ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಚುನಾವಣಾ ಕಣಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಕ್ಷೇತ್ರದ ವಾತಾವರಣ ಬದಲಾದಂತಿದೆ. ಸಿಎಂ ಜೊತೆ ಸಚಿವರ ದಂಡು ‌ಕೂಡಾ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೀಗ ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಸಿದ್ದರಾಮಯ್ಯ ಅವರದ್ದೇ ಹವಾ ಎನ್ನುವಂತಹ ವಾತಾವರಣವಿದೆ. ಹೀಗಾಗಿ ಸಿಎಂ ಪ್ರಚಾರದ ಮುಂದೆ ಬಿಜೆಪಿ ಪ್ರಚಾರ ಸ್ವಲ್ಪ ಡಲ್ ಆದಂತೆ ಕಾಣುತ್ತಿದೆ.
ಮೈಸೂರು(ಎ.2): ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಚುನಾವಣಾ ಕಣಕ್ಕೆ ಪ್ರವೇಶಿಸಿದ ಬೆನ್ನಲ್ಲೇ ಕ್ಷೇತ್ರದ ವಾತಾವರಣ ಬದಲಾದಂತಿದೆ. ಸಿಎಂ ಜೊತೆ ಸಚಿವರ ದಂಡು ಕೂಡಾ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೀಗ ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಸಿದ್ದರಾಮಯ್ಯ ಅವರದ್ದೇ ಹವಾ ಎನ್ನುವಂತಹ ವಾತಾವರಣವಿದೆ. ಹೀಗಾಗಿ ಸಿಎಂ ಪ್ರಚಾರದ ಮುಂದೆ ಬಿಜೆಪಿ ಪ್ರಚಾರ ಸ್ವಲ್ಪ ಡಲ್ ಆದಂತೆ ಕಾಣುತ್ತಿದೆ.
ಗುಂಡ್ಲುಪೇಟೆ - ನಂಜನಗೂಡು ಬೈ ಎಲೆಕ್ಷನ್ ಉಪಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಿನ್ನೆಯಿಂದ ಪ್ರಚಾರದ ಅಖಾಡಕ್ಕಿಳಿದಿರುವ ಸಿಎಂ ಸಿದ್ದರಾಮಯ್ಯ, ಭರ್ಜರಿ ಮತಬೇಟೆಯಲ್ಲಿ ನಿರತರಾಗಿದ್ದಾರೆ.
ಸಹಜವಾಗಿಯೇ ಮುಖ್ಯಮಂತ್ರಿಗಳ ಪ್ರಚಾರ ಎಂಬ ಕಾರಣದಿಂದ ಸಿಎಂ ಹಿಂದೆ ಮುಂದೆ ಸುತ್ತಾಡುವ ನಾಯಕರ ಸಂಖ್ಯೆಯೂ ಹೆಚ್ಚಾಗಿದೆ. ಕಾರ್ಯಕರ್ತರ ಜೊತೆ ಸಚಿವರು ಕೂಡಾ ಸಿಎಂಗೆ ಸಾಥ್ ನೀಡುತ್ತಿದ್ದಾರೆ. ಹೀಗಾಗಿ ಸಿಎಂ ಹೋದ ಕಡೆಯಲೆಲ್ಲಾ ಸುಮಾರು 70ಕ್ಕೂ ಹೆಚ್ಚು ಕಾರುಗಳು ಬಿರುಬಿಸಿಲಿಗೆ ಧೂಳೆಬ್ಬಿಸುತ್ತಾ ಸಾಗುತ್ತಿವೆ.
ಇನ್ನು ತಮ್ಮೂರಿಗೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎನ್ನುವ ಕಾರಣದಿಂದ ಸಿಎಂ ನೋಡಲು ಜನರು ಸೇರುತ್ತಿದ್ದರೆ, ನಾಡದೊರೆಯ ಮುಂದೆ ನಮ್ಮ ಸಮಸ್ಯೆ ಹೇಳಿಕೊಳ್ಳಬಹುದು ಎನ್ನುವ ಆಸೆ ಹೊತ್ತು ಜನರು ಸಿಎಂ ಪ್ರಚಾರದ ವೇಳೆ ಬರ್ತಿದ್ದಾರೆ.
ಇತ್ತ ಸಿಎಂ ಪ್ರಚಾರದ ಅಖಾಡಕ್ಕಿಳಿಯುತ್ತಿದಂತೆ ಬಿಜೆಪಿ ಪ್ರಚಾರ ಕೊಂಚ ಮಂಕಾದಂತಿದೆ. ಬಿಜೆಪಿ ನಾಯಕರು ವಿವಿಧ ಕಡೆಗಳಲ್ಲಿ ತಮ್ಮ ಪಾಡಿಗೆ ತಾವು ಪ್ರಚಾರದಲ್ಲಿ ತೊಡಗಿರುವ ಕಾರಣ ಸಿಎಂ ಪ್ರಚಾರದ ಭರಾಟೆಯ ಮುಂದೆ ಅಂತಹ ಬಿರುಸು ಕಾಣ್ತಿಲ್ಲ. ಇನ್ನು ನಂಜನಗೂಡಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸಪ್ರಸಾದ್ ಪ್ರಚಾರ ಕಣದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಕಾರಣ ಬಿಜೆಪಿ ನಾಯಕರ ಪ್ರಚಾರದಲ್ಲೂ ಅಂತಹ ಉತ್ಸಾಹ ಕಾಣಿಸುತ್ತಿಲ್ಲ. ಹೀಗಾಗಿ ಸಿಎಂ ಪ್ರಚಾರದ ಭರಾಟೆಯ ಮುಂದೆ ಬಿಜೆಪಿ ಪ್ರಚಾರ ಡಲ್ ಆದಂತೆ ಕಾಣಿಸುತ್ತಿದೆ.
ಇನ್ನು ತಮ್ಮ ಪುತ್ರನ ರಾಜಕೀಯ ತಾಲೀಮಿಗೆ ಉಪಚುನಾವಣೆಯನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪುತ್ರನನ್ನು ಜೊತೆಯಲ್ಲಿಟ್ಟುಕೊಂಡೇ ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ.
