ಹುಬ್ಬಳ್ಳಿ :  ‘ಬಜೆಟ್‌ ಬಳಿಕ ಬಿಜೆಪಿಗರು ನನ್ನನ್ನು ದಕ್ಷಿಣದ ಕೆಲವು ಜಿಲ್ಲೆಗಳಿಗೆ ಸೀಮಿತವಾದ ಸಿಎಂ ಎಂದು ಬಿಂಬಿಸಲು ಹರಸಾಹಸ ನಡೆಸಿದ್ದು, ಇಷ್ಟರಲ್ಲಿಯೇ ನಾನೇನು ಎನ್ನುವುದನ್ನು ಮಾಡಿ ತೋರಿಸುತ್ತೇನೆ. ಆಗ ಅವರೇ ನನ್ನನ್ನು ಉತ್ತರ ಕರ್ನಾಟಕ ಪ್ರದೇಶಕ್ಕೆ ಸೀಮಿತವಾದ ಸಿಎಂ ಎಂದು ಕರೆಯುವ ಕಾಲ ದೂರವಿಲ್ಲ.’

-ಉತ್ತರ ಕರ್ನಾಟಕದವರೇ ಬಿಜೆಪಿಯನ್ನು ತಿರಸ್ಕರಿಸುವ ಹಾಗೆ ಆಡಳಿತ ನಡೆಸುತ್ತೇನೆ ಎಂದು ಇತ್ತೀಚೆಗಷ್ಟೇ ರಾಮನಗರದಲ್ಲಿ ಸವಾಲು ಹಾಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಭಾನುವಾರ ಹುಬ್ಬಳ್ಳಿಯಲ್ಲಿ ಗುಡುಗಿದ್ದು ಹೀಗೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಾವು ಮಾಡಿಕೊಂಡಿರುವ ಯೋಜನೆ ಮತ್ತು ಸಿದ್ಧತೆಗಳನ್ನು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸವಿಸ್ತಾರವಾಗಿ ವಿವರಿಸಿದರು.

ಇಲ್ಲಿನ ನ್ಯಾಯಾಲಯ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಆಲಮಟ್ಟಿಅಣೆಗೆ ಬಾಗಿನ ಅರ್ಪಿಸಲು ವಿಜಯಪುರಕ್ಕೆ ತೆರಳಬೇಕಿದ್ದ ಸಿಎಂ ಕುಮಾರಸ್ವಾಮಿ, ಹವಾಮಾನ ವೈಪರೀತ್ಯದಿಂದಾಗಿ ಪ್ರವಾಸ ರದ್ದಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲೇ ಉಳಿದು ಮಾಧ್ಯಮದವರೊಂದಿಗೆ ತುಸು ಸುದೀರ್ಘವಾಗಿಯೇ ಮಾತನಾಡಿದರು.

ಉತ್ತರ ಪ್ರವಾಸಕ್ಕೆ ಸಿದ್ಧತೆ:  ರಾಜ್ಯದ ದಕ್ಷಿಣ ಭಾಗದಲ್ಲಿ ಈ ಬಾರಿ ಸಮೃದ್ಧ ಮಳೆಯಾಗಿದೆ. ಅಲ್ಲಿನ ರೈತರ ಮುಖದಲ್ಲಿ ನಗೆ ಇದೆ. ಆದರೆ ಉತ್ತರ ಭಾಗದ ಕೆಲವು ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಹಾಗಾಗಿ ಅವರ ಸಂಕಷ್ಟಕ್ಕೆ ನೆರವಾಗಲು ಮುಂದಿನ ತಿಂಗಳಿಂದ ಉತ್ತರ ಕರ್ನಾಟಕ ಪ್ರವಾಸ ಆರಂಭಿಸುತ್ತೇನೆ. ಬಹು ಹಿಂದೆಯೇ ನಾನು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದೇನೆ. ಇನ್ನು ಮುಂದೆ ಎಷ್ಟೇ ಕಾರ್ಯಬಾಹುಳ್ಯವಿದ್ದರೂ ತಿಂಗಳಲ್ಲಿ ಒಂದುದಿನ ಈ ಮನೆಗೆ ಬರುತ್ತೇನೆ. ಪ್ರತಿ ತಿಂಗಳು ಒಂದೊಂದು ಜಿಲ್ಲೆಯ ಹೋಬಳಿಯಲ್ಲಿ ಅಧಿಕಾರಿಗಳೊಂದಿಗೆ ದಿನವಿಡೀ ಉಳಿದು ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು. ಈ ಮೂಲಕ ಕೃಷಿಕರ, ಭೂರಹಿತ ಕೃಷಿ ಕೂಲಿಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬುವುದಾಗಿ ಕುಮಾರಸ್ವಾಮಿ ಹೇಳಿದರು.

ಕಲಬುರಗಿಯಲ್ಲಿ ಸೋಲಾರ್‌ ಪ್ಯಾನಲ್‌ಗಳ ಉತ್ಪಾದನಾ ಘಟಕ, ಬೀದರ್‌ನಲ್ಲಿ ಕೃಷಿ ಪರಿಕರಗಳ ಉತ್ಪಾದನಾ ಘಟಕ, ಕೊಪ್ಪಳದಲ್ಲಿ ಬೊಂಬೆಗಳ ಉತ್ಪಾದನಾ ಘಟಕ, ಬೆಳಗಾವಿಯಲ್ಲಿ ಫರ್ನಿಚರ್‌ ಉತ್ಪಾದನಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸಲು 500 ಕೋಟಿ ಇಡಲಾಗಿದೆ. ಮುಂದಿನ ವರ್ಷದಿಂದ ಅದನ್ನು 2 ಸಾವಿರ ಕೋಟಿಗೆ ಏರಿಸುತ್ತೇನೆ. ಕೈಗಾರಿಕೆ ಸ್ಥಾಪಿಸಲು ಮುಂದಾಗುವ ಉದ್ಯಮಿಗಳ ಮನವೊಲಿಸಿ ಉತ್ತರಕ್ಕೆ ಕರೆದು ತರುವ ಯತ್ನ ನಡೆದಿದೆ ಎಂದರು.

ಸುವರ್ಣಸೌಧಕ್ಕೆ ಕಚೇರಿಗಳು:  ಯಾವ್ಯಾವ ಇಲಾಖೆಯ ಕಚೇರಿಗಳನ್ನು ಸುವರ್ಣಸೌಧಕಕ್ಕೆ ಸ್ಥಳಾಂತರಿಸಬಹುದು ಎನ್ನುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ನಿಡಿದ್ದೇನೆ. ಶೀಘ್ರದಲ್ಲಿ ಆ ಎಲ್ಲ ಕಚೇರಿಗಳು ಸುವರ್ಣ ಸೌಧಕ್ಕೆ ಬರಲಿವೆ ಎಂದರು ಸಿಎಂ ಕುಮಾರಸ್ವಾಮಿ.