ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ‘ಜನಾಶೀರ್ವಾದ ಯಾತ್ರೆ’ ಕುರಿತಾದ ಗೊಂದಲಗಳು ಬಗೆಹರಿದಂತಿವೆ. ಸರ್ಕಾರದ ವತಿಯಿಂದ ಹಾಗೂ ಪಕ್ಷದ ವತಿಯಿಂದ ಪ್ರತ್ಯೇಕ ಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ.

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ‘ಜನಾಶೀರ್ವಾದ ಯಾತ್ರೆ’ ಕುರಿತಾದ ಗೊಂದಲಗಳು ಬಗೆಹರಿದಂತಿವೆ. ಸರ್ಕಾರದ ವತಿಯಿಂದ ಹಾಗೂ ಪಕ್ಷದ ವತಿಯಿಂದ ಪ್ರತ್ಯೇಕ ಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ.

ಈ ಪ್ರಕಾರ ಡಿಸೆಂಬರ್ 13ರಿಂದ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳ ಜಾರಿಗಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದು ಸರ್ಕಾರಿ ಪ್ರವಾಸವಾಗಿರುವ ಕಾರಣ ಅದರಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಭಾಗವಹಿಸಲ್ಲ.

ಇದೇ ವೇಳೆ, ಚುನಾವಣೆಗೆ 2 ತಿಂಗಳಿರುವಾಗ ಮಾರ್ಚ್‌ನಿಂದ ರಾಜ್ಯಾದ್ಯಂತ ಪಕ್ಷದ ವತಿಯಿಂದ ‘ಜನಾಶೀರ್ವಾದ ಯಾತ್ರೆ’ ಕೈಗೊಳ್ಳಲು ನಿರ್ಧರಿಸಲಾಗಿದೆ. ಇದರಲ್ಲಿ ಸಿಎಂ ಹಾಗೂ ಜಿ. ಪರಮೇಶ್ವರ ಅವರು ಒಟ್ಟೊಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಖುದ್ದು ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇತ್ತೀಚೆಗೆ ಪರಮೇಶ್ವರ್ ಅವರು ಸಿಎಂ ಜನಾಶೀರ್ವಾದ ಯಾತ್ರೆಯು ಸರ್ಕಾರದ ವತಿಯಿಂದ ನಡೆದರೆ ತಾವು ಪಾಲ್ಗೊಳ್ಳಲ್ಲ ಎಂದಿದ್ದರು. ಇದು ಉಭಯ ನಾಯಕರ ನಡುವೆ ಒಡಕಿದೆ ಎಂಬ ಊಹಾಪೋಹಕ್ಕೆ ನಾಂದಿ ಹಾಡಿತ್ತು. ಹೀಗಾಗಿ ಪಕ್ಷ ಹಾಗೂ ಸರ್ಕಾರಿ ಯಾತ್ರೆಯನ್ನು ಪ್ರತ್ಯೇಕ ಮಾಡಿ ವಿವಾದಕ್ಕೆ ನಾಂದಿ ಹಾಡುವ ಯತ್ನವನ್ನು ಪರಂ-ಸಿಎಂ ಮಾಡಿದಂತಿದೆ.

ಡಿ.13ರಿಂದ ಸರ್ಕಾರಿ ಪ್ರವಾಸ: ‘ಡಿಸೆಂಬರ್ 13ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಕಾರದ ವಿವಿಧ ಕಾರ್ಯ ಕ್ರಮಗಳ ಅನುಷ್ಠಾನಕ್ಕಾಗಿ ಪ್ರವಾಸ ಮಾಡುತ್ತೇನೆ’ ಎಂದು ಸಿದ್ದರಾಮಯ್ಯ ತಿಳಿಸಿದರು. ಸರಕಾರಿ ಕಾರ್ಯಕ್ರಮ ಆಗಿರುವುದರಿಂದ ಕೆಪಿಸಿಸಿ ಅಧ್ಯಕ್ಷರು ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ತಮ್ಮ ಮತ್ತು ಪರಂ ನಡುವೆ ಒಡಕಿದೆ ಎಂದು ಆರೋಪಿಸಿ ವಿನಾಕಾರಣ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಮಾಧ್ಯಮಗಳಿಗೆ ಕಿವಿಮಾತು ಹೇಳಿದರು.

ಮಾರ್ಚ್‌ನಿಂದ ಜನಾಶೀರ್ವಾದ ಯಾತ್ರೆ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸಾಧನೆಗಳನ್ನು ಜನರ ಮುಂದೆ ಇಡಲು ಮಾರ್ಚ್‌ನಿಂದ ರಾಜ್ಯಾದ್ಯಂತ ಪಕ್ಷದ ವತಿಯಿಂದ ‘ಜನಾಶೀರ್ವಾದ ಯಾತ್ರೆ’ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಕಟಿಸಿದರು. ‘ಜನಾಶೀರ್ವಾದ ಯಾತ್ರೆಯಲ್ಲಿ ನಮ್ಮ ಜತೆ ಪಕ್ಷದ ಅಧ್ಯಕ್ಷ ಡಾ. ಪರಮೇಶ್ವರ್ ಅವರೂ ಪಾಲ್ಗೊಳ್ಳಲಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.