Asianet Suvarna News Asianet Suvarna News

ಉತ್ತರಕ್ಕೆ ಸಿಎಂ ಕುಮಾರಸ್ವಾಮಿ ಭರ್ಜರಿ ಭರವಸೆ

ಮುಖ್ಯಮಂತ್ರಿ ಕುಮಾರ ಸ್ವಾಮಿ ಉತ್ತರ ಕರ್ನಾಟಕಕ್ಕೆ ಭರ್ಜರಿ ಭರವಸೆಗಳನ್ನು  ನೀಡಿದ್ದಾರೆ. ರಾಜ್ಯದ 2 ನೇ ರಾಜಧಾನಿಯಾಗಿ ಬೆಳಗಾವಿ ಯನ್ನು ಘೋಷಿಸುವ ಬಗ್ಗೆ ಪರಿಶೀಲನೆ ನಡೆಸುವುದೂ ಸೇರಿ ಕೆಲ  ಸಚಿ ವಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. 

CM Kumaraswamy Gave Assurance To North Karnataka
Author
Bengaluru, First Published Aug 1, 2018, 7:34 AM IST

ಬೆಂಗಳೂರು :  ರಾಜ್ಯದ 2 ನೇ ರಾಜಧಾನಿಯಾಗಿ ಬೆಳಗಾವಿ ಯನ್ನು ಘೋಷಿಸುವ ಬಗ್ಗೆ ಪರಿಶೀಲನೆ ನಡೆಸುವುದೂ ಸೇರಿ ಕೆಲ  ಸಚಿ ವಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮುಖ್ಯವಾಗಿ, ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಸಚಿವಾಲಯಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಲು ಚಿಂತನೆ ಮಾಡಲಾಗಿದೆ. 

ಯಾವ ಯಾವ ಸಚಿವಾಲಯವನ್ನು ಸ್ಥಳಾಂತರಿಸಬಹುದು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ಇನ್ನು ಇಬ್ಬರು ಉಪ ಲೋಕಾಯುಕ್ತರ ಪೈಕಿ ಒಬ್ಬರು ಉಪ ಲೋಕಾಯುಕ್ತರನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲಾಗುವುದು. ರಾಜ್ಯದಲ್ಲಿರುವ ಮಾಹಿತಿ ಆಯುಕ್ತರ ಪೈಕಿ 3 ಆಯುಕ್ತರನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲಾಗುವುದು. ಬೆಂಗಳೂರಿನಲ್ಲಿ ಇರುವ ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸಲು ಚಿಂತನೆ ನಡೆಸಿದ್ದೇನೆ. 

20 ದಿನದೊಳಗಾಗಿ ಬೆಳಗಾವಿಯಲ್ಲಿ ಆ ಭಾಗದ ಪ್ರತಿನಿಧಿಗಳ ಜತೆ ಸಭೆ ನಡೆಸಿ ಉತ್ತರ ಕರ್ನಾಟಕದ ಸಮಗ್ರ ಅಭಿ ವೃದ್ಧಿಗೆ ಸರ್ಕಾರ ಕೈಗೊಳ್ಳಲಿರುವ ಕಾರ್ಯ ಕ್ರಮಗಳನ್ನು ಘೋಷಣೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಉತ್ತರ ಕರ್ನಾಟಕದ ಹೋರಾಟಗಾರರು ಹಾಗೂ ರೈತ ಮುಖಂಡರ ನಿಯೋಗದೊಂದಿಗೆ ಸಭೆ ನಡೆಸಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೈಗೊಳ್ಳಲಿರುವ ಕಾರ್ಯ ಕ್ರಮಗಳ ಬಗ್ಗೆ ಭರಪೂರ ಆಶ್ವಾಸನೆ ನೀಡಿದರು. ಕರ್ನಾಟಕ ಎಂದಿಗೂ ಅಖಂಡ. ಕರ್ನಾಟಕ ರಾಜ್ಯವನ್ನು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಎಂದು ಪ್ರತ್ಯೇಕವಾಗಿ ಕನಸು ಮನಸ್ಸಿನಲ್ಲೂ ಊಹಿಸಲು ಸಾಧ್ಯವಿಲ್ಲ. 

ಉತ್ತರ ಕರ್ನಾಟಕದ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ನನಗೆ ಒಂದು ವರ್ಷ ಕಾಲಾವಕಾಶ ನೀಡಿ. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ನೀಡುತ್ತೇನೆ ಎಂದು ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಗಾರರಿಗೆ ಭರವಸೆ ನೀಡಿದರು. 

ಉತ್ತರ ಕರ್ನಾಟಕಕ್ಕಾಗಿ ದುಡಿದಿದ್ದೇನೆ: ಉತ್ತರ ಕರ್ನಾಟಕದ ಜನತೆ ನನಗೆ ಮೊದಲಿನಿಂದಲೂ ಪ್ರೀತಿ ತೋರಿಸಿದ್ದಾರೆ. ನಾನೂ ಸಹ ಉತ್ತರ ಕರ್ನಾಟಕಕ್ಕಾಗಿ ಸಾಕಷ್ಟು ದುಡಿದಿದ್ದೇನೆ. ಆದರೆ, ಕೆಲವರು ರಾಜಕೀಯಕ್ಕಾಗಿ ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. 2006 ರಲ್ಲಿ ಮುಖ್ಯ ಮಂತ್ರಿಯಾಗಿದ್ದಾಗ 20 ತಿಂಗಳಲ್ಲಿ 53 ಗ್ರಾಮವಾಸ್ತವ್ಯ ಮಾಡಿದ್ದೇನೆ. ಅದರಲ್ಲಿ 35 ಗ್ರಾಮ ವಾಸ್ತವ್ಯ ಉತ್ತರ ಕರ್ನಾಟಕ ಭಾಗದಲ್ಲೇ ಮಾಡಿದ್ದೇನೆ. ಬೆಳಗಾವಿಯ ನಾಗನೂರು ಗ್ರಾಮದಲ್ಲಿ ಮೊದಲ ಗ್ರಾಮ ವಾಸ್ತವ್ಯ ಮಾಡಿದ್ದೇನೆ. 

ಅಲ್ಲದೆ, ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೂ ಮೊದಲೇ ಐದು ದಿನ ಅಧಿವೇಶನ ಮಾಡಿದೆ. ಸುವರ್ಣಸೌಧ ನಿರ್ಮಾಣಕ್ಕೆ 450 ಕೋಟಿ ರು. ಕೊಟ್ಟು ನಿರ್ಮಾಣ ಮಾಡಿದ್ದು ನಾನು. ಅಲ್ಲದೆ, 20 ತಿಂಗಳಲ್ಲೇ ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಮಾಡುತ್ತೇನೆ ಎಂದು ಘೋಷಿಸಿದೆ. ಆದರೆ, ಮುಂದೆ ಅಧಿಕಾರಕ್ಕೆ ಬಂದವರು ಅದನ್ನು ಮಾಡಲಿಲ್ಲ ಎಂದು ಹೇಳಿದರು. 

ಮುಖ್ಯಮಂತ್ರಿ ಆಗಿದ್ದಾಗ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ವಿಜಯಪುರ, ಬಾದಾಮಿ, ಬೀದರ್, ಕಲಬುರಗಿಯಲ್ಲಿ ಪ್ರವಾಸ ಮಾಡಿದ್ದೇನೆ. ನಮಗೆ ಅಲ್ಲಿ ನೆಲೆಗಟ್ಟು ಇಲ್ಲ. ನಮ್ಮ ಪಕ್ಷದ ಮುಖಂಡರು ಮತ ಗಳಿಸುವಷ್ಟು ಶಕ್ತಿ ಹೊಂದಿಲ್ಲ. ನಾನು ಇದಕ್ಕೆ ಅಲ್ಲಿನ ಮತದಾರರನ್ನು ದೂಷಿಸುವುದಿಲ್ಲ ಎಂದರು.

ಕೈಗಾರಿಕೆಗಳ ಅಭಿವೃದ್ಧಿಗೆ ಕ್ರಮ: ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂಬುದು ವಾಸ್ತವವಲ್ಲ. ಸಿದ್ದರಾಮಯ್ಯ ಬಜೆಟ್‌ನ ಎಲ್ಲಾ ಕಾರ್ಯಕ್ರಮ ಮುಂದುವರೆಸುತ್ತೇನೆ. ಕಲಬುರಗಿಯಲ್ಲಿ ಸೋಲಾರ್ ಪ್ಯಾನೆಲ್ ತಯಾರಿ ಘಟಕ, ಬೀದರ್‌ನಲ್ಲಿ ಕೃಷಿ ಉಪ ಉತ್ಪನ್ನಗಳ ಕಾರ್ಖಾನೆ, ಕೊಪ್ಪಳದಲ್ಲಿ ಕ್ಲಸ್ಟರ್, ಬಳ್ಳಾರಿಯಲ್ಲಿ ಗಾರ್ಮೆಂಟ್ಸ್ ಕ್ಲಸ್ಟರ್, ಬೆಳಗಾವಿಯಲ್ಲಿ ಕೈಮಗ್ಗ, ಪೀಠೋಪಕರಣಗಳ ಕ್ಲಸ್ಟರ್ ನಿರ್ಮಾಣ ಮಾಡಲು 500 ಕೋಟಿ ರು. ಮೀಸಲಿಟ್ಟಿದ್ದೇನೆ. ಉದ್ಯಮಿಗಳನ್ನು ಕರೆದುಕೊಂಡು ಬಂಡವಾಳ ಹಾಕಿಸಿ ಕಾರ್ಖಾನೆಗಳನ್ನು ಮಾಡುವುದು ನನಗೆ ಗೊತ್ತಿದೆ ಎಂದರು.

Follow Us:
Download App:
  • android
  • ios