ಬೆಂಗಳೂರು, [ಸೆ.16]: ಕರ್ನಾಟಕ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕವಾಗಿದ್ದು, ಅದರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಬೆಂಗಳೂರು ನಗರ ಉಸ್ತುವಾರಿ ಯಾರಿಗೆ ಎನ್ನುವುದಕ್ಕೆ ತೆರೆಬಿದ್ದಿದೆ. 

ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಬೆಂಗಳೂರು ನಗರ ಜವಾಬ್ದಾರಿ ತೆಗೆದುಕೊಂಡಿದ್ದಾರೆ.  ಕಂದಾಯ ಸಚಿವ ಆರ್.ಅಶೋಕ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಪೈಕಿ ಯಾರಿಗೆ ಉಸ್ತುವಾರಿ ಖಾತೆ ಸಿಗುತ್ತದೆ ಎನ್ನುವ ಕುತೂಹಲವಿತ್ತು. ಸರ್ಕಾರ ರಚನೆಯಾದ ಬಳಿಕ ಇಬ್ಬರಿಗೆ ಮನಸ್ತಾಪ ಉಂಟಾಗಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಬೆಂಗಳೂರು ಉಸ್ತುವಾರಿ ಯಾರಿಗೆ ಸಿಗಲಿದೆ ಎನ್ನುವ ಪ್ರಶ್ನೆ ಎದ್ದಿತ್ತು.

ಅಶೋಕ್ ಅವರನ್ನು ಬೆಂಗಳೂರು ಗ್ರಾ. ಮತ್ತು ಮಂಡ್ಯ ಉಸ್ತುವಾರಿಯನ್ನಾಗಿ ಮಾಡಿದ್ರೆ, ಅಶ್ವಥ್ ನಾರಾಯಣ ಅವರಿಗೆ ರಾಮನಗರ ಮತ್ತು ಚಿಕ್ಕಬಳ್ಳಾಪುರದ ಉಸ್ತುವಾರಿಯನ್ನು ನೀಡಲಾಗಿದೆ. 

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?

ಬೆಂಗಳೂರು ನಗರದಲ್ಲಿ ತಮ್ಮದೇ ಆದ ಅಧಿಪತ್ಯ ಸಾಧಿಸಲು ಕಂದಾಯ ಸಚಿವ ಆರ್. ಅಶೋಕ್ ಹಾಗೂ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ನಡುವೆ ರಾಜಕೀಯ ಪ್ರತಿಷ್ಠೆಯ ಪೈಪೋಟಿ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಬೆಂಗಳೂರು ನಗರದ ಬಾಸ್ ಆಗಬೇಕಾಗಿಬಂತು.

ಬೆಂಗಳೂರು ನಗರ ಯಡಿಯೂರಪ್ಪ ಕೈನಲ್ಲೇ
ಉಪಮುಖ್ಯಮಂತ್ರಿ ಹುದ್ದೆ ಕೈ ತಪ್ಪಿದ ಬೆನ್ನಲ್ಲೇ ಸಿಲಿಕಾನ್​ ಸಿಟಿ ಉಸ್ತುವಾರಿಗೆ ಹವಣಿಸುತ್ತಿದ್ದ ಆರ್​ ಅಶೋಕ್​ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ನಡುವೆ ಮುಸುಕಿನ ಗುದ್ದಾಟಕ್ಕೆ  ಖುದ್ದು ಸಿಎಂ ಬಿಎಸ್​ ಯಡಿಯೂರಪ್ಪ ತೆರೆ ಎಳೆದಿದ್ದಾರೆ.

 ಅಶೋಕ್ ಹಾಗೂ ಅಶ್ವಥ್ ನಾರಾಯಣ ನಡುವೆ ಪೈಪೋಟಿ ನಡೆದಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನವನ್ನು ಯಾರಿಗೂ ನೀಡದೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ಇದೀಗ ಬೆಂಗಳೂರು ನಗರ ಉಸ್ತುವಾರಿ ಹೊಣೆಯನ್ನು ಸಹ ತಾವೇ ಹೊತ್ತುಕೊಂಡಿದ್ದಾರೆ.

ಪದ್ಮನಾಭನಗರದಿಂದ ಅಶೋಕ್ ಮತ್ತು ಮಲ್ಲೇಶ್ವರಂ ಕ್ಷೇತ್ರದಿಂದ ಶಾಸಕರಾಗಿರುವ ಅಶ್ವಥ್ ನಾರಾಯಣ್  ಇವರಿಬ್ಬರು ಒಕ್ಕಲಿಗ ಸಮುದಾಯದವರಾಗಿದ್ದು, ಬೆಂಗಳೂರು ನಗರವನ್ನು ತಮ್ಮ ಹಿಡಿತದಲ್ಲಿ ಹಿಡಿದಿಟ್ಟುಕೊಳ್ಳಲು ಇವರಿಬ್ಬರ ನಡುವೆ ಹಣಾಹಣಿ ನಡೆದಿದೆ. 

ಈ ಹಿಂದೆ ಡಿಸಿಎಂ ಆಗಿದ್ದ ಅಶೋಕ್ ಅವರಿಗೆ ಈಗ ಕಂದಾಯ ಮಂತ್ರಿ ಮಾಡಲಾಗಿದ್ದು, ಮಂತ್ರಿ ಆಗದೇ ಇದ್ದ ಅಶ್ವಥ್ ನಾರಾಯಣಗೆ ನೇರವಾಗಿ ಉಪಮುಖ್ಯಮಂತ್ರಿ ಪಟ್ಟಕ್ಕೇರಿಸಿರುವುದಕ್ಕೆ ಅಸಮಾಧಾನಗೊಂಡಿರುವ ಅಶೋಕ್, ಕೊನೆಗೆ ಬೆಂಗಳೂರು ಉಸ್ತುವಾರಿಯನ್ನಾದರೂ ಕೊಡಿ ಎಂದು ಯಡಿಯೂರಪ್ಪಗೆ ದುಂಬಾಲು ಬಿದ್ದಿದ್ದರು. 

ಆದ್ರೆ, ಒಬ್ಬರಿಗೆ ಕೊಟ್ಟರೇ ಮತ್ತೊಬ್ಬರು ಅಸಮಾಧಾನಗೊಳ್ಳುವುದು ಗ್ಯಾರಂಟಿ ಎಂದು ಅರಿತುಕೊಂಡ ಬಿಎಸ್‌ವೈ, ಇಬ್ಬರಿಗೂ ನೀಡಿದೇ ಬೆಂಗಳೂರು ಇಂಚಾರ್ಜ್ ತಾವೇ ಹೊತ್ತುಕೊಳ್ಳುವುದರ ಮೂಲಕ ಬಂಡಾಯದ ಹಾದಿಯನ್ನು ಬಂದ್ ಮಾಡಿದ್ದಾರೆ.  

ಉಪ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದ ಆರ್​ ಅಶೋಕ್​ ಕನಸಿಗೆ ಹೈ ಕಮಾಂಡ್​ ತಣ್ಣೀರೆರಚಿತ್ತು. ಇದರಿಂದ ಒಳಗೆ ಕುದಿಯುತ್ತಿದ್ದ ಅಶೋಕ್​ ಡಿಸಿಎಂ ಸ್ಥಾನ ಹೋದರೂ ಪರವಾಗಿಲ್ಲ. ಬೆಂಗಳೂರು ನಗರ ಉಸ್ತುವಾರಿ ತಮ್ಮ ಕೈಗೆ ಸಿಕ್ಕರೆ ವರ್ಚಸ್ಸು ಹೆಚ್ಚುತ್ತದೆ. ಈ ಮೂಲಕ ಡಿಸಿಎಂ ಅಶ್ವಥ್ ನಾರಾಯಣ ಅವರ ಓಟಕ್ಕೆ ಬ್ರೇಕ್ ಹಾಕಬಹುದು ಎನ್ನುವ ಲೆಕ್ಕಾಚಾರ ಅಶೋಕ್ ಅವರದದ್ದಾಗಿತ್ತು. ಇದೀಗ ಬೆಂಗಳೂರು ನಗರಾಭಿವೃದ್ಧಿ ಇಲ್ಲ, ಉಸ್ತುವಾರಿಯೂ ಸಿಗದೇ ಅಶೋಕ್‌ಗೆ ಭಾರೀ ನಿರಾಸೆಯಾಗಿರುವುದಂತೂ ಸತ್ಯ.