ಸಭೆಯೊಂದರಲ್ಲಿ ರೈತರೊಬ್ಬರಿಗೆ ಮಾತನಾಡಲು ಅವಕಾಶ ನಿರಾಕರಣೆ ಸಿಎಂ ಸಿದ್ದರಾಮಯ್ಯ ಟ್ವಿಟರ್’ನಲ್ಲಿ ಪ್ರತಿಕ್ರಿಯೆ
ಬೆಂಗಳೂರು: ಬೀದರ್’ನಲ್ಲಿ ರೈತರೊಂದಿಗೆ ನಡೆದ ಸಭೆಯೊಂದರಲ್ಲಿ ರೈತರೊಬ್ಬರಿಗೆ ಮಾತನಾಡಲು ಅವಕಾಶ ನೀಡದಿರುವ ಘಟನೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
‘ಎಲೆಕ್ಷನ್ ಟೈಮ್’ನಲ್ಲಿ ಮಾತ್ರ ರೈತರನ್ನು ಭೇಟಿಯಾದ್ರೆ ಇದೇ ಆಗೋದು ಅಮಿತ್ ಶಾರವರೇ, ಎಂದು ಸಿಎಂ ಸಿದ್ದರಾಮಯ್ಯ ಟ್ವೀಟಿಸಿದ್ದಾರೆ.
ನಿನ್ನೆ ಬೀದರ್’ನ ಹುಮ್ನಾಬಾದ್’ನಲ್ಲಿ ಕಬ್ಬುಬೆಳೆಗಾರರೊಂದಿಗೆ ನಡೆದ ಸಂವಾದದಲ್ಲಿ ರೈತ ಮುಖಂಡರೊಬ್ಬರು ಕೇಂದ್ರ ಸರ್ಕಾರದ ನೀತಿಗಳನ್ನು ಪ್ರಶ್ನಿಸಲು ಆರಂಭಿಸಿದ್ದಾರೆ. ಕೂಡಲೇ ಮಧ್ಯಪ್ರವೇಶಿಸಿದ ಸಂಘಟಕರು ಅವರಿಂದ ಮೈಕು ಕಿತ್ತುಕೊಂಡಿದ್ದರು. ಈ ಘಟನೆಯಿಂದಾಗಿ ಅಮಿತ್ ಶಾ ಮುಜುಗರ ಎದುರಿಸಬೇಕಾಯಿತು.
ಉದ್ಯಮಿಗಳನ್ನು ಒಲೈಸುವುದರಲ್ಲೇ ಕೇಂದ್ರ ಸರ್ಕಾರ ತೊಡಗಿಸಿಕೊಂಡಿದೆ. ಕಳೆದ ಮೂರುವರೆ ವರ್ಷದಿಂದ ರೈತರನ್ನು ನಿರ್ಲಕ್ಷಿಸಿ, ಈಗ ಯಾವ ಭರವಸೆ ನೀಡತ್ತೀರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೊದಲು ರೈತರ ಸಾಲ ಮನ್ನಾ ಮಾಡಿ ಮತ್ತು ಬೆಂಬಲ ಬೆಲೆ ನೀತಿಯನ್ನು ಪ್ರಾಮಾಣಿಕವಾಗಿ ಜಾರಿಗೆ ತನ್ನಿಯೆಂದು ಸಿದ್ದರಾಮಯ್ಯ ಅಮಿತ್ ಶಾಗೆ ಸಲಹೆ ನೀಡಿದ್ದಾರೆ.
