ಬಿಬಿಎಂಪಿ ವತಿಯಿಂದ ಮಾಗಡಿ ಮುಖ್ಯರಸ್ತೆ - ಸಿದ್ದಯ್ಯ ಪುರಾಣಿಕ್ ರಸ್ತೆ ಕೂಡುವ ಸ್ಥಳದಲ್ಲಿ ನಿರ್ಮಿಸಿರುವ ಕೆಳಸೇತುವೆಯನ್ನು ಶನಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಇಂದಿರಾ ಕ್ಯಾಂಟೀನ್ ಬಗ್ಗೆ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು. ಆದರೆ, ನ್ಯಾಯಾಲಯಕ್ಕೆ ಹೋಗಿ ಬರಲು ಸಮಯವಿಲ್ಲ. ಹೀಗಾಗಿ ನೀವ್ಯಾರಾದರೂ ದೂರು ದಾಖಲಿಸಿ ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಬೆಂಗಳೂರು(ಜು.22): ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ಅವ್ಯವಹಾರ ಆಗಿದೆ ಎಂದು ಅವನ್ಯಾರೋ ಆರೋಪ ಮಾಡಿದ್ದಾನೆ ಎಂದು ಬಿಜೆಪಿಯ ಎನ್.ಆರ್.ರಮೇಶ್ ವಿರುದ್ಧ ಪರೋಕ್ಷವಾಗಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಗೆ ಮೀಸಲಿಟ್ಟಿರುವ ಹಣ 100 ಕೋಟಿ. ಆದರೆ 65 ಕೋಟಿ ಅವ್ಯವಹಾರ ಆಗಿದೆ ಎಂದು ಆರೋಪ ಮಾಡುತ್ತಾನೆ. ಇಷ್ಟು ಅವ್ಯವಹಾರ ಆಗಿದ್ದರೆ ಯೋಜನೆ ಜಾರಿಯಾಗುತ್ತಾ?, ಅವರಿಗೆ ಲೆಕ್ಕವೇ ಗೊತ್ತಿಲ್ಲ. ವಿರೋಧಪಕ್ಷದಲ್ಲಿರುವವರು ಆರೋಪ ಮಾಡಬೇಕು ಎಂಬುದು ನಿಜ. ಆದರೆ, ಸತ್ಯಕ್ಕೆ ಹತ್ತಿರುವಾಗಿರುವಂತೆ ಮಾಡಲಿ ಎಂದು ಟಾಂಗ್ ನೀಡಿದರು.
ಬಿಬಿಎಂಪಿ ವತಿಯಿಂದ ಮಾಗಡಿ ಮುಖ್ಯರಸ್ತೆ - ಸಿದ್ದಯ್ಯ ಪುರಾಣಿಕ್ ರಸ್ತೆ ಕೂಡುವ ಸ್ಥಳದಲ್ಲಿ ನಿರ್ಮಿಸಿರುವ ಕೆಳಸೇತುವೆಯನ್ನು ಶನಿವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಇಂದಿರಾ ಕ್ಯಾಂಟೀನ್ ಬಗ್ಗೆ ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದು. ಆದರೆ, ನ್ಯಾಯಾಲಯಕ್ಕೆ ಹೋಗಿ ಬರಲು ಸಮಯವಿಲ್ಲ. ಹೀಗಾಗಿ ನೀವ್ಯಾರಾದರೂ ದೂರು ದಾಖಲಿಸಿ ಎಂದು ಸಿದ್ದರಾಮಯ್ಯ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ನಗರದ ಅಭಿವೃದ್ಧಿಗೆ ಹಲವು ಕ್ರಮ:
ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಹಾಗೂ ನಾಗರಿಕರ ಸಹಕಾರದಿಂದ ಬೆಂಗಳೂರಿಗೆ ‘ಡೈನಾಮಿಕ್ ನಗರ’ ಖ್ಯಾತಿ ದೊರೆತಿದೆ. ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆ ಬೆಂಗಳೂರು ಪಾತ್ರವಾಗಿದೆ. ಆ ನಿಟ್ಟಿನಲ್ಲಿ ನಗರದಲ್ಲಿ ತ್ಯಾಜ್ಯ ವಿಲೇವಾರಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಮಾಗಡಿ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುವ ಜತೆಗೆ, ಕೆಲವೊಂದು ಅಪಘಾತಗಳು ಸಂಭವಿಸಿವೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸುಮಾರು 25 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ನಿರ್ಮಿಸಲಾಗಿದೆ. ಅಂಡರ್‌ಪಾಸ್ ಕಾಮಗಾರಿ ವೇಳೆ ಬೃಹತ್ ಗಾತ್ರದ ಬಂಡೆ ಅಡ್ಡಬಂದ ಪರಿಣಾಮ ಕಾಮಗಾರಿ ತಡವಾಗಿದೆ ಎಂದು ವಿಳಂಬವನ್ನು ಸಮರ್ಥಿಸಿಕೊಂಡರು.
ಕೆಂಪೇಗೌಡ ಹೆಸರು:
ಮಾಗಡಿ ರಸ್ತೆ ಕೆಳಸೇತುವೆಗೆ ನಾಡಪ್ರಭು ಕೆಂಪೇಗೌಡ ಹೆಸರಿಡಬೇಕು ಎಂಬ ಮನವಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕೆಳಸೇತುವೆಗೆ ಕೆಂಪೇಗೌಡರ ಹೆಸರಿಡಲು ಸರ್ಕಾರದ ಅಭ್ಯಂತರವಿಲ್ಲ. ಆದರೆ, ಈ ಕುರಿತು ತೀರ್ಮಾನವನ್ನು ಬಿಬಿಎಂಪಿ ತೆಗೆದುಕೊಳ್ಳಬೇಕು. ಮೊದಲು ಕೌನ್ಸಿಲ್‌ನಲ್ಲಿ ಒಪ್ಪಿಗೆ ಪಡೆದು ನಂತರ ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಕೆ.ಜೆ. ಜಾರ್ಜ್, ವಸತಿ ಸಚಿವ ಎಂ. ಕೃಷ್ಣಪ್ಪ, ಶಾಸಕರಾದ ಪ್ರಿಯಕೃಷ್ಣ, ಎಸ್. ಸುರೇಶ್ ಕುಮಾರ್, ಮೇಯರ್ ಜಿ. ಪದ್ಮಾವತಿ, ಉಪಮೇಯರ್ ಎಂ. ಆನಂದ್, ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್, ಪಾಲಿಕೆ ಸದಸ್ಯ ಉಮೇಶ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
(ಕನ್ನಡಪ್ರಭ ವಾರ್ತೆ)
