ರಾಜಕೀಯದಲ್ಲಿ ಡೈರಿ ಜಗಳ ಜೋರಾಗಿದೆ. ಕಾಂಗ್ರೆಸ್ನಲ್ಲೀಗ ಏನೇನೋ ಚರ್ಚೆಗಳು ನಡೆಯುತ್ತಿವೆ. ಡೈರಿ ಬಿಡುಗಡೆಯಾಗಿ 2 ದಿನವಾದರೂ ಮೌನವಾಗಿದ್ದಾರೆ.. ಮಧ್ಯಾಹ್ನದವರೆಗೆ ಅಧಿಕೃತ ನಿವಾಸದಲ್ಲೇ ಉಳಿದಿದ್ದ ಸಿಎಂ ಯಾರ ಭೇಟಿಗೆ ಅವಕಾಶ ಕೊಡಲಿಲ್ಲ. ಬೆಳಗ್ಗೆ ಸಿಎಂ ಭೇಟಿಗಾಗಿ ಬಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೆಯೇ ವಾಪಸಾಗಬೇಕಾಯಿತು. ಆದರೆ ಒಳಗೊಳಗೆ ಬಿಜೆಪಿ ಏಟಿಗೆ ಪ್ರತಿಯೇಟು ನೀಡಲು ತಂತ್ರಗಾರಿಕೆ ಮಾಡುತ್ತಿದ್ದಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬೆಂಗಳೂರು(ಫೆ.26): ರಾಜಕೀಯದಲ್ಲಿ ಡೈರಿ ಜಗಳ ಜೋರಾಗಿದೆ. ಕಾಂಗ್ರೆಸ್ನಲ್ಲೀಗ ಏನೇನೋ ಚರ್ಚೆಗಳು ನಡೆಯುತ್ತಿವೆ. ಡೈರಿ ಬಿಡುಗಡೆಯಾಗಿ 2 ದಿನವಾದರೂ ಮೌನವಾಗಿದ್ದಾರೆ.. ಮಧ್ಯಾಹ್ನದವರೆಗೆ ಅಧಿಕೃತ ನಿವಾಸದಲ್ಲೇ ಉಳಿದಿದ್ದ ಸಿಎಂ ಯಾರ ಭೇಟಿಗೆ ಅವಕಾಶ ಕೊಡಲಿಲ್ಲ. ಬೆಳಗ್ಗೆ ಸಿಎಂ ಭೇಟಿಗಾಗಿ ಬಂದಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೆಯೇ ವಾಪಸಾಗಬೇಕಾಯಿತು. ಆದರೆ ಒಳಗೊಳಗೆ ಬಿಜೆಪಿ ಏಟಿಗೆ ಪ್ರತಿಯೇಟು ನೀಡಲು ತಂತ್ರಗಾರಿಕೆ ಮಾಡುತ್ತಿದ್ದಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ.
ನಿನ್ನೆ ಮಧ್ಯಾಹ್ನದ ಬಳಿಕ ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹಸಚಿವ ಡಾ. ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಲವು ಆಪ್ತ ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಾದ ಬಳಿಕ ಗೃಹಕಚೇರಿ ಕೃಷ್ಣಾಗೆ ತೆರಳಿದ ಸಿಎಂ ಎರಡು ಸಭೆಗಳಲ್ಲಿ ಪಾಲ್ಗೊಂಡರು.
ಮೌನದ ಜೊತೆ ತಂತ್ರಗಾರಿಕೆ?
ಈ ಮಧ್ಯೆ ಡೈರಿ ವಿಚಾರವಾಗಿ ಮೌನವಾಗಿಯೇ ಉಳಿದಿರುವ ಸಿದ್ಧರಾಮಯ್ಯ, ಸೈಲೆಂಟ್ ಆಗಿ ಬಿಜೆಪಿ ಏಟಿಗೆ ಪ್ರತಿ ಏಟು ನೀಡಲು ರಣತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ. ಡೈರಿಯಲ್ಲಿ ಹೆಸರು ಉಲ್ಲೇಖಗೊಂಡಿರುವ ಸಿಎಂ ಆಪ್ತ ಬಿಡಿಎ ಎಕ್ಸಿಕ್ಯೂಟಿವ್ ಎಂಜಿನಿಯರ್ ರಘು ವರ್ಗಾವಣೆಗೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದ್ದು, ಒಂದಷ್ಟು ಸಮಯದವರೆಗೆ ಕೆಲವು ನಿರ್ದಿಷ್ಟ ಆಪ್ತರು ಮತ್ತು ನಿರ್ದಿಷ್ಟ ಆಪ್ತ ಅಧಿಕಾರಿಗಳಿಂದ ಅಂತರ ಕಾಯ್ದುಕೊಳ್ಳಲು ಚಿಂತಿಸಿದ್ದಾರೆ ಎನ್ನಲಾಗಿದೆ. ಇದಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೈಕಮಾಂಡ್ಗೆ ಚೆಕ್ ಮೂಲಕ ಹಣ ಸಂದಾಯ ಮಾಡಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಬಳಿ ಇದೆಯೆನ್ನಲಾಗಿರುವ ದಾಖಲೆಯನ್ನು ಬಹಿರಂಗಗೊಳಿಸುವ ಸಂಬಂಧ ಸಿಎಂ ಅತ್ಯಾಪ್ತರು ಜೆಡಿಎಸ್ ನಾಯಕರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.
ಒಟ್ಟಾರೆ, ಗೋವಿಂದರಾಜು ಅವರದ್ದು ಎನ್ನಲಾದ ಡೈರಿ ಬಿಡುಗಡೆಯಾದ ನಂತರ ಮೌನಿಯಾಗಿರುವ ಸಿಎಂ ನಿನ್ನೆ ಕೂಡಾ ಮೌನ ಮುರಿಯಲಿಲ್ಲ. ಆದರೆ ಹೇಗೆ ತಿರುಗೇಟು ಕೊಡಬೇಕು ಎನ್ನುವುದರ ಬಗ್ಗೆ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಹೀಗಾಗಿ ಮುಂದೆ ಡೈರಿ ಫೈಟ್ ಇನ್ನು ಯಾವ್ಯಾವ ರೂಪದಲ್ಲಿನಡೆಯುತ್ತೆ ಎನ್ನೋದೇ ಕುತೂಹಲ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.
