ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನಿನ್ನೆ (ಸೋಮವಾರ) ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದು ರಾಜ್ಯದ ಜನರಿಗೆ ಎರಡು ಸಿಹಿ ಸುದ್ದಿ ನೀಡಿದ್ದಾರೆ. 

ಬೆಂಗಳೂರು, (ಸೆ.18): ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ (ಸೋಮವಾರ) ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ದಿನದಂದು ರಾಜ್ಯದ ಜನರಿಗೆ ಎರಡು ಸಿಹಿ ಸುದ್ದಿ ನೀಡಿದ್ದಾರೆ. 

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಸೆಸ್‌ ಹೊರೆ ತಗ್ಗಿಸುವುದಾಗಿ ಘೋಷಿಸಿದ ದಿನವೇ ಸರ್ಕಾರ, ಬಸ್‌ ಪ್ರಯಾಣಿಕರಿಗೆ ದರ ಏರಿಕೆ ಬರೆ ಎಳೆಯಲು ನಿರ್ಧರಿಸಿತ್ತು. ಆದರೆ, ಈ ಸಂಬಂಧ ಆದೇಶ ಹೊರಡಿಸಿದ ಕೆಲವೇ ಹೊತ್ತಿನಲ್ಲಿ ಸ್ವತಃ ಸಿಎಂ ಈ ಆದೇಶ ತಡೆಹಿಡಿಯಲು ಸೂಚಿಸಿದ್ದಾರೆ.

ನಿರಂತರವಾಗಿ ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಸರಾಸರಿ ಶೇ. 18ರಷ್ಟು ಹೆಚ್ಚಿಸಿ, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಲು ಸಾರಿಗೆ ನಿಗಮಗಳಿಗೆ ಅನುಮತಿ ನೀಡಿತ್ತು. 

ಆದರೆ, "ದರ ಏರಿಕೆ ಸದ್ಯಕ್ಕೆ ಬೇಡ. ಆದೇಶ ತಡೆಹಿಡಿಯಿರಿ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಯಥಾಸ್ಥಿತಿ ಮುಂದುವರಿಯಲಿದೆ.

ಕೆಎಸ್‌ಆರ್‌ಟಿಸಿಯು ಶೇ. 18ರಷ್ಟು ಬಸ್‌ ಪ್ರಯಾಣ ದರ ಏರಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸೇರಿದಂತೆ ನಾಲ್ಕೂ ನಿಗಮಗಳಿಗೆ ಅನ್ವಯ ಆಗುವಂತೆ ದರ ಹೆಚ್ಚಳಕ್ಕೆ ಅನುಮೋದನೆಯೂ ದೊರಕಿತ್ತು. ಮುಖ್ಯಮಂತ್ರಿ ಆದೇಶದ ಮೇರೆಗೆ ಕೈಬಿಡಲಾಗಿದೆ.