ಸಂಧಿಯ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಯಾರಿಗೆ ಸಂಧಿ ಗೊತ್ತು ಎಂದು ಸದನ ಸದಸ್ಯರನ್ನು ಪ್ರಶ್ನಿಸಿದರು. ಯಾರಿಗೂ ಗೊತ್ತಿಲ್ಲವೆಂದು ತಾವೇ ಮುಂದುವರಿದ ಅವರು, ಸಂಧಿಯ ವ್ಯಾಖ್ಯಾನವನ್ನು ವಿವರಿಸಿದರು. ತಾನು ನಾಲ್ಕನೇ ಕ್ಲಾಸಿನಲ್ಲಿ ಕಲಿತ ಸಂಧಿ ಪಾಠವನ್ನು ಈಗಲೂ ನೆನಪಿಟ್ಟುಕೊಂಡಿದ್ದೀನಿ ಎಂದು ಹೇಳಿದರು.

ಬೆಂಗಳೂರು(ಜೂನ್ 09): ಇಂದು ವಿಧಾನಸಭೆಯ ಕಲಾಪವು ವ್ಯಾಕರಣ, ಸಂಧಿ-ಸಮಾಸಗಳ ಮಾತುಗಳಿಂದ ಕೆಲ ಕಾಲ ಹಗುರ ವಾತಾವರಣಕ್ಕೆ ಸಾಕ್ಷಿಯಾಯಿತು. ಹೆಬ್ಬಾಳ ಶಾಸಕ ನಾರಾಯಣಸ್ವಾಮಿ ಅವರು ಸದನದಲ್ಲಿ ಶಿಕ್ಷಣದ ಬಗ್ಗೆ ಮಾತನಾಡುವಾಗ ಮಧ್ಯಪ್ರವೇಶಿಸಿ ಸಿಎಂ ಸಿದ್ದರಾಮಯ್ಯ ಸಭೆಗೆ ಕನ್ನಡದ ಪಾಠಗಳನ್ನು ಹೇಳಿಕೊಟ್ಟ ಘಟನೆ ನಡೆಯಿತು. ಸಂಧಿಗಳ ಬಗ್ಗೆ ಪಾಠ ಮಾಡಿದ ಅವರು, ಸಭಾ ಸದಸ್ಯರಿಗೆ ಪ್ರಶ್ನೆಗಳನ್ನೂ ಕೇಳಿದರು. ಸಂಧಿ-ಸಮಾಸ, ವ್ಯಾಕರಣದ ಬಗ್ಗೆ ಗೊತ್ತಿಲ್ಲದಿದ್ದರೂ ಶಿಕ್ಷಣದ ಬಗ್ಗೆ ಮಾತನಾಡಲು ಬಂದುಬಿಡುತ್ತಾರೆ ಎಂದು ನಾರಾಯಣಸ್ವಾಮಿಯವರನ್ನು ಸಿಎಂ ಕಿಚಾಯಿಸಿದರು.

ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಸಿದ್ದರಾಮಯ್ಯ, "ನಾನು ಶಾಲೆಗೆ ಹೋಗುವಾಗ ಮೌಖಿಕ ಪರೀಕ್ಷೆ ಇತ್ತು. ನನ್ನ ಸಹಪಾಠಿಗೆ ಮೇಷ್ಟ್ರು ಸಂಧಿ ಎಂದರೇನು ಅಂತ ಕೇಳಿದ್ರು. ಅದಕ್ಕೆ ಆತ, ನಮ್ಮ ಮನೆಗೂ ನಮ್ಮ ದೊಡ್ಡಪ್ಪನ ಮನೆಗೂ ನಡುವೆ ಇರೋದೇ ಸಂಧಿ ಅಂತ ಉತ್ತರಿಸಿದ್ದ" ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು.

ಸಂಧಿಯ ಮಾತು ಮುಂದುವರಿಸಿದ ಸಿದ್ದರಾಮಯ್ಯ, ಯಾರಿಗೆ ಸಂಧಿ ಗೊತ್ತು ಎಂದು ಸದನ ಸದಸ್ಯರನ್ನು ಪ್ರಶ್ನಿಸಿದರು. ಯಾರಿಗೂ ಗೊತ್ತಿಲ್ಲವೆಂದು ತಾವೇ ಮುಂದುವರಿದ ಅವರು, ಸಂಧಿಯ ವ್ಯಾಖ್ಯಾನವನ್ನು ವಿವರಿಸಿದರು. ತಾನು ನಾಲ್ಕನೇ ಕ್ಲಾಸಿನಲ್ಲಿ ಕಲಿತ ಸಂಧಿ ಪಾಠವನ್ನು ಈಗಲೂ ನೆನಪಿಟ್ಟುಕೊಂಡಿದ್ದೀನಿ ಎಂದು ಹೇಳಿದರು.

ಈಗ ಮಧ್ಯಪ್ರವೇಶಿಸಿದ ರೈತ ಮುಖಂಡ ಪುಟ್ಟಣ್ಣಯ್ಯ, "ಆವತ್ತಿನಿಂದಲೂ ಮಡಕಿಕೊಂಡು ಬಂದು ಎಲ್ಲಾ ಸಂಧಿನೂ ನುಗ್ಗಿಯೇ ಮುಖ್ಯಮಂತ್ರಿಯಾಗಿದ್ದು" ಎಂದು ಸಿದ್ದರಾಮಯ್ಯನವರನ್ನು ಕಿಚಾಯಿಸಿದರು.

ಇದಕ್ಕೆ ಪ್ರತಿಯಾಗಿ ಸಿಎಂ, "ಪುಟ್ಟಣ್ಣಯ್ಯ, ನೀನೂ ಆ ಸಂಧಿಯೆಲ್ಲಾ ಹುಡುಕು, ಮುಖ್ಯಮಂತ್ರಿ ಆಗ್ತೀಯಾ" ಎಂದು ಟಿಪ್ಸ್ ಕೊಟ್ಟರು.

ಸರ್ಕಾರಿ ಶಾಲೆ ಮಾತು:
"ನಾನು ಸರಕಾರಿ ಶಾಲೆಯಲ್ಲಿ ಓದಿದ್ದರಿಂದಲೇ ಇಲ್ಲಿರಲು ಸಾಧ್ಯವಾಗಿದ್ದು. ಇಂಗ್ಲೀಷ್ ಓದಿಕೊಂಡು ಬಂದಿದ್ದರೆ ಇಲ್ಲಿ ಬರಲು ಆಗುತ್ತಿರಲಿಲ್ಲ," ಎಂದು ಕನ್ನಡ ಮಾಧ್ಯಮ ಮತ್ತು ಸರಕಾರೀ ಶಾಲೆಯ ಮಹತ್ವವನ್ನು ಸಿಎಂ ತಿಳಿಸಿಕೊಟ್ಟರು.