ಮೋದಿ ಒಬ್ಬ ಮಹಾನ್ ಸುಳ್ಳುಗಾರ; ಪ್ರಧಾನಿ ಹುದ್ದೆಗೇ ಕಳಂಕ

CM Siddaramaiah Slams PM Modi
Highlights

  • ಭ್ರಷ್ಟರಿಗೆ ಕುಮ್ಮಕ್ಕು ನೀಡುವ ಪ್ರಧಾನಿಯನ್ನು  ಈ ತನಕ ನಾ ನೋಡಿಲ್ಲ
  • ಮೋದಿ ‘ಸೀದಾ ರುಪಯ್ಯಾ ಸರ್ಕಾರ’ ಹೇಳಿಕೆಗೆ ಸಿದ್ದರಾಮಯ್ಯ ಕೆಂಡಾಮಂಡಲ

ಬಾಗಲಕೋಟೆ/ಕೊಪ್ಪಳ : ಪ್ರಧಾನಿ ನರೇಂದ್ರ ಮೋದಿ ಒಬ್ಬ ಮಹಾನ್ ಸುಳ್ಳುಗಾರ. ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರಿಗಳಿಗೆ ಕುಮ್ಮಕ್ಕು ನೀಡುವ ಇಂಥ ಪ್ರಧಾನಿಯನ್ನು ನಾನು ನೋಡಿಲ್ಲ. ಅವರು ಪ್ರಧಾನಿ ಹುದ್ದೆಗೇ ಕಳಂಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಾಗಲಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಹಾಗೂ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ‘ಸೀದಾ ರುಪಯ್ಯಾ ಸರ್ಕಾರ’ ಎಂದು ಲೇವಡಿ ಮಾಡಿರುವ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು. ದಾಖಲೆಯಿಲ್ಲದೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುವ ಪ್ರಧಾನಿ ಮೋದಿ ಮಾತಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಒಂದೋ ಅವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ, ಇಲ್ಲಾ ಆರೋಪಗಳ ಬಗ್ಗೆ ಖಚಿತ ದಾಖಲೆಗಳನ್ನು ನೀಡಲಿ ಎಂದು ಸವಾಲು ಹಾಕಿದರು.

ಮೋದಿ ನಮ್ಮ ಸರ್ಕಾರವನ್ನು ‘ಸೀದಾ ರುಪಯ್ಯಾ’ ಸರ್ಕಾರ ಎನ್ನುತ್ತಿದ್ದಾರೆ. ಗುಜರಾತ್‌ನಲ್ಲಿ ಅವರು ಸಿಎಂ ಆಗಿದ್ದಾಗ 9 ವರ್ಷ ಲೋಕಾಯುಕ್ತರನ್ನೇ ನೇಮಕ ಮಾಡಿರಲಿಲ್ಲ. ಕೇಂದ್ರದಲ್ಲಿ ಲೋಕಪಾಲ ಮಸೂದೆ ಪಾಸ್ ಮಾಡುತ್ತಿಲ್ಲ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕೇ ಇಲ್ಲ ಎಂದರು.

ಗುಂಡು ಹಾರಿಸಿದವರು ರೈತಬಂಧುವೇ?: ದಾವಣಗೆರೆಯ ಬಿಜೆಪಿ ರೈತ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ‘ರೈತಬಂಧು’ ಬಿರುದು ನೀಡಿ ಸನ್ಮಾನಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರೈತರ ಮೇಲೆ ಗುಂಡು ಹಾರಿಸಿದವರಿಗೆ ಈ ಪ್ರಶಸ್ತಿ ನೀಡುತ್ತಾರೆ ಎಂದರೆ ಇಂಥವರಿಗೆ ಏನು ಹೇಳಬೇಕು ಎಂದು ವ್ಯಂಗ್ಯವಾಡಿದರು.

ಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರು ರೈತರ ಸಾವಿಗೆ ಕಾರಣರಾದವರು, ರೈತರ ಸಾಲಮನ್ನಾ ಮಾಡಿ ಎಂದರೆ ನೋಟ್ ಪ್ರಿಂಟ್ ಮಾಡುವ ಮಷಿನ್ ನಮ್ಮ ಬಳಿ ಇಲ್ಲ ಎಂದವರು ಅದು ಹೇಗೆ ರೈತ ಬಂಧು ಆಗುತ್ತಾರೆ ಎಂದು ಇದೇ ವೇಳೆ ಸಿಎಂ ವ್ಯಂಗ್ಯವಾಡಿದರು.

 

loader