ಸಚಿವ ಜಮೀರ್ ಅಹಮದ್ ಖಾನ್ ಇದೀಗ ತಮ್ಮ ನಿರ್ಧಾರವನ್ನು ಸಡಿಲಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ಧಾರವೇ ಅನ್ನಭಾಗ್ಯ ಅಕ್ಕಿಯ ವಿಚಾರದಲ್ಲಿ ಅಂತಿಮ ಎಂದು ಹೇಳಿದ್ದಾರೆ.

ಬೆಂಗಳೂರು: ಪಡಿತರ ಅಕ್ಕಿ ವಿತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಆಹಾರ ಸಚಿವ ಜಮೀರ್ ಅಹ್ಮದ್ ನಡುವಿನ ತಿಕ್ಕಾಟ ಕಡಿಮೆಯಾಗಿರುವ ಮುನ್ಸೂಚನೆ ಕಂಡು ಬಂದಿದ್ದು, ಮುಖ್ಯಮಂತ್ರಿ ಕೈಗೊಳ್ಳುವ ನಿರ್ಧಾರದ ಮೇಲೆ ಅನ್ನಭಾಗ್ಯ ಯೋಜನೆ ಮುಂದುವರಿಯಲಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳ ಜತೆಗಿನ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಸ್ತುತ ಅನ್ನಭಾಗ್ಯ ಯೋಜನೆಯಡಿ ಏಳು ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಅಕ್ಕಿ ಕಡಿತಕ್ಕೆ ಅಧಿಕೃತವಾಗಿ ಸೂಚನೆ ಬಂದಿಲ್ಲ. 

ಆದರೆ, ಮುಖ್ಯಮಂತ್ರಿ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅಂತೆಯೇ ನಡೆದುಕೊಳ್ಳಲಾಗುವುದು. 7 ಕೆ.ಜಿ. ಕೊಡಿ ಅಂತಾರೋ ಅಥವಾ 5 ಕೇಜಿ ಕೊಡಿ ಎನ್ನುತ್ತಾರೋ ಅದು ಮುಖ್ಯಮಂತ್ರಿಗಳ ಅವಗಾಹನಗೆ ಬಿಟ್ಟ ವಿಚಾರ ಎಂದು ತಿಳಿಸಿದರು. ಅನ್ನಭಾಗ್ಯ ಯೋಜನೆಯಡಿ ಎಷ್ಟು ಕೇಜಿ ಅಕ್ಕಿ ಕೊಡಬೇಕೋ ಅಷ್ಟು ನೀಡಲಾಗುತ್ತಿದೆ. 

ಆದರೆ, ಮಾಧ್ಯಮಗಳು ಮುಖ್ಯಮಂತ್ರಿ 5 ಕೇಜಿ ಎಂದು ಹೇಳಿದರೆ, ಜಮೀರ್ 7 ಕೇಜಿ ಕೊಡುವ ಮೂಲಕ ಸೂಪರ್ ಸಿಎಂ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಬಿಂಬಿಸುತ್ತಿವೆ. ಆದರೆ, ಮುಖ್ಯಮಂತ್ರಿಗಳ ಅದೇಶವನ್ನು ಓವರ್‌ಟೇಕ್ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಏನು ಹೇಳುತ್ತಾರೆ ಅದನ್ನು ಪಾಲಿಸಲಾಗುವುದು ಎಂದರು.