Asianet Suvarna News Asianet Suvarna News

ಅಪರೂಪದ ವ್ಯಕ್ತಿ ಅಂಬರೀಷ್ ಬಗ್ಗೆ ಸಿಎಂ ಹೇಳಿದ ಸ್ನೇಹದ ಕಥೆ

ಪ್ರಧಾನಿಯಿಂದ ಒಬ್ಬ ಜನಸಾಮಾನ್ಯನವರೆಗೆ ಎಲ್ಲರೊಂದಿಗೆ ಮುಕ್ತವಾಗಿ ಮತ್ತು ಏಕವಚನದಲ್ಲಿ ಪ್ರೀತಿಯ ಸಲುಗೆಯಿಂದ ಮಾತನಾಡುತ್ತಿದ್ದ ಅಪರೂಪದ ವ್ಯಕ್ತಿ ಅಂಬರೀಷ್ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನಬಿಚ್ಚಿ ಮಾತನಾಡಿದ್ದಾರೆ. 

CM HD Kumaraswamy About Ambareesh
Author
Bengaluru, First Published Nov 26, 2018, 7:15 AM IST

ಬೆಂಗಳೂರು : ಸ್ನೇಹಕ್ಕೆ ಮತ್ತೊಂದು ಹೆಸರೇ ಅಂಬರೀಷ್‌. ಖಾಸಗಿ ಜೀವನ ಬೇರೆ, ಸಿನಿಮಾ ಜೀವನ ಬೇರೆ, ರಾಜಕೀಯ ಜೀವನ ಬೇರೆ ಎಂದು ಪ್ರತ್ಯೇಕಿಸಿ ನೋಡುತ್ತಿರಲಿಲ್ಲ. ಪ್ರಧಾನಿಯಿಂದ ಒಬ್ಬ ಜನಸಾಮಾನ್ಯನವರೆಗೆ ಎಲ್ಲರೊಂದಿಗೆ ಮುಕ್ತವಾಗಿ ಮತ್ತು ಏಕವಚನದಲ್ಲಿ ಪ್ರೀತಿಯ ಸಲುಗೆಯಿಂದ ಮಾತನಾಡುತ್ತಿದ್ದ ಅಪರೂಪದ ವ್ಯಕ್ತಿ ಅಂಬರೀಷ್‌.

ನಮ್ಮ ಕುಟುಂಬದ ಆಪ್ತಮಿತ್ರರಲ್ಲಿ ಅವರು ಹಿರಿಯರು. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದಲೂ ನಾನು ಅವರೊಂದಿಗೆ ಒಡನಾಟ ಹೊಂದಿದ್ದೇನೆ. ಮುಖ್ಯಮಂತ್ರಿಯಾಗಿದ್ದ ನಮ್ಮ ತಂದೆ ದೇವೇಗೌಡರು ಪ್ರಧಾನಿಯಾಗಿದ್ದರಿಂದ ಅವರು ಪ್ರತಿನಿಧಿಸುತ್ತಿದ್ದ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಯಿತು. ನಾನು ಮೊದಲಿನಿಂದಲೂ ರಾಮನಗರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದೆ. ಆ ಕ್ಷೇತ್ರದಿಂದ ಅಂಬರೀಷ್‌ ಅವರನ್ನು ನಮ್ಮ ಪಕ್ಷದಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು. ನಾನು ರಾಮನಗರ ಕ್ಷೇತ್ರದಾದ್ಯಂತ ಸಂಚರಿಸಿ ಅವರ ಗೆಲುವಿಗೆ ಶ್ರಮಿಸಿದೆ.

ವೈಯಕ್ತಿಕವಾಗಿ ನಾನು ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದೆ. ಜೆ.ಪಿ.ನಗರದ ಅವರ ಮನೆಗೆ ಹೋಗುತ್ತಿದ್ದೆ. ಮಂಡ್ಯ ನಮ್ಮ ಪಕ್ಷಕ್ಕೆ ಮೊದಲಿನಿಂದಲೂ ರಾಜಕೀಯವಾಗಿ ಮುಖ್ಯವಾದ ಜಿಲ್ಲೆ. ನಮ್ಮ ಪಕ್ಷದ ಶಾಸಕರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಅಂಬರೀಷ್‌ ಅವರು ಎರಡು ಬಾರಿ ಸತತವಾಗಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. ಅದಕ್ಕೂ ಮೊದಲು ಒಂದು ಬಾರಿ ನಮ್ಮ ಪಕ್ಷದಿಂದ ಲೋಕಸಭಾ ಸದಸ್ಯರಾಗಿದ್ದರು.

ಒಬ್ಬ ಪ್ರಧಾನಿ ಇರಲಿ ಅಥವಾ ಸಾಮಾನ್ಯ ಮನುಷ್ಯನಾಗಿರಲಿ. ಎಲ್ಲರನ್ನೂ ಒಂದೇ ಪ್ರೀತಿಯಿಂದ ನೋಡುವಂಥ ಹಾಗೂ ಮಾತನಾಡುವಂಥ ಸ್ವಭಾವ ಅವರದಾಗಿತ್ತು. ಅವರು ರಾಜಕಾರಣಿಯಾಗಿ, ಮಂತ್ರಿಯಾಗಿ ಬಹಳಷ್ಟುಸಾಧನೆ ಮಾಡಿದ್ದಕ್ಕಿಂತ ಹೆಚ್ಚಾಗಿ ಅವರು ಎಲ್ಲವನ್ನೂ ಗೆಲ್ಲುತ್ತಿದ್ದುದು ಪ್ರೀತಿ ಮತ್ತು ಸ್ನೇಹದಿಂದ. ಅದು ಅವರ ದೊಡ್ಡತನ.

ನಾನು ಚಿತ್ರನಿರ್ಮಾಪಕನಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದೆ. ಚಿತ್ರರಂಗದಲ್ಲಿ ಯಾವುದೇ ಬಿಕ್ಕಟ್ಟಿನ ಸಂದರ್ಭ ಎದುರಾದರೂ ಅಂಬರೀಷಣ್ಣನಿಗೆ ಹೇಳಿದರೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ಇತ್ತು. ನಟ, ನಿರ್ದೇಶಕ, ನಿರ್ಮಾಪಕ ಅಥವಾ ತಂತ್ರಜ್ಞನಿರಲಿ. ಯಾರ ನಡುವೆಯೂ ಬಿಕ್ಕಟ್ಟು ಉಂಟಾದರೆ ಅಂಬರೀಷ್‌ ಅವರ ಬಳಿ ತೆಗೆದುಕೊಂಡು ಹೋದರೆ ಪರಿಹಾರ ಸಿಗುತ್ತಿತ್ತು. ಅವರು ನ್ಯಾಯ ಪಂಚಾಯ್ತಿ ಎಂದು ನೋಡುತ್ತಿರಲಿಲ್ಲ. ತಮಗೆ ಸರಿ ಎನಿಸಿದ್ದನ್ನು ಮತ್ತು ಎಲ್ಲರಿಗೂ ಸೂಕ್ತ ಎನಿಸುವಂಥದ್ದನ್ನು ಹೇಳುತ್ತಿದ್ದರು. ಅವರು ಹೇಳಿದ ಮೇಲೆ ಎಲ್ಲರೂ ಅದಕ್ಕೆ ಬದ್ಧರಾಗುತ್ತಿದ್ದರು.

ಇಡೀ ಚಿತ್ರರಂಗದಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಪ್ರೀತಿಯಿಂದ ರೇಗಿಸುವ ಅಥವಾ ಕಿಚಾಯಿಸುವಷ್ಟುಸಲುಗೆ ಹಾಗೂ ಧೈರ್ಯ ಯಾರಿಗಾದರೂ ಇದ್ದರೆ ಅದು ಅಂಬರೀಷ್‌ ಅವರಿಗೆ ಮಾತ್ರ. ಇದನ್ನು ನಾನು ಅನೇಕ ಬಾರಿ ಕಣ್ಣಾರೆ ನೋಡಿದ್ದೇನೆ.

ನಮ್ಮ ತಂದೆ ದೇವೇಗೌಡರಿಗೂ ಮತ್ತು ಅಂಬರೀಷ್‌ ಅವರಿಗೂ ಬಹಳ ನಿಕಟ ಸಂಬಂಧವಿತ್ತು. ದೇವೇಗೌಡರಿಗೆ ಅಂಬರೀಷ್‌ ಹೆಚ್ಚು ಗೌರವ ಕೊಡುತ್ತಿದ್ದರು. ಅಂತಃಕರಣದ ರೂಪವೇ ಅಂಬರೀಷ್‌ ಆಗಿದ್ದರು. ತಡವಾಗಿ ಮಲಗಿ ತಡವಾಗಿ ಏಳುವುದು ಅಂಬರೀಷ್‌ ಅವರ ಸ್ವಭಾವವಾಗಿತ್ತು. ಆದರೆ, ಕಷ್ಟಹೊತ್ತು ತಮ್ಮ ಮನೆಗೆ ಬಂದವರನ್ನು ಹಾಗೆಯೇ ಕಳುಹಿಸುತ್ತಿರಲಿಲ್ಲ. ತಮ್ಮ ಕೈಲಾದ ಸಹಾಯ ಮಾಡಿ ಬಂದವರು ನಗುಮೊಗದಿಂದ ತೆರಳುವಂತೆ ಮಾಡುತ್ತಿದ್ದರು. ಭೇಟಿ ಮಾಡಲು ಬಂದವರಿಗೆ ಮೊದಲ ಪ್ರಾಶಸ್ತ್ಯ ಕೊಡುತ್ತಿದ್ದರು. ಮಾನವೀಯ ಗುಣಗಳು ಹೆಚ್ಚು ಕಂಡಿದ್ದು ಅಂಬರೀಷ್‌ ಅವರಲ್ಲಿ.

ಯಾವುದೇ ಸನ್ನಿವೇಶ ಇರಲಿ. ಅಂಬರೀಷ್‌ ಅವರು ಅಲ್ಲಿ ಬಂದರೆ ಎಲ್ಲರೂ ಅವರತ್ತ ಆಕರ್ಷಿತರಾಗುತ್ತಿದ್ದರು. ಅಂಥ ವಿಶೇಷ ಗುಣ ಅವರಲ್ಲಿತ್ತು. ಒಬ್ಬ ನಟ, ರಾಜಕಾರಣಿಯಾಗಿ ಎನ್ನುದಕ್ಕಿಂತ ಅಂಬರೀಷ್‌ ಅವರ ನಡತೆ ನನಗೆ ಬಹಳ ಇಷ್ಟವಾಗಿತ್ತು. ಶನಿವಾರ ರಾತ್ರಿ ನಾನು ಆಸ್ಪತ್ರೆಗೆ ಬರುವವಷ್ಟರಲ್ಲಿ ಅಂಬರೀಷ್‌ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ನನಗೆ ಕನ್ನಡ ಚಿತ್ರರಂಗವನ್ನು ಅತ್ಯಂತ ಮೇರು ಮಟ್ಟಕ್ಕೆ ಕೊಂಡೊಯ್ದವರು ಡಾ.ರಾಜ್‌ಕುಮಾರ್‌, ವಿಷ್ಣುವರ್ಧನ್‌ ಹಾಗೂ ಅಂಬರೀಷ್‌. ಈ ಮೂವರಿಗೂ ಸೂಕ್ತ ಗೌರವ ಸಿಗಬೇಕು ಎಂಬುದು ನನ್ನ ಅಭಿಪ್ರಾಯ. ಆ ನಿಟ್ಟಿನಲ್ಲಿ ನಾನು ಯೋಚನೆ ಮಾಡುತ್ತಿದ್ದೇನೆ. ಹಿಂದೆ ಡಾ.ರಾಜ್‌ ನಿಧನ ಹೊಂದಿದಾಗ ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದೆ. 

ಇದೀಗ ಅಂಬರೀಷ್‌ ಅವರು ನಿಧನ ಹೊಂದಿದಾಗ ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದೇನೆ. ಅವರಿಬ್ಬರಿಗೂ ಸರ್ಕಾರದಿಂದ ಸೂಕ್ತ ಗೌರವ ನೀಡುವ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ. ಅಂಬರೀಷ್‌ ಅವರ ಅಗಲಿಕೆ ಕನ್ನಡ ಚಿತ್ರರಂಗ ಹಾಗೂ ಕರ್ನಾಟಕ ರಾಜಕಾರಣಕ್ಕಷ್ಟೇ ಅಲ್ಲ, ವೈಯಕ್ತಿಕವಾಗಿ ನನಗೆ ತುಂಬಾ ನಷ್ಟವಾಗಿದೆ. ನೋವುಂಟಾಗಿದೆ.

Follow Us:
Download App:
  • android
  • ios