ಚುನಾವಣೆ ಬಗ್ಗೆ ಗುಪ್ತದಳದ ವರದಿ ಕೇಳಿದ ಸಿಎಂ

CM Ask Report About Election
Highlights

ಬಿರು ಬೇಸಿಗೆಯಲ್ಲಿ ವಿಧಾನಸಭಾ ಚುನಾವಣಾ ಅಖಾಡವು ಕ್ರಮೇಣ ರಂಗೇರುತ್ತಿದ್ದು, ಈಗ ಸಮರ ಕಣದ ವಾಸ್ತವ ಪರಿಸ್ಥಿತಿ ಬಗ್ಗೆ ಸಮಗ್ರವಾದ ಅಂತಿಮ ವರದಿ ನೀಡುವಂತೆ ಗುಪ್ತಚರ ವಿಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಬಿರು ಬೇಸಿಗೆಯಲ್ಲಿ ವಿಧಾನಸಭಾ ಚುನಾವಣಾ ಅಖಾಡವು ಕ್ರಮೇಣ ರಂಗೇರುತ್ತಿದ್ದು, ಈಗ ಸಮರ ಕಣದ ವಾಸ್ತವ ಪರಿಸ್ಥಿತಿ ಬಗ್ಗೆ ಸಮಗ್ರವಾದ ಅಂತಿಮ ವರದಿ ನೀಡುವಂತೆ ಗುಪ್ತಚರ ವಿಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಎರಡು ತಿಂಗಳ ಹಿಂದೆ ಗುಪ್ತದಳವು ನೀಡಿದ್ದ ಬಜೆಟ್ ಪೂರ್ವೋತ್ತರ ಸಮೀಕ್ಷೆ ವರದಿಯು ಮುಖ್ಯಮಂತ್ರಿಗಳ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ತಾವು ಖಾಸಗಿ ಸಂಸ್ಥೆ ಮೂಲಕ ನಡೆಸಿದ ಸಮೀಕ್ಷೆಗೂ ಗುಪ್ತದಳ ವರದಿಗೂ ತಾಳೆ ಆಗಿದ್ದು ಅವರಿಗೆ ಸಮಾಧಾನ ತಂದಿತ್ತು. ಹೀಗಾಗಿ ಮತ್ತೆ ಸಮರ ಕಣದ ರಹಸ್ಯ ಭೇದಿಸಲು ಸರ್ಕಾರ ಮುಂದಾಗಿದೆ.

ಈ ಸೂಚನೆ ಹಿನ್ನೆಲೆಯಲ್ಲಿ ರಾಜಕೀಯ ಸಮೀಕ್ಷೆಗಿಳಿದಿರುವ ಗುಪ್ತಚರ ಅಧಿಕಾರಿಗಳ ತಂಡವು, ವಿಧಾನಸಭಾ ಕ್ಷೇತ್ರವಾರು ಅಭ್ಯರ್ಥಿಗಳ ಚುನಾವಣಾ ತಯಾರಿ, ಮತದಾರನ ಒಲವು, ಜಾತಿ ಲೆಕ್ಕಚಾರ, ಕನ್ನಡ ಅಸ್ಮಿತೆ, ಲಿಂಗಾಯತ ಧರ್ಮ ಮತ್ತು ನ್ಯಾ.ಸದಾಶಿವ ಆಯೋಗದ ವರದಿ ಹೀಗೆ ಪ್ರತಿಯೊಂದು ಅಂಶದ ಕುರಿತ ಜನಾಭಿಪ್ರಾಯ ಸಂಗ್ರಹಿಸಲು ಆರಂಭಿಸಿದೆ.

ರಾಜ್ಯಸಭಾ ಚುನಾವಣೆ ಬಳಿಕ ವಿಧಾನಸಭಾ ಚುನಾವಣೆ ತಯಾರಿಯನ್ನು ಕೇಂದ್ರ ಚುನಾವಣಾ ಆಯೋಗವು ಬಿರುಸುಗೊಳಿಸಲಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಚುನಾವಣೆಗೆ ಮೂಹರ್ತ ನಿಗದಿಪಡಿಸಲಿದೆ. ಹೀಗಾಗಿ ಇದೇ ತಿಂಗಳ ಕೊನೆ ವಾರದಲ್ಲಿ ಸರ್ಕಾರಕ್ಕೆ ಗುಪ್ತದಳವು ವರದಿ ನೀಡಲಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಪರಂಗೆ ಈ ಬಾರಿ ಸಹ ಕಠಿಣ: ಪ್ರಸ್ತುತ ವಿಧಾನಸಭಾ ಚುನಾವಣೆಯು ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಮಾಡು ಇಲ್ಲವೆ ಮಡಿ ಪಂದ್ಯದಂತಾಗಿದೆ. ಚುನಾವಣೆಯನ್ನು ತಮ್ಮ ರಾಜಕೀಯ ಅಸ್ಮಿತೆಯ ಪ್ರಶ್ನೆಯಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿರೋಧಿಗಳ ಪ್ರತಿಯೊಂದು ರಾಜಕೀಯ ನಡೆ ಮೇಲೂ ನಿಗಾವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಜನವರಿ ತಿಂಗಳಾಂತ್ಯಕ್ಕೆ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಾಗಿತ್ತು. ಆಗ ಹಿಂದುಳಿದ ವರ್ಗಗಳು ಪ್ರಬಲವಾಗಿ ಮುಖ್ಯಮಂತ್ರಿ ಗಳ ಬೆನ್ನಿಗೆ ನಿಂತಿದ್ದರೂ ದಲಿತ ಸಮುದಾಯಕ್ಕೆ ಪೂರ್ಣವಾಗಿ ಸರ್ಕಾರದ ಬಗ್ಗೆ ವಿಶ್ವಾಸ ಮೂಡಿರಲಿಲ್ಲ.

ಹೀಗೆ ಅಡ್ಡಗೋಡೆ ಮೇಲೆ ನಿಂತಿರುವ ದಲಿತ ವರ್ಗದ ಮತ ಬ್ಯಾಂಕ್‌ಗೆ ಬಿಜೆಪಿ ಲಗ್ಗೆ ಹಾಕಲು ಯತ್ನಿಸಿತು. ಅದರ ಅಂಗವಾಗಿಯೇ ದಲಿತರ ಮನೆಗಳಲ್ಲಿ ಉಪಾಹಾರ ಕೂಟ ಆಯೋಜಿಸಿತ್ತು. ಇದರಿಂದ ನ್ಯಾ. ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿತ್ತು. 

ಹಾಗೆ ಜೆಡಿಎಸ್ ಬಗ್ಗೆ ಒಕ್ಕಲಿಗರಲ್ಲಿ ಹಾಗೂ ಬಿಜೆಪಿ ಬಗ್ಗೆ ಲಿಂಗಾಯತ-ವೀರಶೈವ ವರ್ಗಗಳಲ್ಲಿ ಹೆಚ್ಚಿನ ಒಲವು ವ್ಯಕ್ತವಾಗಿತ್ತು. ಇದಲ್ಲದೆ ಜೆಡಿಎಸ್ ಪ್ರಾಬಲ್ಯವಿರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಕಡೆ ಒಲವು ತೋರಿದ ಮುಸ್ಲಿಂ ಸಮುದಾಯವು, ಇನ್ನುಳಿದ ಕಡೆ ಕಾಂಗ್ರೆಸ್ ಬಗ್ಗೆ ಒಲವು ಹೊಂದಿದೆ. ಅದಕ್ಕಿಂತಲೂ ಕಳೆದ ಬಾರಿ ಪರಾಜಿತರಾಗಿ ಮುಖ್ಯಮಂತ್ರಿ ಪಟ್ಟದ ಹಕ್ಕುದಾರಿಕೆ ಕಳೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಈ ಬಾರಿ ಸಹ ಕೊರಟಗೆರೆ ಕ್ಷೇತ್ರ ಸುಲಭವಾಗಿಲ್ಲ ಎನ್ನುವ ಸಂಗತಿ ಗೊತ್ತಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈಗ ರಾಜಕೀಯ ಪರಿಸ್ಥಿತಿ ಬದಲಾಗಿದೆ. ಲಿಂಗಾಯತ ಸ್ವತಂತ್ರ ಧರ್ಮದ ಪ್ರಸ್ತಾಪಕ್ಕೆ ಸರ್ಕಾರವು ಅಸ್ತು ಎಂದಿದೆ. ಅದೇ ರೀತಿ ಸದಾಶಿವ ಆಯೋಗದ ವರದಿ ಅಂಗೀಕರಿಸದೆ ದಲಿತ ಸಮುದಾಯದ ಒಲೈಕೆಗೆ ಸರ್ಕಾರ ಯತ್ನಿಸಿದೆ. ಈ ಎಲ್ಲ ಅಂಶ ಆಧರಿಸಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ಗುಪ್ತದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

loader