ಬೆಂಗಳೂರು :  ಯಾರು ಎಷ್ಟೇ ಸದ್ದು ಮಾಡಿದರೂ ಯಾವುದೇ ಪ್ರಯೋಜನ ಇಲ್ಲ. ಮೈತ್ರಿ ಸರ್ಕಾರವು ಬಂಡೆ ತರಹ ಭದ್ರವಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಪಕ್ಷ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 167 ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಬುಧವಾರ ವಿಧಾನಸೌಧದ ಮುಂದೆ ಟ್ಯಾಕ್ಸಿ ಮತ್ತು ಸರಕು ಸಾಗಾಣಿಕೆ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಕರ್ನಾಟಕದಲ್ಲಿ ಶೀಘ್ರ ಕಂಪನವಾಗಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕೈಗೊಳ್ಳುವ ತೀರ್ಮಾನದ ಮೇಲೆ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂಬ ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇಂತಹ ಹೇಳಿಕೆಯು ಪ್ರತಿಕ್ರಿಯೆಗೆ ಅರ್ಹವಲ್ಲ. ಕಳೆದ ಆರು ತಿಂಗಳನಿಂದಲೂ ಈ ರೀತಿಯ ಸೌಂಡ್‌ ಮಾಡಲಾಗುತ್ತಿದೆ. ಅದರಿಂದಾಗುವ ಪ್ರಯೋಜನವೇನು? ಯಾವುದೇ ಉಪಯೋಗವಾಗಿಲ್ಲ. ಮೈತ್ರಿ ಸರ್ಕಾರವು ಬಂಡೆಯಂತೆ ಭದ್ರವಾಗಿದೆ ಎಂದು ಹೇಳಿದರು.

ಬಿಜೆಪಿ ನಾಯಕರು ಕಳೆದ ಆರು ತಿಂಗಳಿನಿಂದ ಸದ್ದು ಮಾಡುತ್ತಲೇ ಇದ್ದಾರೆ. ಸದ್ದು ಮಾಡುವುದಷ್ಟೇ ಬಿಜೆಪಿ ಕೆಲಸ. ಸರ್ಕಾರಕ್ಕೆ ಮಾತ್ರ ಏನು ಆಗಿಲ್ಲ. ಸರ್ಕಾರ ಪತನದ ವಿಚಾರ ಈಗ ಸತ್ತು ಹೋಗಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವ ಬಂದಾಗಿನಿಂದಲೂ ಸರ್ಕಾರ ಬೀಳಿಸುವ ಮಾತು ಆಡುತ್ತಿದ್ದಾರೆ. ಆದರೆ ಏನು ಮಾಡಲು ಸಾಧ್ಯವಾಗಿಲ್ಲ ಎಂದು ಕಿಡಿಕಾರಿದರು.