ಜೆ.ಎಚ್.ಪಟೇಲ್ ಅವರು ಸಹ ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕಿ ಮಲೆಮಹದೇಶ್ವರಬೆಟ್ಟದಲ್ಲಿ ಜಿಲ್ಲಾ ಕೇಂದ್ರ ಘೋಷಣೆ ಮಾಡಿದರು. ಆದರೆ ನಾನು ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಹಲವಾರು ಬಾರಿ ಭೇಟಿ ನೀಡಿದ್ದಲ್ಲದೇ, ಜಿಲ್ಲಾ ಕೇಂದ್ರಕ್ಕೆ 7ನೇ ಬಾರಿಗೆ  ಭೇಟಿ ನೀಡುತ್ತಿದ್ದೇನೆ.

ಚಾಮರಾಜನಗರ(ಆ.10): ಪ್ರತ್ಯೇಕ ಲಿಂಗಾಯಿತ ಧರ್ಮದ ಬಗ್ಗೆ ನನ್ನ ನಿಲುವು ಏನು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಾಜಿ ರಾಜ್ಯಪಾಲ ದಿವಂಗತ ಬಿ.ರಾಚಯ್ಯನವರ ಸ್ಮಾರಕ ನಿರ್ಮಾಣದ ಶಂಕುಸ್ಥಾಪನೆ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡುವ ಸಲುವಾಗಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೀರಶೈವ ಮಹಾಸಭಾದವರು ನನಗೆ ಪ್ರತ್ಯೇಕ ಲಿಂಗಾಯಿತ ಧರ್ಮದ ಬಗ್ಗೆ ಮನವಿ ಸಲ್ಲಿಸಿದ್ದರು. ನಾನಾಗಿಯೇ ಇದನ್ನು ಹುಟ್ಟು ಹಾಕಿದ್ದಲ್ಲ, ಆದರೆ ಕೆಲವರು ನಾನೇ ಇದನ್ನು ಸೃಷ್ಟಿ ಮಾಡಿದೆ ಎಂದು ಗೂಬೆ ಕೂರಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಗಡಿ ಜಿಲ್ಲೆ ಚಾಮರಾಜನಗರಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಸಿಎಂ ಮೊದಲಿಗೆ ಚಾಮರಾಜನಗರ ತಾಲೊಕಿನ ಆಲೂರಿನಲ್ಲಿ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೇ ಜಿಲ್ಲಾ ಕೇಂದ್ರದಲ್ಲಿನ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಹ ಚಾಲನೆ ನೀಡಿದರು. ಸುಮಾರು ಮೂರೂವರೆ ಕಿ.ಮೀ. ಉದ್ದ ಈ ರಸ್ತೆ 36 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಮೂಢನಂಬಿಕೆಗೆ ನಾನು ಬಗ್ಗೋದಿಲ್ಲ

ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಯನ್ನು ಕೆಲವರು ಹುಟ್ಟು ಹಾಕಿದ್ದರು. ಹೀಗಾಗಿಯೇ ಸಮಾಜವಾದಿ ಹಿನ್ನೆಲೆಯಿಂದ ಬಂದು ಮುಖ್ಯಮಂತ್ರಿಯಾಗಿದ್ದ ದಿವಗಂತ ಜೆ.ಎಚ್.ಪಟೇಲ್ ಅವರು ಸಹ ಚಾಮರಾಜನಗರಕ್ಕೆ ಭೇಟಿ ನೀಡಲು ಹಿಂದೇಟು ಹಾಕಿ ಮಲೆಮಹದೇಶ್ವರಬೆಟ್ಟದಲ್ಲಿ ಜಿಲ್ಲಾ ಕೇಂದ್ರ ಘೋಷಣೆ ಮಾಡಿದರು. ಆದರೆ ನಾನು ಮುಖ್ಯಮಂತ್ರಿಯಾದ ಬಳಿಕ ಜಿಲ್ಲೆಗೆ ಹಲವಾರು ಬಾರಿ ಭೇಟಿ ನೀಡಿದ್ದಲ್ಲದೇ, ಜಿಲ್ಲಾ ಕೇಂದ್ರಕ್ಕೆ 7ನೇ ಬಾರಿಗೆ ಭೇಟಿ ನೀಡುತ್ತಿದ್ದೇನೆ. ಮೂಢನಂಬಿಕೆ ತೊಡೆದು ಹಾಕಬೇಕು ಎಂಬ ಉದ್ದೇಶದಿಂದ ಪದೇ ಪದೇ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಜೊತೆಗೆ ಇಲ್ಲಿಗೆ ಭೇಟಿ ನೀಡಿದ ನಂತರ ನನ್ನ ಕುರ್ಚಿಯು ಗಟ್ಟಿಯಾಗುತ್ತದೆ ಎಂದರು. ಅಲ್ಲದೇ ಜೆಡಿಎಸ್ ಹಾಗೂ ಬಿಜೆಪಿಯವರು ಏನೇ ತಿಪ್ಪರಲಾಗ ಹಾಕಿದರೂ ಅವರು ಅಧಿಕಾರಕ್ಕೆ ಬರುವುದಿಲ್ಲ, ಮುಂದಿನ 2018 ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂತಹ ಜನಪರವಾದ ಕೆಲಸವನ್ನು ನಮ್ಮ ಸರಕಾರ ಮಾಡಿದೆ ಎಂದರು.

ನನ್ನ ಕಾರಿನ ಮೇಲೆ ಕಾಗೆ ಕುಳಿತಾಗ,ನನ್ನ ಬಟ್ಟೆಯ ಮೇಲೆ ಕಾಗೆ ಇಕ್ಕೆ ಹಾಕಿದಾಗ ಓಹೋ ಸಿದ್ದರಾಮಯ್ಯನಿಗೆ ಶನಿ ಹೆಗಲೇರಿದ್ದಾನೆ ಎಂದರು. ಆದರೆ ಕಾಗೆ ಗೂಬೆ ಗರುಡ ಎಲ್ಲಾ ಒಂದೇ ಪಕ್ಷಿಗಳು ಅವೆಲ್ಲಾ ಬಂದು ಕುಳಿತ ತಕ್ಷಣ ಏನು ಆಗುವುದಿಲ್ಲ. ವಿಕೃತವಾದ ಮನಸ್ಸಿದ್ದರೆ ಯಾವ ದೇವರು ಕಾಪಾಡುವುದಿಲ್ಲ.ಬದಲಿಗೆ ಒಳ್ಳೆಯ ಮನಸ್ಸಿದ್ದರೆ ಎಲ್ಲಾ ದೇವರು ಕಾಪಾಡುತ್ತವೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಒಟ್ಟಾರೆ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಡನಂಬಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೊಡೆದು ಹಾಕಿದ್ದಾರೆ. ಇಲ್ಲಿಗೆ ಭೇಟಿ ನೀಡಿದರೆ ಅಧಿಕಾರ ಕಳೆದು ಹೋಗುವುದಿಲ್ಲ ಬದಲಿಗೆ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಮುಂದೆ ಬರುವ ಮುಖ್ಯಮಂತ್ರಿಗಳು ಸಹ ಇಲ್ಲಿಗೆ ಭೇಟಿ ನೀಡುವ ಮೂಲಕ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಅಂಟಿದ್ದ ಕಳಂಕವನ್ನು ತೊಡೆದು ಹಾಕಲು ಮುಂದಾಗಲಿ.

-ಶಶಿಧರ ಕೆ.ವಿ., ಚಾಮರಾಜನಗರ, ಸುವರ್ಣ ನ್ಯೂಸ್