Asianet Suvarna News Asianet Suvarna News

ಸಿಎಂ - ಡಿಸಿಎಂ ಫೊಟೊ ತೆರವು : ಯಾಕೆ..?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಪೊಟೊಗಳನ್ನು ವಾಲ್ಮೀಕಿ ಸಮಾಜದ ಕಾರ್ಯಕ್ರಮದಲ್ಲಿ ನಡೆಯಿತು. 

CM And DCm Skip Valmiki Jayanti Program
Author
Bengaluru, First Published Oct 25, 2018, 7:17 AM IST
  • Facebook
  • Twitter
  • Whatsapp

ಬೆಂಗಳೂರು :  ರಾಜ್ಯ ಸರ್ಕಾರ ಆಯೋಜಿಸಿದ್ದ ‘ಮಹರ್ಷಿ ವಾಲ್ಮೀಕಿ ಜಯಂತಿ’ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ|ಜಿ.ಪರಮೇಶ್ವರ್ ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಮಾಜದ ಮುಖಂಡರು ವೇದಿಕೆಯಲ್ಲಿದ್ದ ಸಿಎಂ-ಡಿಸಿಎಂ ಫೋಟೋಗಳನ್ನೇ ತೆಗೆಸಿದ ಘಟನೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಗೈರು ಹಾಜರಿಗೆ ವಾಲ್ಮೀಕಿ ಸಮಾಜದ ಮಠಾಧೀಶರು, ಮುಖಂಡರು ವೇದಿಕೆಯಲ್ಲೂ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ರೀತಿ ಮಾಡಿದರೆ ನಾವು ನಮ್ಮ ಸಮಸ್ಯೆ, ಬೇಡಿಕೆ, ಮನವಿಗಳನ್ನು ಯಾರ ಬಳಿ ಹೇಳಿಕೊಳ್ಳುವುದು ಎಂದು ಪ್ರಶ್ನಿಸಿದರು.

ಈ ವರ್ಷದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಲಂಡನ್‌ಗೆ ತೆರಳಬೇಕಿದ್ದರಿಂದ ಬೆಳಗ್ಗೆ ಶಾಸಕರ ಭವನದ ಮುಂಭಾಗದ ವಾಲ್ಮೀಕಿ ತಪೋವನದಲ್ಲಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತೆರಳಿದರು. ಹಾಗಾಗಿ ಅವರೂ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಆಗಮಿಸಲಿಲ್ಲ, ಜೊತೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಹ ಬರಲಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರು ಅನಾರೋಗ್ಯದ ಕಾರಣ ಮುಖ್ಯಮಂತ್ರಿಗಳು ಬರಲಾಗುವುದಿಲ್ಲ ಎಂದು ಸಮುದಾಯದ ಮಠಾಧೀಶರು ಹಾಗೂ ಮುಖಂಡರ ಗಮನಕ್ಕೆ ತಂದರು. 

ಆದರೆ ಉಪಮುಖ್ಯಮಂತ್ರಿಗಳು ಸಹ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂಬ ವಿಷಯ ತಿಳಿದ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮವನ್ನು ಸರ್ಕಾರ ಏಕೆ ಆಯೋಜಿಸಬೇಕಿತ್ತು? ಇದು ನಮ್ಮ ಸಮಾಜಕ್ಕೆ ಹಾಗೂ ವಾಲ್ಮೀಕಿಗೆ ಮಾಡುತ್ತಿರುವ ಅವಮಾನ ಎಂದು ದೂರಿದರಲ್ಲದೆ, ವೇದಿಕೆಯಲ್ಲಿ ವಾಲ್ಮೀಕಿಯ ಫೋಟೋದೊಂದಿಗೆ ಎಲೆಕ್ಟ್ರಾನಿಕ್ ಪರದೆಯಲ್ಲಿ ಹಾಕಲಾಗಿದ್ದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಫೋಟೋ ತೆಗೆಯುವಂತೆ ಒತ್ತಾಯ ಮಾಡಿದರು. ಅದಕ್ಕೆ ಮಣಿದ ಕಾರ್ಯಕ್ರಮ ಆಯೋಜಕರು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಫೋಟೋ ತೆಗೆದು ಮಹರ್ಷಿ ವಾಲ್ಮೀಕಿ ಅವರ ಫೋಟೋ ಮಾತ್ರ ಸ್ಕ್ರೀನ್ ಮೇಲೆ ಬರುವಂತೆ ಮಾಡಿದರು.

ನಂತರ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹರಿಹರ ರಾಜನಹಳ್ಳಿಯ ವಾಲ್ಮೀಕಿಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೇಯರ್ ಗಂಗಾಂಬಿಕೆ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಶಾಸಕ ಕೆ.ಗೋಪಾಲಯ್ಯ, ವಿಧಾನ ಪರಿಷತ್ ಸದಸ್ಯರಾದ ವೇಣುಗೋಪಾಲ್, ಅರವಿಂದ ಕುಮಾರ್, ಕೆಪಿಎಸ್‌ಸಿ ಮಾಜಿ ಸದಸ್ಯೆ ಮಂಗಳಾ ಶ್ರೀಧರ್, ಬಿಬಿಎಂಪಿ ಸದಸ್ಯರಾದ ನರಸಿಂಹನಾಯಕ, ನೇತ್ರಾ ಪಲ್ಲವಿ, ಬೇಡರ ಕಣ್ಣಪ್ಪ ದೇವಾಲಯದ ಟ್ರಸ್ಟ್ ಅಧ್ಯಕ್ಷ ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಕೂಡ ಬ್ಯಾಂಕ್ವೆಟ್ ಹಾಲ್‌ನ ಹೊರಗೆ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ವಾಗ್ವಾದಕ್ಕಿಳಿದ ಸಮುದಾಯದ ಕೆಲ ಮುಖಂಡರು,  ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಕಾರ್ಯಕ್ರಮಕ್ಕೆ ಹಾಜರಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.

Follow Us:
Download App:
  • android
  • ios