಕ ಕ್ರೈಮ್ ರಾಜ್ಯ ಆಗುತ್ತಿದೆ. ಬಿಜೆಪಿಗರ ಹತ್ಯೆ ನಡೆಯುತ್ತಿದೆ, ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ.

ಸಿದ್ದು: ರಾಷ್ಟ್ರೀಯ ದಾಖಲಾತಿ ವರದಿ ಪ್ರಕಾರ ಉತ್ತರ ಪ್ರದೇಶದಲ್ಲಿ ಅಪರಾಧ ಅತಿ ಹೆಚ್ಚು. ಅಲ್ಲಿ  ಬಿಜೆಪಿ ಆಡಳಿತವಿದೆ. ನಂತರ ಬಿಜೆಪಿ ಆಡಳಿತವಿರುವ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಹರ‌್ಯಾಣ ಬರುತ್ತವೆ. ಕರ್ನಾಟಕ 10 ನೇ ಸ್ಥಾನದಲ್ಲಿದೆ. ಮೋದಿ ಸಿಎಂ ಆಗಿದ್ದಾಗ 2,000 ಜನ ಸತ್ತರು. ಹರ‌್ಯಾಣದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಸರಿ ಇಲ್ಲದಿದ್ದರೆ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ.1 ಆಗ್ತಿತ್ತೇ?

ಮೋದಿ: ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮೂಲನೆಗೆ ಕೌಂಟ್‌ಡೌನ್ ಶುರು ಆಗಿದೆ. ಬಿಜೆಪಿ ಗೆಲುವು ಹತ್ತಿರವಿದೆ.

ಸಿದ್ದು: ರಾಜಸ್ಥಾನದ 2 ಲೋಕಸಭೆ, 1 ವಿಧಾನ ಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ.

ಹೀಗಾಗಿ ದೇಶದಲ್ಲಿ ಈಗ ಮೋದಿ ಕೌಂಟ್‌ಡೌನ್ ಶುರುವಾಗಿದೆಯೇ ಹೊರತು ಕಾಂಗ್ರೆಸ್‌ಗೆ ಅಲ್ಲ. ಮೋದಿ 100 ಸಲ ರಾಜ್ಯಕ್ಕೆ ಬಂದರೂ, ಅಮಿತ್ ಶಾ ರಾಜ್ಯಕ್ಕೆ ಬಂದು ಕೋಮುಗಲಭೆ ಮಾಡಿಸಿದರೂ, ನೂರಕ್ಕೆ ನೂರರಷ್ಟು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್'ಗೆ ಮತ್ತೆ ಅಧಿಕಾರ ನೀಡಲು ಜನರು ಈಗಾಗಲೇ ತೀರ್ಮಾನಿಸಿದ್ದಾರೆ.

 

 

Follow Us:
Download App:
  • android
  • ios