ಬಿಜೆಪಿಯದ್ದು 90% ಸರ್ಕಾರ! : ಬಿಜೆಪಿ ಸಿಎಂ, ಸಚಿವರು ಜೈಲು ಸೇರಿದ್ದೇ ಸಾಕ್ಷಿ

CM Siddaramaiah Slams BJP Leaders
Highlights

ನಮ್ಮ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂದು ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದೀರಿ. ಆದರೆ, ನಿಮ್ಮ ಹಿಂದಿನ ಸರ್ಕಾರ 90 ಪರ್ಸೆಂಟ್‌ ಸರ್ಕಾರವಾಗಿತ್ತು. ಮುಖ್ಯಮಂತ್ರಿಯಾಗಿದ್ದವರು ಸೇರಿದಂತೆ ಹಲವು ಸಚಿವರು, ಶಾಸಕರು ಜೈಲು ಸೇರಿದ್ದೇ ಇದಕ್ಕೆ ಸಾಕ್ಷ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಪಾದಿಸಿದ್ದಾರೆ.

ಬೆಂಗಳೂರು : ನಮ್ಮ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂದು ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದೀರಿ. ಆದರೆ, ನಿಮ್ಮ ಹಿಂದಿನ ಸರ್ಕಾರ 90 ಪರ್ಸೆಂಟ್‌ ಸರ್ಕಾರವಾಗಿತ್ತು. ಮುಖ್ಯಮಂತ್ರಿಯಾಗಿದ್ದವರು ಸೇರಿದಂತೆ ಹಲವು ಸಚಿವರು, ಶಾಸಕರು ಜೈಲು ಸೇರಿದ್ದೇ ಇದಕ್ಕೆ ಸಾಕ್ಷ್ಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಪಾದಿಸಿದ್ದಾರೆ.

‘ಕೇಂದ್ರ ಸರ್ಕಾರವೇನು ಆಕಾಶದಲ್ಲಿ ತೆರಿಗೆ ವಸೂಲು ಮಾಡುತ್ತದೆಯೇ? ರಾಜ್ಯಗಳಿಂದಲೇ ತೆರಿಗೆ ಸಂಗ್ರಹಿಸಬೇಕು. ಅದು ನಮ್ಮ ಹಕ್ಕು. ಅದರಲ್ಲಿ ನಮ್ಮ ಪಾಲಿದೆ. ಆದರೂ ಕೆಲ ವರು ಆಕಾಶದಿಂದ ಕೊಟ್ಟವರಂತೆ, ತಮ್ಮ ಕೈಯಿಂದ ಕೊಟ್ಟವರಂತೆ ಮಾತನಾಡುತ್ತಾರೆ’ ಎಂದೂ ಅವರು ಹರಿಹಾಯ್ದಿದ್ದಾರೆ.

ಗುರುವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆರೋಪಗಳಿಗೆ ಅವರ ಹೆಸರನ್ನು ಪ್ರಸ್ತಾಪಿಸದೆ ತಿರುಗೇಟು ನೀಡುವ ಪ್ರಯತ್ನ ಮಾಡಿದರು.

ಸಿದ್ದು ಮಾತಿನೇಟು:

ಇದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನ ವಿವರಿಸುತ್ತಲೇ ಪ್ರತಿಪಕ್ಷಗಳ ಸದಸ್ಯರತ್ತ ಕೈತೋರಿ, ‘ನಮ್ಮ ಸರ್ಕಾರದಲ್ಲಿ ಕೆಲಸ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಇಲ್ಲಿರುವ ಎಲ್ಲರೂ ಎದೆ ಮುಟ್ಟಿಹೇಳಲಿ. ನಾನು ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧನಿದ್ದೇನೆ. ನಾವು ನೀಡಿರುವ ಭರವಸೆಗಳನ್ನು ಈಡೇರಿಸುವ ಸಲುವಾಗಿ ಆರ್ಥಿಕ ಶಿಸ್ತಿನ ನಿಯಮಾವಳಿಯ ಮಿತಿಯಲ್ಲೇ ಸಾಲ ಪಡೆದಿದ್ದೇನೆ. ಆದರೆ, ಅದನ್ನೇ ದೊಡ್ಡದಾಗಿ ಹುಯಿಲೆಬ್ಬಿಸಲಾಗುತ್ತಿದೆ’ ಎಂದು ಹೇಳಿದರು.

‘ಬಿಜೆಪಿ ನಾಯಕರು ಕೇಂದ್ರದ ಅನುದಾನದ ಲೆಕ್ಕ ಕೊಡಿ ಎಂಬ ಒತ್ತಾಯ ಮಾಡುತ್ತಾರೆ. ಈಗ ನಾನು ಯಾರಿಗೆ ಲೆಕ್ಕ ಕೊಡುತ್ತಿದ್ದೇನೆ. ನಾನು ಈ ಸದನಕ್ಕೆ ಮತ್ತು ಈ ರಾಜ್ಯದ ಜನರಿಗೆ ಉತ್ತರದಾಯಿತ್ವ ಹೊಂದಿದ್ದೇನೆ. ಸುಮ್ಮನೆ ಸುಳ್ಳು ಲೆಕ್ಕ ಎಂಬುದನ್ನು ಪದೇ ಪದೇ ಹೇಳುತ್ತಾರೆ. ಕೇಂದ್ರ ಸರ್ಕಾರವೇನು ಆಕಾಶದಲ್ಲಿ ತೆರಿಗೆ ವಸೂಲು ಮಾಡುತ್ತದೆಯೇ? ಕೇಂದ್ರದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ. ರಾಜ್ಯಗಳಿಂದಲೇ ತೆರಿಗೆ ಸಂಗ್ರಹಿಸಬೇಕು. ಆದರೂ ಕೆಲವರು ಆಕಾಶದಿಂದ ಕೊಟ್ಟವರಂತೆ, ತಮ್ಮ ಕೈಯಿಂದ ಕೊಟ್ಟವರಂತೆ ಮಾತನಾಡುತ್ತಾರೆ’ ಎಂದು ಕೋಪದಿಂದಲೇ ನುಡಿದರು.

‘ಹಾಗೆ ನೋಡಿದರೆ ನಮಗೆ ಕೇಂದ್ರದಿಂದ ನ್ಯಾಯವಾಗಿ ಬರಬೇಕಾದ ಅನುದಾನದಲ್ಲಿ ಸುಮಾರು 10,500 ಕೋಟಿ ರು.ಗಳಷ್ಟುಖೋತಾ ಆಗಿದೆ. ಇದಕ್ಕೆ ಯಾರು ಲೆಕ್ಕ ಕೊಡುತ್ತಾರೆ?’ ಎಂದು ಖಾರವಾಗಿ ಪ್ರಶ್ನಿಸಿದರು.

‘ಕೆಲವರು ನನ್ನನ್ನು ರಾಜಕೀಯ ವಾಗಿ ಟಾರ್ಗೆಟ್‌ ಮಾಡುತ್ತಾರೆ. ಪರವಾಗಿಲ್ಲ. ನಾನು ಅದನ್ನು ಎದುರಿಸುತ್ತೇನೆ. ಸಮರ್ಥವಾಗಿ ಉತ್ತರಿಸುತ್ತೇನೆ. ನನ್ನ ರಾಜಕೀಯ ಬದುಕು ತೆರೆದ ಪುಸ್ತಕ ಇದ್ದಂತೆ. ನಮ್ಮ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂಬ ಆರೋಪ ಮಾಡಿದರು. ಎಲ್ಲಿದೆ ಇದಕ್ಕೆ ದಾಖಲೆ? ದಾಖಲೆ ಇಲ್ಲದೆ ಸುಮ್ಮನೆ ಮಾತನಾಡಿದರೆ ಹಿಟ್‌ ಅಂಡ್‌ ರನ್‌ ಕೇಸ್‌ನಂತೆ ಆಗುತ್ತದೆ. ನಾನು ಕೂಡ ನಿಮ್ಮ ವಿರುದ್ಧ ಬೇಕಾದ ರೀತಿ ಆರೋಪ ಮಾಡಬಹುದು’ ಎಂದರು.

‘ನೀರವ್‌ ಮೋದಿ, ಲಲಿತ್‌ ಮೋದಿ ಅವರೆಲ್ಲ ಸಾವಿರಾರು ಕೋಟಿ ರು. ಹಣ ಲೂಟಿ ಮಾಡಿ ದೇಶಬಿಟ್ಟು ಓಡಿ ಹೋದರಲ್ಲ. ಇದಕ್ಕೆ ಯಾರು ಜವಾಬ್ದಾರರು? ಮಾತೆತ್ತಿದರೆ ಗೋವಿಂದರಾಜ್‌ ಡೈರಿ..ಗೋವಿಂದರಾಜ್‌ ಡೈರಿ ಎನ್ನುತ್ತಾರೆ. ಆ ಡೈರಿಯಲ್ಲಿ ಇನಿಶಿಯಲ್ಸ್‌ ಇದೆ ಎನ್ನುತ್ತಾರೆ. ಸಹಾರಾ ಡೈರಿ, ಜೈನ್‌ ಹವಾಲಾ ಡೈರಿಯಾರದ್ದು ಎಂಬುದನ್ನು ಹೇಳಬೇಕು’ ಎಂದು ಸಿದ್ದರಾಮಯ್ಯ ಮಾತಿನಲ್ಲೇ ತಿವಿದರು.

ಈ ವೇಳೆ ಪ್ರತಿಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಆಕ್ಷೇಪ ಎತ್ತಿದರೂ ಅದನ್ನು ಲೆಕ್ಕಿಸದೆ ಮುಂದುವರೆದ ಸಿದ್ದರಾಮಯ್ಯ, ‘ನಮ್ಮ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎನ್ನುತ್ತೀರಿ. 10 ಪರ್ಸೆಂಟ್‌ ಸರ್ಕಾರ ಎಂದು ಯಾವುದೇ ಆಧಾರವಿಲ್ಲದೆ ಆರೋಪ ಮಾಡಿದ್ದೀರಿ. ಆದರೆ, ನಿಮ್ಮ ಹಿಂದಿನ ಸರ್ಕಾರ 90 ಪರ್ಸೆಂಟ್‌ ಸರ್ಕಾರವಾಗಿತ್ತು. ಮುಖ್ಯಮಂತ್ರಿಯಾಗಿದ್ದವರು ಸೇರಿದಂತೆ ಹಲವು ಸಚಿವರು, ಶಾಸಕರು ಜೈಲು ಸೇರಿದ್ದೇ ಇದಕ್ಕೆ ಸಾಕ್ಷ್ಯ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.

 

ನಮ್ಮ ಸರ್ಕಾರ ಕೆಲಸ ಮಾಡಿದೆಯೇ, ಇಲ್ಲವೇ ಎಂಬುದನ್ನು ಇಲ್ಲಿರುವ ಎಲ್ಲರೂ ಎದೆ ಮುಟ್ಟಿಹೇಳಲಿ. ಬಹಿರಂಗ ಚರ್ಚೆಗೂ ನಾನು ಸಿದ್ಧ. ಕೆಲವರು ನನ್ನನ್ನು ರಾಜಕೀಯವಾಗಿ ಟಾರ್ಗೆಟ್‌ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎನ್ನುತ್ತಾರೆ. ಎಲ್ಲಿದೆ ಇದಕ್ಕೆ ದಾಖಲೆ? ಹಿಂದಿನ ಸರ್ಕಾರ (ಬಿಜೆಪಿ) 90 ಪರ್ಸೆಂಟ್‌ ಸರ್ಕಾರವಾಗಿತ್ತು. ಮುಖ್ಯಮಂತ್ರಿಯಾಗಿದ್ದವರು ಸೇರಿದಂತೆ ಹಲವು ಸಚಿವರು, ಶಾಸಕರು ಜೈಲು ಸೇರಿದ್ದೇ ಇದಕ್ಕೆ ಸಾಕ್ಷ್ಯ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಕೆರಳಿದ ಬಿಜೆಪಿ ಸಭಾತ್ಯಾಗ

ಸಿದ್ದರಾಮಯ್ಯ ಅವರ ವಾಗ್ದಾಳಿ ಬಿಜೆಪಿ ಸದಸ್ಯರನ್ನು ಕೆರಳಿಸಿ ಆರೋಪ-ಪ್ರತ್ಯಾರೋಪಕ್ಕೆ ನಾಂದಿಯಾಯಿತು. ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಪರಸ್ಪರ ‘ಶೇಮ್‌..ಶೇಮ್‌..’ ಎಂದು ಕೂಗಿದರು. ಕೊನೆಗೆ ಬಿಜೆಪಿ ಸದಸ್ಯರು ‘ಮೂರೂ ಬಿಟ್ಟವರು ಊರಿಗೆ ದೊಡ್ಡವರು..’ ಎಂದೂ ರಾಗಬದ್ಧವಾಗಿ ಘೋಷಣೆಯನ್ನೂ ಕೂಗಿದರು. ಅಂತಿಮವಾಗಿ ಸಭಾತ್ಯಾಗ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

loader