ಬೆಂಗಳೂರು/ಬೀದರ್‌ (ಜೂ. 29): ಮೊದಲ ಹಂತದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಗಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಒಂದು ವಾರದ ಪ್ರವಾಸಕ್ಕಾಗಿ ಶುಕ್ರವಾರ ತಡರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು.

ಭಾನುವಾರ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ನಂತರ ಜುಲೈ 5ರಂದು ಅಮೆರಿಕದ ಒಕ್ಕಲಿಗರ ಪರಿಷತ್ತು ಆಯೋಜಿಸಿರುವ ಸಮಾವೇಶದಲ್ಲಿ ಭಾಗವಹಿಸಿ ಬೆಂಗಳೂರಿಗೆ ವಾಪಸಾಗಲಿದ್ದಾರೆ. ಇದು ಸಂಪೂರ್ಣ ಖಾಸಗಿ ಭೇಟಿಯಾಗಿದ್ದು, ಸರ್ಕಾರದಿಂದ ಯಾವುದೇ ವೆಚ್ಚ ಭರಿಸುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಗ್ರಾಮ ವಾಸ್ತವ್ಯ ಅಂತ್ಯ:

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಗ್ರಾಮ ವಾಸ್ತವ್ಯದ ಮೊದಲ ಹಂತದ ಕಾರ್ಯಕ್ರಮಕ್ಕೆ ಶುಕ್ರವಾರ ತೆರೆ ಬಿದ್ದಿದೆ. ಬೀದರ್‌ ಜಿಲ್ಲೆಯ ಉಜಳಂಬ ಗ್ರಾಮದಲ್ಲಿ ಗ್ರಾಮವಾಸ್ತವ್ಯ, ಜನತಾ ದರ್ಶನ ಕಾರ್ಯಕ್ರಮ ನಡೆಸಿದ್ದ ಕುಮಾರಸ್ವಾಮಿ ಶುಕ್ರವಾರ ಬೆಳಿಗ್ಗೆ ಇದಕ್ಕೂ ಮೊದಲು ಬೆಳಿಗ್ಗೆ ಗ್ರಾಮವಾಸ್ತವ್ಯದ ಸ್ಮರಣಾರ್ಥವಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿ ನೆಟ್ಟರು.

6.30ಕ್ಕೆ ನೇರವಾಗಿ ಬೀದರ್‌ನ ವಾಯು ಸೇನಾ ತರಬೇತಿ ಕೇಂದ್ರದ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಳಿಗ್ಗೆ 9.10ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರು ಕಡೆ ಪ್ರಯಾಣ ಬೆಳೆಸಿದರು. ಉಜಳಂಬದಿಂದ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಮಾಡಿದ್ದ ಗ್ರಾಮ ವಾಸ್ತವ್ಯಕ್ಕಿಂತ ಈಗಿನ ಕಾರ್ಯಕ್ರಮ ಸಾಕಷ್ಟುಪ್ರಭಾವ ಬೀರಲಿದೆ ಅನ್ನುವ ವಾತಾವರಣ ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟರು.

ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕಚೇರಿಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗವು ತಾಯಿ ಹೃದಯದಿಂದ ಕೆಲಸ ಮಾಡಿರುವುದು ಕೂಡ ನಮ್ಮ ಬಲವಾಗಿದೆ ಎಂದು ತಿಳಿಸಿದ ಅವರು ಇಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ಕಚೇರಿಯಿಂದ ನೇರವಾಗಿ ಸೌಕರ್ಯ ಸಿಗಲಿದೆ ಎಂದು ಭರವಸೆ ನೀಡಿದರು.

ಸಮಾಜದ ಗುರುಗಳ ಒತ್ತಡದಿಂದ ಅಮೆರಿಕ ಪ್ರವಾಸ, ಸ್ವಂತ ಖರ್ಚು

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಗ್ರಾಮ ವಾಸ್ತವ್ಯದ ಕುರಿತು ಟೀಕೆ ಮಾಡುತ್ತಿರುವ ಬಿಜೆಪಿ ಮುಖಂಡರಿಗೆ ಟಾಂಗ್‌ ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನ ಚಂಡರಕಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದಾಗ ಶಾಲೆಯ ಗೋಡೆ ಮೇಲೆ ಬರೆದಿದ್ದ ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವದೇ ಉತ್ತರ ಎಂದು ರಾಷ್ಟ್ರಕವಿ ಕುವೆಂಪು ಅವರ ನುಡಿಯನ್ನು ಈ ವೇಳೆ ಪ್ರಸ್ತಾಪಿಸಿದರು.

ವಿರೋಧ ಪಕ್ಷದವರು ವೈಯಕ್ತಿಕ ಪ್ರವಾಸದ ಬಗ್ಗೆಯೂ ಟೀಕೆ ಮಾಡ್ತಿದ್ದಾರೆ. ನನ್ನ ಅಮೆರಿಕ ಪ್ರವಾಸ ಸರ್ಕಾರಿ ಕಾರ್ಯಕ್ರಮವಲ್ಲ. ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ. ನಮ್ಮ ಸಮಾಜದ ಗುರುಗಳು ನ್ಯೂಜೆರ್ಸಿಯಲ್ಲಿ ನಿರ್ಮಿಸಲಿರುವ ದೇವಸ್ಥಾನದ ಭೂಮಿ ಪೂಜೆಯನ್ನು ನಾನೇ ಮಾಡಬೇಕೆಂದು ಹೆಚ್ಚು ಒತ್ತಡ ಹೇರಿರುವುದರಿಂದ ಹೋಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.