ಬೆಂಗಳೂರು :  ರಾಜ್ಯದ ಬಡ ಹಾಗೂ ದುರ್ಬಲ ವ್ಯಕ್ತಿಗಳು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲ ಮನ್ನಾ ಮಾಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಸಭೆ ಶುಕ್ರವಾರ ತೆಗೆದುಕೊಂಡಿದ್ದು, ಈ ಸಂಬಂಧ ‘ಋುಣ ಪರಿಹಾರ ಅಧಿನಿಯಮ-2018’ ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಮಾಡಿದೆ.

ಈ ಸುಗ್ರೀವಾಜ್ಞೆಯನ್ವಯ ರಾಜ್ಯದಲ್ಲಿರುವ 1.25 ಲಕ್ಷ ರು.ಗಿಂತ ಕಡಿಮೆ ವಾರ್ಷಿಕ ವರಮಾನ ಹಾಗೂ ಕಡಿಮೆ ಕೃಷಿ ಭೂಮಿ ಹೊಂದಿರುವ ದುರ್ಬಲ ವರ್ಗದವರು ಖಾಸಗಿ ಲೇವಾದೇವಿದಾರರು ಹಾಗೂ ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಎಲ್ಲಾ ರೀತಿಯ ಸಾಲವನ್ನೂ ಮನ್ನಾ ಮಾಡಲಾಗುವುದು.

ಖಾಸಗಿ ಸಾಲ ನೀಡಿದವರು ಸಾಲ ಪಡೆದವರಿಂದ ಅದನ್ನು ವಾಪಸ್‌ ಕೇಳುವಂತಿಲ್ಲ. ಸಾಲ ನೀಡಿದವರಿಗೆ ಸರ್ಕಾರ ಕೂಡ ಹಣ ಮರುಪಾವತಿ ಮಾಡುವುದಿಲ್ಲ. ಹೀಗಾಗಿ ಈ ಯೋಜನೆಯಿಂದ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, 1976ರಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಋುಣ ಪರಿಹಾರ ಅಧಿನಿಯಮವನ್ನು ಜಾರಿಗೊಳಿಸಿ ಖಾಸಗಿ ಲೇವಾದೇವಿದಾರರಲ್ಲಿ ಸಾರ್ವಜನಿಕರು ಮಾಡಿದ್ದ ಸಾಲ ಮನ್ನಾ ಮಾಡಿದ್ದರು. ಅದೇ ರೀತಿ ರಾಜ್ಯದಲ್ಲಿ ಖಾಸಗಿ ಸಾಲಗಾರರಿಂದ ಶೋಷಣೆಗೆ ಒಳಗಾಗುತ್ತಿರುವವರನ್ನು ಋುಣದಿಂದ ಮುಕ್ತಗೊಳಿಸಲು ರಾಜ್ಯ ಸರ್ಕಾರವು ಋುಣ ಪರಿಹಾರ ಅಧಿನಿಯಮ ಜಾರಿಗೊಳಿಸುತ್ತಿದೆ.

ಭೂರಹಿತ ಕೃಷಿಕರು, ದುರ್ಬಲ ವರ್ಗದ ವ್ಯಕ್ತಿಗಳು ಖಾಸಗಿ ಲೇವಾದೇವಿದಾರರಿಂದ ಪಡೆದಿರುವ ಸಾಲ ಹಾಗೂ ಮನೆ, ಜಮೀನು, ನಿವೇಶನದಂತಹ ಚರಾಸ್ಥಿ ಅಡಮಾನ ಸಾಲವನ್ನು ಮನ್ನಾ ಮಾಡಲಾಗುವುದು. ಸುಗ್ರೀವಾಜ್ಞೆ ಮೂಲಕ ಅಧಿನಿಯಮ ಜಾರಿಗೊಳಿಸಲು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುವುದು. ರಾಷ್ಟ್ರಪತಿಗಳ ಅಂಕಿತ ದೊರೆತ ತಕ್ಷಣ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ವಾಪಸ್‌ ಕೇಳಿದರೆ 1 ಲಕ್ಷ ದಂಡ, 1 ವರ್ಷ ಜೈಲು!

ಸಾಲ ನೀಡಿರುವವರು ಕಾರ್ಯವ್ಯಾಪ್ತಿಯ ಸಹಾಯಕ ಆಯುಕ್ತರ ಮುಂದೆ ಸಾಲದ ವಿವರ ಸಲ್ಲಿಸಬೇಕು. ನಿಯಮ ಉಲ್ಲಂಘನೆ ಮಾಡಿ ಸಾಲ ವಸೂಲಾತಿಗೆ ಒತ್ತಡ ಹೇರಿದರೆ ಸಾಲ ನೀಡಿರುವವರಿಗೆ 1 ವರ್ಷ ಜೈಲು ಹಾಗೂ 1 ಲಕ್ಷದವರೆಗೆ ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಖಾಸಗಿ ಸಾಲ ಮನ್ನಾ ಹೇಗೆ?

ಸಾಲಗಾರನು ಖಾಸಗಿ ವ್ಯಕ್ತಿಗಳಿಂದ ಪಡೆದಿರುವ ಸಾಲವನ್ನು ಮರುಪಾವತಿ ಮಾಡದೆ ಋುಣಮುಕ್ತನಾಗಲು ಅವಕಾಶ ಇದೆ. ಇದನ್ನು ಸುಪ್ರೀಂಕೋರ್ಟ್‌ ಕೂಡ ಒಪ್ಪಿದೆ. ಈ ನಿಯಮದ ಅನ್ವಯ ಖಾಸಗಿ ಸಾಲ ಮನ್ನಾ ಮಾಡಲಾಗುತ್ತಿದೆ. ಈ ಅಧಿನಿಯಮದ ಅಡಿ ಋುಣ ವಿಮೋಚನೆ ಪಡೆದವರ ಬಗೆಗಿನ ಯಾವುದೇ ಪ್ರಕರಣವನ್ನೂ ನ್ಯಾಯಾಲಯವು ಪರಿಗಣಿಸುವಂತಿಲ್ಲ. ಜತೆಗೆ ಖಾಸಗಿ ವ್ಯಕ್ತಿಗಳಿಗೆ ಸಾಲಕ್ಕೆ ಚರಾಸ್ಥಿಯನ್ನು ಭದ್ರತೆಯಾಗಿ ಅಡಮಾನ ಮಾಡಿದ್ದಲ್ಲಿ ತಕ್ಷಣ ಬಿಡುಗಡೆ ಮಾಡಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಖಾಸಗಿ ಸಾಲಮನ್ನಾ ಯಾರಿಗೆ?

ಕಡಿಮೆ ವರಮಾನವುಳ್ಳ ಬಡವರು ಹಾಗೂ ಕಡಿಮೆ ಜಮೀನು ಇರುವ ಕೃಷಿಕರಿಗೆ ಅನ್ವಯವಾಗಲಿದೆ. ಸಚಿವ ಸಂಪುಟ ನಿರ್ಧಾರದ ಪ್ರಕಾರ ಸಣ್ಣ ರೈತರು ಅಂದರೆ 4 ಹೆಕ್ಟೇರ್‌ ಒಣ ಭೂಮಿಗಿಂತ ಹೆಚ್ಚು ಭೂಮಿ ಹೊಂದಿರಬಾರದು. ಜತೆಗೆ ವಾರ್ಷಿಕ ಆದಾಯ 1.25 ಲಕ್ಷ ಮೀರಬಾರದು. ಮಳೆ ಆಧಾರಿತ ಕೃಷಿ ಭೂಮಿ ಆದರೆ 3 ಎಕರೆ, ನೀರಾವರಿ ಜಮೀನು ಆದರೆ 1 ಎಕರೆಗಿಂತ ಕಡಿಮೆ ಇರುವವರಿಗೆ ಸಾಲ ಮನ್ನಾ ಅನ್ವಯವಾಗಲಿದೆ.

ಯಾರಿಗೆ ಅನ್ವಯವಾಗುವುದಿಲ್ಲ?

ಆರ್‌ಬಿಐ ಅಡಿ ವ್ಯವಹಾರ ನಡೆಸಿರುವ ಹಣಕಾಸು ಸಂಸ್ಥೆಗಳು ಹಾಗೂ ಸಣ್ಣ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲಕ್ಕೆ ಋುಣಮುಕ್ತ ಅಧಿನಿಯಮ ಅನ್ವಯವಾಗುವುದಿಲ್ಲ. ಜತೆಗೆ ಭೂ ಕಂದಾಯ ವಸೂಲಾತಿ ಬಾಕಿ, ಸರ್ಕಾರಿ ಸಂಸ್ಥೆ ಹಾಗೂ ಪ್ರಾಧಿಕಾರಿಗಳ ತೆರಿಗೆ, ರಾಜಸ್ವ ಇತರೆ ಬಾಕಿಗೆ ಅನ್ವಯವಾಗುವುದಿಲ್ಲ. ಕೂಲಿ, ಸಂಭಾವನೆ ವೇತನ ಬಾಕಿಗೆ ಅನ್ವಯವಾಗುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಬಾಕಿಗೆ ಅನ್ವಯವಾಗುವುದಿಲ್ಲ. ಸರ್ಕಾರಿ ಕಂಪನಿ ಸಾಲ, ಭಾರತೀಯ ಜೀವ ವಿಮಾ ನಿಗಮ, ನೋಂದಣಿಗೊಂಡ ಸಹಕಾರ ಸಂಘಗಳಿಂದ ಪಡೆದ ಸಾಲಕ್ಕೆ ಖಾಸಗಿ ಸಾಲ ಮನ್ನಾ ನಿಯಮ ಅನ್ವಯವಾಗುವುದಿಲ್ಲ.