ನಾನು ಬೆಳ್ಳಿತಟ್ಟೆಯಲ್ಲಿ ತಿಂದರೆ ಸಮಾಜಕ್ಕೇನು ಕೆಟ್ಟದಾಗುತ್ತದೆ? ಅದನ್ನು ಏಕೆ ದೊಡ್ಡ ಸುದ್ದಿ ಮಾಡುತ್ತೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು (ಜ.1): ‘ನಾನು ಬೆಳ್ಳಿತಟ್ಟೆಯಲ್ಲಿ ತಿಂದರೆ ಸಮಾಜಕ್ಕೇನು ಕೆಟ್ಟದಾಗುತ್ತದೆ? ಅದನ್ನು ಏಕೆ ದೊಡ್ಡ ಸುದ್ದಿ ಮಾಡುತ್ತೀರಾ? ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದ್ದಾರೆ. ಭಾನುವಾರ ನಗರದಲ್ಲಿ ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಪ್ರದಾನ ಮಾಡಿದ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ಮಾಧ್ಯಮಗಳು ಸಮಾಜ ಹಾಗೂ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾದ ಸುದ್ದಿ ಪ್ರಸಾರ ಮಾಡಬೇಕು. ಗಂಡ-ಹೆಂಡತಿ ಜಗಳ ಉಂಡುಮಲಗೋ ತನಕ ಎಂಬ ಮಾತಿದೆ.
ಆದರೆ, ಗಂಡ-ಹೆಂಡತಿ ಜಗಳ ಮಾಡಿಕೊಂಡರೆ ಅದನ್ನೇ ದೊಡ್ಡ ಸುದ್ದಿಯಾಗಿ ಪ್ರಸಾರ ಮಾಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ಏನು ಉಪಯೋಗ ಎಂದು ಪ್ರಶ್ನಿಸಿದರು. ಅಲ್ಲದೆ, ಮಾಧ್ಯಮಗಳು ಹಾಗೂ ಪತ್ರಕರ್ತರು ನನ್ನನ್ನು ಹಾಗೂ ನಮ್ಮ ಸರ್ಕಾರವನ್ನು ವಿಮರ್ಶೆಗೆ ಒಳಪಡಿಸುವುದಕ್ಕೆ ನನ್ನ ಯಾವ ವಿರೋಧವೂ ಇಲ್ಲ. ಆದರೆ, ವಾಸ್ತವಿಕ ಚೌಕಟ್ಟಿನಲ್ಲಿ ಚರ್ಚೆ ಹಾಗೂ ವಿಮರ್ಶೆ ನಡೆದರೆ ಹೆಚ್ಚು ಆರೋಗ್ಯಕರ. ಅದನ್ನು ಬಿಟ್ಟು ಸಿದ್ದರಾಮಯ್ಯ ಕಾರಿನ ಮೇಲೆ ಕಾಗೆ ಕುಳಿತಿತು.
ಚಾಮುಂಡೇಶ್ವರಿ ದೇವಿಯ ಪೋಟೋಗೆ ಹೂಮಾಲೆ ಹಾಕುವಾಗ ಸಿದ್ದರಾಮಯ್ಯ ಶೂ ಹಾಕಿದ್ದರು. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದರು ಎಂದು ಏಕೆ ದೊಡ್ಡ ಸುದ್ದಿ ಮಾಡುತ್ತೀರಾ? ಇದು ಸಮಾಜಕ್ಕೆ ಅಗತ್ಯವಿದೆಯೇ? ಯಾರೋ ಬೆಳ್ಳಿತಟ್ಟೆ ಕೊಟ್ಟರು; ನಾನು ಊಟ ಮಾಡಿದೆ ಅಷ್ಟೇ. ಅದು ತಪ್ಪೇ? ಅದರಿಂದ ಸಮಾಜಕ್ಕೆ ಏನಾದರೂ ಕೆಟ್ಟದ್ದಾಯಿತೇ ಎಂದು ಪ್ರಶ್ನಿಸಿದರು.
ಅರಸುಗೆ ಹೋಲಿಸಬೇಡಿ: ನನ್ನನ್ನು ಎರಡನೇ ದೇವರಾಜು ಅರಸು ಅಂತ ಕರೆಯುತ್ತಾರೆ. ಆದರೆ, ದೇವರಾಜು ಅರಸು ಬೇರೆ, ನಾನೇ ಬೇರೆ. ಅಂಬೇಡ್ಕರ್‌ಗೆ ಅಂಬೇಡ್ಕರ್ ಅವರೇ ಸಾಟಿ. ಇಂತಹ ಹೇಳಿಕೆಗಳನ್ನು ಇಟ್ಟುಕೊಂಡು ಕೆಲವರು ‘ಸಿದ್ದರಾಮಯ್ಯ ಎಲ್ಲಿ, ದೇವರಾಜು ಅರಸು ಎಲ್ಲಿ? ದೇವರಾಜು ಅರಸು ತೃಣಕ್ಕೂ ಸಿದ್ದರಾಮಯ್ಯ ಸಮಾನ ಅಲ್ಲ’ ಎಂದು ಟೀಕಿಸುತ್ತಾರೆ. ದೇವರಾಜು ಅರಸುಗೆ ನನ್ನ ಹೋಲಿಕೆ ಮಾಡುವಂತೆ ನಾನೇನಾದರೂ ಹೇಳಿದ್ದೇನೆಯೇ? ನನ್ನನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು.
ನಮ್ಮಪ್ಪ ರಾಜಕೀಯಕ್ಕೆ ಹೋದರೆ ಮನೆಗೆ ಬರಬೇಡ ಎಂದರು, ಚುನಾವಣೆಗೆ ಹಣ ಕೊಡಲಿಲ್ಲ. ಲಾಯರ್‌ಗಿರಿಯಿಂದಾಗಿ ಒಂದು ಕೇಸಲ್ಲಿ ಬಂದ ಐದು ಸಾವಿರ ಹಣದಲ್ಲಿ ಮೂರೂವರೆ ಸಾವಿರ ರು. ಖರ್ಚು ಮಾಡಿ, ಚುನಾವಣೆಯಲ್ಲಿ ಗೆದ್ದೆ ಎಂದು ಸ್ಮರಿಸಿದರು. ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದರು. ಸಾರಿಗೆ ಸಚಿವ ಎಚ್. ಎಂ.ರೇವಣ್ಣ ಮಾತನಾಡಿ, ನಿವೃತ್ತ ಪತ್ರಕರ್ತರಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುವುದು ಎಂದು ಭರವಸೆ ನೀಡಿದರು.
