ಬೆಂಗಳೂರು :  ಅರ್ಕಾವತಿ ಬಡಾವಣೆಯ ‘ಥಣಿಸಂದ್ರ ಡಿ-ನೋಟೀಫಿಕೇಷನ್‌’ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರಾಳವಾಗಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣದಿಂದ ಕುಮಾರಸ್ವಾಮಿ ಅವರನ್ನು ಸೋಮವಾರ ಕೈಬಿಟ್ಟಿದೆ.

ಕುಮಾರಸ್ವಾಮಿ ಸೇರಿದಂತೆ ಭೂ ಮಾಲೀಕರಾದ ಶ್ರೀರಾಮ್‌, ರವಿಪ್ರಕಾಶ್‌, ರಾಮಲಿಂಗಂ ಅವರನ್ನು ಪ್ರಕರಣದಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೈಬಿಟ್ಟಿದೆ. ಅರ್ಕಾವತಿ ಡಿ-ನೋಟೀಫಿಕೇಷನ್‌ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕು ಎಂದು ಕೋರಿ ಇವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯದ ನ್ಯಾಯಾಧೀಶ ವಿ.ವಿ.ಪಾಟೀಲ್‌, ಈ ಅರ್ಜಿಯನ್ನು ಮಾನ್ಯ ಮಾಡಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿಯಾದ ಮಾಜಿ ಸಚಿವ ಚನ್ನಿಗಪ್ಪ ಅರ್ಜಿ ಸಲ್ಲಿಸದ ಕಾರಣ ಅವರ ಬಗ್ಗೆ ಯಾವುದೇ ಆದೇಶ ನೀಡಿಲ್ಲ.

ಪ್ರಕರಣ ಕೈಬಿಟ್ಟಿದ್ದೇಕೆ?:  ಪ್ರಕರಣದಲ್ಲಿ ದೂರುದಾರ ದೂರು ದಾಖಲಿಸುವ ಮೊದಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡಿಲ್ಲ. ಡಿನೋಟಿಫೈ ಮಾಡಿದ ನಾಲ್ಕು ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ಉದ್ದೇಶಪೂರ್ವಕವಾಗಿ ಮತ್ತು ಲಾಭದ ಉದ್ದೇಶದಿಂದ ಡಿನೋಟಿಫಿಕೇಷನ್‌ ಮಾಡಿಲ್ಲ. ಅಲ್ಲದೇ, ಅಕ್ರಮ ನಡೆದಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂಬ ಅಭಿಪ್ರಾಯಪಟ್ಟನ್ಯಾಯಾಲಯವು ಪ್ರಕರಣದಿಂದ ಕುಮಾರಸ್ವಾಮಿ ಸೇರಿದಂತೆ ನಾಲ್ವರನ್ನು ಕೈಬಿಟ್ಟಿದೆ.

ಏನಿದು ಪ್ರಕರಣ?:  2007ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಅರ್ಕಾವತಿ ಬಡಾವಣೆಯ ಥಣಿಸಂದ್ರದಲ್ಲಿ ಡಿನೋಟಿಫೈ ಮಾಡಿದ್ದರು. ಬೆಂಗಳೂರು ಉತ್ತರ ತಾಲೂಕಿನ ಥಣಿಸಂದ್ರ ಗ್ರಾಮದ ಸರ್ವೆ ನಂಬರ್‌ ‘87/4 ಬಿ’ನಲ್ಲಿ 3 ಎಕರೆ 8 ಗುಂಟೆ ಜಮೀನು ಡಿನೋಟಿಫೈ ಮಾಡಲಾಗಿದ್ದು ಅಕ್ರಮ ಎಂದು ಚಾಮರಾಜನಗರದ ಮಹಾದೇವ ಸ್ವಾಮಿ ಎಂಬ ಖಾಸಗಿ ವ್ಯಕ್ತಿಯು ಆಕ್ಷೇಪಿಸಿದ್ದರು.

ಈ ಸಂಬಂಧ 2012ರಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆ ಮಾಡಲಾಗಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಕಲಂನಡಿ ಕುಮಾರಸ್ವಾಮಿ, ಮಾಜಿ ಸಚಿವ ಸಿ.ಚನ್ನಿಗಪ್ಪ, ಜಮೀನಿನ ಮಾಲೀಕರಾದ ರವಿಪ್ರಕಾಶ್‌, ಶ್ರೀರಾಮ್‌, ರಾಮಲಿಂಗಂ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿಸಲ್ಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸ್ಥಾಪನೆಯಾದ ಬಳಿಕ ಪ್ರಕರಣವು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ವರ್ಗಾವಣೆಯಾಗಿತ್ತು.