‘ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದೇ ತಪ್ಪು. ಇಲ್ಲದಿದ್ದರೆ, ಈ ವೇಳೆಗೆ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಇನ್ನಷ್ಟು ಬಲಗೊಂಡಿರುತ್ತಿತ್ತು. ಪಕ್ಷ ಸೇರುವ ನೆಪದಲ್ಲಿ ಅನುದಾನ ಪಡೆದ ಯೋಗೇಶ್ವರ್ ಈಗ ಅದನ್ನೆಲ್ಲ ನಾನೇ ಮಾಡಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ವಾಸ್ತವವಾಗಿ ಅದು ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸ.’
ಬೆಂಗಳೂರು: ‘ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದೇ ತಪ್ಪು. ಇಲ್ಲದಿದ್ದರೆ, ಈ ವೇಳೆಗೆ ಕಾಂಗ್ರೆಸ್ ಚನ್ನಪಟ್ಟಣದಲ್ಲಿ ಇನ್ನಷ್ಟು ಬಲಗೊಂಡಿರುತ್ತಿತ್ತು. ಪಕ್ಷ ಸೇರುವ ನೆಪದಲ್ಲಿ ಅನುದಾನ ಪಡೆದ ಯೋಗೇಶ್ವರ್ ಈಗ ಅದನ್ನೆಲ್ಲ ನಾನೇ ಮಾಡಿದ್ದು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ವಾಸ್ತವವಾಗಿ ಅದು ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸ.’ - ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿದ ಶಾಸಕ ಸಿ.ಪಿ. ಯೋಗೇಶ್ವರ್ ವಿರುದ್ಧ ಚಾಟಿ ಬೀಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ, ‘ಡಿ.ಕೆ.ಶಿವಕುಮಾರ್ ಹೇಳಿದರು ಅಂತ ಯೋಗೇಶ್ವರ್ ಅವರನ್ನು ಜತೆಗೆ ಕರೆದುಕೊಂಡೆವು. ಅವರು ಕಾಂಗ್ರೆಸ್ ಸಹ ಸದಸ್ಯರಾಗಿದ್ದರು. ತಮ್ಮ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸಾಕಷ್ಟು ಅನುದಾನವನ್ನು ಸರಕಾರದಿಂದ ಪಡೆದುಕೊಂಡರು. ಅನೇಕ ಸಲ ನನ್ನ ಮನೆಗೆ ಬಂದು ಅರ್ಜಿ ಕೊಡುತ್ತಿದ್ದರು. ನಾನು ನಿಷ್ಪಕ್ಷಪಾತವಾಗಿ ಅನೇಕ ಕೆಲಸಗಳಿಗೆ ಅನುದಾನ ಕೊಟ್ಟೆ’ ಎಂದರು.
‘ಆದರೆ, ಆತ ಕ್ಷೇತ್ರದ ತುಂಬೆಲ್ಲ ತನ್ನ ಭಾವಚಿತ್ರಗಳನ್ನೇ ಹಾಕಿಕೊಂಡು ಓಡಾಡಿದರು.ಅನೇಕ ಕಾರ್ಯಕ್ರಮಗಳ ಬಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರಿಗೂ ಮಾಹಿತಿ ನೀಡಲಿಲ್ಲ. ನನ್ನನ್ನೂ ಯಾವುದೇ ಕಾರ್ಯಕ್ರಮಕ್ಕೆ ಕರೆಯಲಿಲ್ಲ. ಈ ಬಗ್ಗೆ ಡಿ.ಕೆ. ಶಿವಕುಮಾರ್ ಬಂದು ನನ್ನ ಬಳಿ ಹೇಳಿದ್ದರೂ, ಪಕ್ಷ ಸೇರಿದ್ದಾರಲ್ಲ ಎಂದು ಸುಮ್ಮನಿದ್ದೆ. ಆದರೆ, ಆತ ಬಿಜೆಪಿ ಸೇರ್ಪಡೆಗೊಂಡು ತಾನೇ ಕೆಲಸ ಮಾಡಿದ್ದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಇಂತಹ ವ್ಯಕ್ತಿಯ ಜತೆಗೆ ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕರ್ತರು ಹೋಗುವುದಿಲ್ಲ’ ಎಂದರು.
ಪೇಜಾವರರ ಬಗ್ಗೆ ಸಿಎಂ ಕಿಡಿ:
ಬಿಜೆಪಿಯವರಿಗೆ ಸಂವಿಧಾನದ ಬಗೆಗೆ ಗೌರವ ಇಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗೆಗೂ ಕನಿಷ್ಠ ಗೌರವ ಇಲ್ಲ. ಪೇಜಾವರ ಸ್ವಾಮೀಜಿ ಸಂವಿಧಾನವೇ ಬದಲಾಗಬೇಕು ಎಂದು ಹೇಳಿದರು. ಹೀಗಾಗಿ ಬಿಜೆಪಿಯವರಿಗೆ ಸಾಮಾಜಿಕ ಕಳಕಳಿಯಾಗಲಿ, ಬದ್ಧತೆಯಾಗಲಿ ಇಲ್ಲ ಎಂದು ಟೀಕಿಸಿದರು
