ಕೋಲ್ಕತಾ: ಅಪ್ಪಟ ದಕ್ಷಿಣ ಭಾರತೀಯ ಶೈಲಿಯಲ್ಲಿ ಪಂಚೆ ಧರಿಸಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಏರ್ಪಡಿಸಿದ್ದ ವಿಪಕ್ಷಗಳ ಮಹಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಂಗಾಳಿಯಲ್ಲಿ 1 ನಿಮಿಷ ಭಾಷಣ ಮಾಡುವ ಮೂಲಕ ಅಚ್ಚರಿಗೆ ಕಾರಣರಾದರು. 

ಸಾಮಾನ್ಯವಾಗಿ ಅನ್ಯ ರಾಜ್ಯದ ರಾಜಕಾರಣಿಗಳು ಭಾಷಣದ ಆರಂಭದಲ್ಲಿ ‘ನಮಸ್ಕಾರ’ ಹೇಳುವಾಗ 1 ವಾಕ್ಯವನ್ನು ಸ್ಥಳೀಯ ಭಾಷೆಯಲ್ಲಿ ಮಾತನಾಡುವುದು ವಾಡಿಕೆ. 

ಆದರೆ ಕುಮಾರಸ್ವಾಮಿ ಅವರು ಬಂಗಾಳಿಯಲ್ಲಿ ಬರೆದುಕೊಂಡು ತಂದಿದ್ದ ಭಾಷಣವನ್ನು 1 ನಿಮಿಷ ಮಾಡಿ, ನಂತರ ಇಂಗ್ಲಿಷ್ ಗೆ ಹೊರಳಿದರು. ‘ಅಪರಾಹ್ನದ ನಮಸ್ಕಾರಗಳು. ಈಶ್ವರ ಚಂದ್ರ ವಿದ್ಯಾಸಾಗರ, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಠಾಗೋರ್, ರಾಜಾರಾಮ ಮೋಹನ ರಾಯ್ ಅವರಂಥ ಮಹಾಮಹಿಮರು, ಪ್ರಗತಿಶೀಲ ಚಿಂತಕರು ಆಗಿ ಹೋದ ಪವಿತ್ರ ಸ್ಥಳವಿದು. ಇಲ್ಲಿನ ಜನರಿಗೆ ನಾನು ಚಿರಋಣಿ’ ಎಂದು ಎಚ್‌ಡಿಕೆ ಬಂಗಾಳಿಯಲ್ಲಿ ಹೇಳಿದರು.