ಸೂಚನೆ ಮೀರಿ ಬ್ಯಾಂಕುಗಳು ಸಾಲಗಾರ ರೈತರಿಗೆ ನೋಟಿಸ್ ನೀಡಿದರೆ ಅಂತಹ ಬ್ಯಾಂಕ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು : ಸರ್ಕಾರದ ಸೂಚನೆ ಮೀರಿ ಬ್ಯಾಂಕುಗಳು ಸಾಲಗಾರ ರೈತರಿಗೆ ನೋಟಿಸ್ ನೀಡಿದರೆ ಅಂತಹ ಬ್ಯಾಂಕ್ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈಗಾಗಲೇ ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಕೌಶಲ್ಯಾಭಿವೃದ್ಧಿ ಇಲಾಖೆಯು ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಡಳಿತಗಳ ಸಂಯುಕ್ತಾಶ್ರಯದಲ್ಲಿ ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಈಗಾಗಲೇ ರೈತರ ಸಾಲ ಮನ್ನಾ ಯೋಜನೆಯನ್ನು ಹಂತಹಂತವಾಗಿ ಜಾರಿ ಮಾಡಲು ಕ್ರಮ ವಹಿಸಿದೆ. ಹಾಗಾಗಿ ಸಾಲಗಾರ ರೈತರ ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದ್ದು, ಯಾವುದೇ ಸಾಲಗಾರ ರೈತರಿಗೆ ನೋಟಿಸ್ ನೀಡದಂತೆ ಪತ್ರ ಬರೆಯಲಾಗಿದೆ. ಇದನ್ನು ಮೀರಿಯೂ ಯಾವುದೇ ಬ್ಯಾಂಕುಗಳು ರೈತರಿಗೆ ಸಾಲ ತೀರಿಸುವಂತೆ ಅಥವಾ ಆಸ್ತಿ ಜಪ್ತಿ ಮಾಡುವುದಾಗಿ ನೋಟಿಸ್ ಜಾರಿ ಮಾಡಿದರೆ ಅಂತಹ ಬ್ಯಾಂಕ್ ಮ್ಯಾನೇಜರ್‌ಗಳನ್ನು ಬಂಧಿಸಿ ಜೈಲಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ರೈತರ ಸಾಲ ಮನ್ನಾಗೂ ರಾಜ್ಯದ ಅಭಿವೃದ್ಧಿ ವಿಷಯಕ್ಕೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಸಾಲ ಮನ್ನಾಕ್ಕೆ ಅಗತ್ಯ ಹಣಕಾಸು ಕ್ರೂಢೀಕರಿಸುವುದು ಗೊತ್ತಿದೆ. ಸಾಲ ಮನ್ನಾ ಯೋಜನೆ ಜಾರಿಯಿಂದ ಯಾವುದೇ ಇತರೆ ಯೋಜನೆಗಳ ಅನುದಾನವನ್ನೇನೂ ಕಡಿತಗೊಳಿಸಲಾಗಿಲ್ಲ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಕೂಡ ಕಡಿಮೆ ಮಾಡಿ 2 ರು. ಬೆಲೆ ಇಳಿಕೆ ಮಾಡಲಾಗಿದೆ ಎಂದರು.
ರೈತರು ತಾಳ್ಮೆಯಿಂದ ಕಾಯಬೇಕು:
ನೋಂದಣಿ ರಹಿತ ಖಾಸಗಿ ವ್ಯಕ್ತಿಗಳು ಹೆಚ್ಚಿನ ಬಡ್ಡಿಗೆ ಸಾಲ ನೀಡುವುದು, ಸಾಲ ಹಿಂಪಡೆಯಲು ಕಿರುಕುಳ ನೀಡುವಂತಹಹ ಘಟನೆಗಳನ್ನು ತಪ್ಪಿಸಲು ತಪ್ಪಿಸಲು ಸರ್ಕಾರ ಋುಣಭಾರ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ರಾಷ್ಟ್ರಪತಿ ಅವರ ಅಂಕಿತಕ್ಕಾಗಿ ಕಾಯುತ್ತಿದ್ದೇವೆ. ಕಾಯ್ದೆ ಜಾರಿಯಾಗುವವರೆಗೂ ರೈತರು, ಸಾಲಗಾರರು ತಾಳ್ಮೆಯಿಂದ ಕಾಯಬೇಕು. ಆತುರದಿಂದ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಇದೇ ವೇಳೆ ಸಿಎಂ ಮನವಿ ಮಾಡಿದರು.
ಮಂಡ್ಯದಲ್ಲಿ ಇತ್ತೀಚೆಗೆ ರೈತ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿತು. ಆ ಕುಟುಂಬದ ಯಜಮಾನ ಜನತಾದರ್ಶನಕ್ಕೆ ಬಂದು ಅರ್ಜಿ ಕೊಟ್ಟಿದ್ದ. ದನಗಳನ್ನು ಮನಸ್ಸಿಗೆ ಬಂದ ದರಕ್ಕೆ ಖರೀದಿಸಿ ಮಾರುವುದು ಆತನ ಚಟ. ಆ ವ್ಯಕ್ತಿಗೂ ಸಹ ತಾಳ್ಮೆಯಿಂದ ಇರುವಂತೆ ಹೇಳಿದ್ದೆ. ಸಾಲಗಾರರಿಂದ ಆತನಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೆ. ಆದರೂ ಆತ್ಮಹತ್ಮೆ ಮಾಡಿಕೊಂಡಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಇನ್ನು ವಿಧಾನಸೌಧದಲ್ಲಿ ನಿನ್ನೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ಯುವ ರೈತನಿಗೆ ಅನಾರೋಗ್ಯವಿತ್ತು. ಖಾಸಗಿಯವರಿಂದ ಇಪ್ಪತ್ತು ಲಕ್ಷ ರು. ಸಾಲ ಮಾಡಿಕೊಂಡು ಅದನ್ನು ತೀರಿಸಬೇಕೆಂದು ಕೇಳುತ್ತಾನೆ. ಹೀಗೆ ನಿತ್ಯವೂ ಹತ್ತಿಪ್ಪತ್ತು ಲಕ್ಷ ರು. ಸಾಲ ಮಾಡಿಕೊಂಡು ಹತ್ತಾರು ಜನ ನನ್ನ ಬಳಿ ಬಂದರೆ ಅವರ ಸಾಲ ತೀರಿಸಲು ಸಾಧ್ಯವೇ? ಹಾಗಾಗಿಯೇ ಇದಕ್ಕೆಲ್ಲಾ ಒಂದು ಪರಿಹಾರವಾಗಿ ಋುಣಮುಕ್ತ ಕಾಯ್ದೆ ಜಾರಿಗೊಳಿಸುತ್ತಿದ್ದೇವೆ ಎಂದರು.
ಅಲ್ಲದೆ, ಖಾಸಗಿ ಸಾಲ ನೀಡುವುವರ ಹಾವಳಿ ತಪ್ಪಿಸಿ ಸರ್ಕಾರದಿಂದಲೇ ಮೊಬೈಲ್ ಬ್ಯಾಂಕ್‌ಗಳನ್ನು ಸ್ಥಾಪಿಸಿ ಕನಿಷ್ಠ ಒಂದು ಸಾವಿರ ರು.ನಿಂದ 10 ಸಾವಿರ ರು.ವರೆಗೆ ದಿನದ ಮಟ್ಟಿಗೆ ಬಡ್ಡಿರಹಿತ ಕೈ ಸಾಲ ನೀಡುವ ಯೋಜನೆಯನ್ನು ತರಲಾಗುತ್ತಿದೆ. ಇದು ಜಾರಿಯಾದರೆ ಸಣ್ಣಪುಟ್ಟವ್ಯಾಪಾರಿಗಳು, ರೈತರು, ಕಾರ್ಮಿಕರು ಮತ್ತಿತರರ ಜನರು ಸಾಲಕ್ಕಾಗಿ ಖಾಸಗಿಯವರ ಬಳಿ ಕೈ ಚಾಚುವಂತಿರುವುದಿಲ್ಲ. ಅಂದಿನ ವ್ಯಾಪಾರ, ದುಡಿಮೆ ಬಳಿಕ ಬಡ್ಡಿ ಇಲ್ಲದೆ ಸಾಲ ವಾಪಸ್ ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಉದಯ ಗರುಡಾಚಾರ್, ಸೌಮ್ಯಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.
ಎಲ್ಲರಿಗೂ ಉದ್ಯೋಗ ನೀಡುವ ಗುರಿ
ಎಲ್ಲ ದುಡಿಯುವ ಕೈಗಳಿಗೂ ಉದ್ಯೋಗ ನೀಡುವ ಗುರಿಯನ್ನಿಟ್ಟುಕೊಂಡು ಸರ್ಕಾರ ಉದ್ಯೋಗ ಮೇಳ ಆರಂಭಿಸಿದೆಯೇ ಹೊರತು ಕಾಟಾಚಾರಕ್ಕಲ್ಲ. ಇನ್ಮುಂದೆಯೂ ಈ ಉದ್ಯೋಗ ಮೇಳದ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದು ಇದೇ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನೂರಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿವೆ. ದೋಸ್ತಿ ಸರ್ಕಾರ ಬಂದ ಬಳಿಕ ಅಧಿಕೃತವಾಗಿ ಎರಡು ಜನತಾ ದರ್ಶನ ನಡೆಸಿದ್ದೇನೆ. ಆ ವೇಳೆ 12,000ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ಅವುಗಳ ಪೈಕಿ ಉದ್ಯೋಗ ಕೋರಿ 3,000 ಅರ್ಜಿಗಳು ಬಂದಿದೆ. ಯಾವ ಅರ್ಜಿಯನ್ನೂ ಲಘುವಾಗಿ ಪರಿಗಣಿಸಿಲ್ಲ. ಇದೆಲ್ಲವನ್ನೂ ಗಮನಿಸಿಯೇ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ಉದ್ಯೋಗ ಸಿಗುವ ವಿಶ್ವಾಸವಿದೆ ಎಂದರು.
ಉದ್ಯೋಗ ಸೃಷ್ಟಿನಮ್ಮ ಸರ್ಕಾರದ ಮೊದಲ ಆದ್ಯತೆ. ಇದಕ್ಕಾಗಿ 9 ಜಿಲ್ಲೆಗಳಲ್ಲಿ ಕ್ಲಸ್ಟರ್‌ಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ 43 ಕಂಪನಿಗಳ ತಂಡವನ್ನು ಕಟ್ಟಿದ್ದೇವೆ. ಯಾವ ಜಿಲ್ಲೆಯಲ್ಲಿ ಯಾವ ರೀತಿಯ ಕಾರ್ಖಾನೆ ಶುರು ಮಾಡುವುದು ಎಂಬ ಚಿಂತನೆ ನಡೆದಿದೆ ಎಂದು ಹೇಳಿದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ದೇಶ ಒಂದೆಡೆ ಪ್ರಗತಿಯಾಗಿದೆ ಎಂದು ಹೇಳುತ್ತಿದ್ದರೂ, ಉದ್ಯೋಗ ಸಮಸ್ಯೆ ಜ್ವಲಂತವಾಗಿ ಕಾಡುತ್ತಿದೆ. ರಾಜ್ಯದಲ್ಲಿ ಈ ಸಮಸ್ಯೆ ದೂರವಾಗಿಸಲು ಮುಖ್ಯಮಂತ್ರಿ ಅವರ ಆಶಯದಂತೆ ಉದ್ಯೋಗ ಮೇಳ ನಡೆಸಲಾಗುತ್ತಿದೆ. ಬರುವ 12 ವರ್ಷಗಳಲ್ಲಿ 1.88 ಕೋಟಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.
