ಬೆಳಗಾವಿ (ಡಿ. 15): ರಸ್ತೆ ಅಪಘಾತ ಪ್ರಮಾಣ ತಗ್ಗಿಸುವ ದೃಷ್ಟಿಯಿಂದ ಈಗಾಗಲೇ ಯರಗಟ್ಟಿ-ಬೆಳಗಾವಿ ರಾಜ್ಯ ಹೆದ್ದಾರಿ-20 ರಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ಅನುಷ್ಠಾನಗೊಳಿಸಿರುವ ಪ್ರಾಯೋಗಿಕ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್) ಅಡಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತಿ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪಘಾತ ಪ್ರಮಾಣ ತಗ್ಗಿಸುವ ಮೂಲಕ ಜನರ ಪ್ರಾಣ ರಕ್ಷಣೆಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ.

ಈಗಾಗಲೇ ಯರಗಟ್ಟಿ- ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತಂದು ವಿನೂತನ ಪ್ರಯೋಗ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಇತರೆ ಹೆದ್ದಾರಿಗಳಲ್ಲೂ ಶೀಘ್ರವೇ ಪೈಲಟ್ ಯೋಜನೆ ಮಾದರಿಯ ಸುರಕ್ಷತಾ ಕ್ರಮ ಅಳವಡಿಸಲಾಗುವುದು ಎಂದು ಹೇಳಿದರು.

ಕಿರು ಸಿನಿಮಾ ವೀಕ್ಷಣೆ:

ರಸ್ತೆ ಅಪಘಾತ ಸಂದರ್ಭದಲ್ಲಿ ತಕ್ಷಣವೇ ೧೦೮ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಿರುಚಿತ್ರವನ್ನು ಸಿಎಂ ವೀಕ್ಷಿಸಿದರು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಆಗುವ ಅನಾಹುತ ಕುರಿತು ಜಾಗೃತಿ ಮೂಡಿಸುವ ಗೀತೆ ಆಲಿಸಿದರು.