ಬೆಂಗಳೂರು (ಮೇ. 09): ರೈತರ ಸಾಲಮನ್ನಾ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉನ್ನತ ಮಟ್ಟದ ಸಭೆ ನಡೆಸಿ ಸಾಲಮನ್ನಾ ಯೋಜನೆಯನುಸಾರ ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಭೆ ನಡೆಸಿ ಸಾಲ ಮನ್ನಾ ಯೋಜನೆಯ ಅನುಷ್ಠಾನವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಪರಿಶೀಲನೆ ನಡೆಸುವಂತೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹಾಗೂ ಸಹಕಾರ ಮತ್ತು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಾಲಮನ್ನಾ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 2018ರ ಡಿಸೆಂಬರ್‌ ತಿಂಗಳಿನಿಂದ ರೈತರ ಸಾಲವನ್ನು ಹಂತಹಂತವಾಗಿ ಅವರ ಖಾತೆಗೆ ಭರ್ತಿ ಮಾಡಲಾಗುತ್ತಿದೆ. ಈವರೆಗೆ ಸಹಕಾರ ಸಂಘಗಳ 8.3 ಲಕ್ಷ ರೈತರಿಗೆ 3500 ಕೋಟಿ ರು. ಸಾಲಮನ್ನಾ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ.

ಸಹಕಾರ ಸಂಘಗಳಲ್ಲಿ ರೈತರು ನಿಯಮಾವಳಿಗಳಂತೆ ಅರ್ಹತೆ ಪಡೆದ ದಿನದಂದು ಅವರ ಖಾತೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ಹೇಳಿದರು.

ವಾಣಿಜ್ಯ ಬ್ಯಾಂಕ್‌ಗಳಲ್ಲಿ 7.5 ಲಕ್ಷ ರೈತರಿಗೆ 3930 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಇನ್ನೂ 1.5 ಲಕ್ಷ ರೈತರ ಸುಮಾರು 900 ಕೋಟಿ ರು. ಸಾಲಮನ್ನಾ ಮೊತ್ತ ಬಿಡುಗಡೆ ಮಾಡಲಾಗುವುದು. ಒಟ್ಟಾರೆಯಾಗಿ ವಾಣಿಜ್ಯ ಬ್ಯಾಂಕ್‌ ಮತ್ತು ಸಹಕಾರಿ ಬ್ಯಾಂಕ್‌ಗಳ 15.5 ಲಕ್ಷ ರೈತರ 7417 ಕೋಟಿ ರು. ಮನ್ನಾ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ತಿಳಿಸಿದರು.

ರೈತರ ಸಾಲಮನ್ನಾ ಯೋಜನೆಯನ್ನು ವೈಜ್ಞಾನಿಕವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ನಿಯಮಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತರ ಸಾಲಮನ್ನಾ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಆಗಲಿದೆ. ರೈತರ ಸಾಲಮನ್ನಾ ಯೋಜನೆಗೆ ಹಣಕಾಸು ಕೊರತೆ ಇರುವುದಿಲ್ಲ ಹಾಗೂ ಈಗಾಗಲೇ ಪ್ರಕಟಿಸಿರುವ ಯೋಜನೆಗಳಿಗೆ ಸಾಲಮನ್ನಾದಿಂದ ಯಾವುದೇ ಅಡ್ಡಿಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.