ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ೬೫ ಕೋಟಿ ರು. ಅವ್ಯವಹಾರ ಆಗಿದೆ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಮಾಡೋಕೆಂದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎನ್‌ಆರ್ ರಮೇಶ್‌ನಂತಹವರನ್ನು ಇಟ್ಟುಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನವರು ಅವಧಿಗೂ ಮೊದಲೇ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುತ್ತದೆ ಎಂದು ಗೊಂದಲ ಉಂಟುಮಾಡುತ್ತಿದ್ದಾರೆ.
ಬೆಂಗಳೂರು(ಜು.21): ರಾಜ್ಯ ಸರ್ಕಾರದ ಮೇಲೆ ಯಾವುದೇ ಆರೋಪಗಳಿಲ್ಲ ಹಾಗೂ ಭ್ರಷ್ಟಾಚಾರದ ದೂರುಗಳಿಲ್ಲ. ಹಾಗಾಗಿ ಬಿಜೆಪಿಯವರು ಕಾಂಗ್ರೆಸ್ನವರ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯನ್ನು ಬಳಸಿಕೊಂಡು ಗೂಬೆ ಕೂರಿಸುವ ಸಾಧ್ಯತೆಯಿದೆ. ಆದ್ದರಿಂದ ಮುಂದಿನ ಚುನಾವಣೆಗೆ ಬಾಕಿ ಇರುವ ಏಳೆಂಟು ತಿಂಗಳು ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕರು ಹಾಗೂ ಕೆಪಿಸಿಸಿ ನೂತನ ಪದಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಕೆಪಿಸಿಸಿ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರದ ಮೇಲೆ ಯಾವುದೇ ರೀತಿಯ ಆರೋಪಗಳಿಲ್ಲ. ಕಾಂಗ್ರೆಸ್ನ ಪ್ರತಿಯೊಬ್ಬರೂ ಎದೆಯುಬ್ಬಿಸಿ ಕೆಲಸ ಮಾಡುವಂತಹ ಆಡಳಿತ ನೀಡಿದ್ದೇವೆ. ಕೇಂದ್ರ ಸರ್ಕಾರವನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ಇ.ಡಿ., ಆದಾಯ ತೆರಿಗೆ ದಾಳಿ ನಡೆಸಲಾಗುತ್ತಿದೆ. ಜತೆಗೆ ಜಾತಿ, ಧರ್ಮ, ನಾಡಧ್ವಜ ವಿಚಾರಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಾವು ಬಿಜೆಪಿ ಅಧಿಕಾರಾವಧಿಯ ಭ್ರಷ್ಟಾಚಾರಗಳು, ಈಗಿನ ಎನ್ಡಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿಹೇಳುವ ಮೂಲಕ ತಕ್ಕ ಉತ್ತರ ನೀಡಬೇಕಾಗಿದೆ. ಮುಂದಿನ ಏಳೆಂಟು ತಿಂಗಳು ಜಾಗ್ರತೆಯಿಂದ ಕೆಲಸ ಮಾಡಿ. ಯಾವುದೇ ವಿವಾದಗಳು ಉಂಟಾಗದಂತೆ ಎಚ್ಚರವಾಗಿರಿ ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸುಳ್ಳುಆರೋಪ:
ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ೬೫ ಕೋಟಿ ರು. ಅವ್ಯವಹಾರ ಆಗಿದೆ ಎಂದು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಮಾಡೋಕೆಂದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎನ್ಆರ್ ರಮೇಶ್ನಂತಹವರನ್ನು ಇಟ್ಟುಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ನವರು ಅವಧಿಗೂ ಮೊದಲೇ ಡಿಸೆಂಬರ್ನಲ್ಲಿ ಚುನಾವಣೆ ನಡೆಯುತ್ತದೆ ಎಂದು ಗೊಂದಲ ಉಂಟುಮಾಡುತ್ತಿದ್ದಾರೆ.
ಅವಧಿಮುನ್ನಚುನಾವಣೆಯಿಲ್ಲ:
ಅವಧಿಗೂ ಮೊದಲೇ ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಉಪ ಚುನಾವಣೆ, ರೈತರ ಸಾಲ ಮನ್ನಾ ಮಾಡಿದ ಮೇಲೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಾಗಿದೆ. ಹಾಗಾಗಿ ಮಾರ್ಚ್, ಏಪ್ರಿಲ್ನಲ್ಲೇ ಚುನಾವಣೆಗೆ ಹೋಗೋಣ. ಈ ಬಗ್ಗೆ ಹೈಕಮಾಂಡ್ ನಾಯಕರೊಂದಿಗೂ ಚರ್ಚಿಸಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ನವರು ಚುನಾವಣೆ ಬೇಗ ಬರಲಿದೆ ಎಂದು ಸುಳ್ಳು ವದಂತಿ ಸೃಷ್ಟಿಸುತ್ತಿದ್ದಾರೆ. ಇದನ್ನು ನಂಬಬೇಡಿ ಎಂದು ಹೇಳಿದರು.
(ಕನ್ನಡಪ್ರಭ ವಾರ್ತೆ)
